Advertisement

ಹಾಮೂಲ್‌ನಿಂದ ಹಾಲು ಖರೀದಿ ದರ 29 ರೂ.ಗೆ ಏರಿಕೆ

09:35 PM Jan 01, 2020 | Lakshmi GovindaRaj |

ಹಾಸನ: ಎರಡು ವಾರಗಳ ಹಿಂದಷ್ಟೇ ಹಾಲು ಖರೀದಿ ದರವನ್ನು ಲೀಟರ್‌ಗೆ ಒಂದು ರೂ. ಹೆಚ್ಚಳ ಮಾಡಿದ್ದ ಹಾಸನ ಹಾಲು ಒಕ್ಕೂಟವು (ಹಾಮೂಲ್‌) ಮತ್ತೆ ತಕ್ಷಣದಿಂದಲೇ ಹಾಲು ಖರೀದಿ ದರವನ್ನು ಲೀಟರ್‌ಗೆ 1.50 ರೂ. ಹೆಚ್ಚಳ ಮಾಡಿ ಹಾಲು ಉತ್ಪಾದಕರಿಗೆ ಹೊಸ ವರ್ಷಕ್ಕೆ ಭರ್ಜರಿ ಉಡುಗೊರೆ ನೀಡಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಹಾಲು ಖರೀದಿ ದರ ಹೆಚ್ಚಳದ ವಿವರ ನೀಡಿದ ಒಕ್ಕೂಟದ ಅಧ್ಯಕ್ಷ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು, ಈಗ ಹಾಸನ ಹಾಲು ಒಕ್ಕೂಟವು ಪ್ರತಿ ಲೀಟರ್‌ಗೆ ಹಾಲಿಗೆ 29 ರೂ. ದರವನ್ನು ಹಾಲು ಉತ್ಪಾದಕರಿಗೆ ನೀಡುವ ಮೂಲಕ ರಾಜ್ಯದಲ್ಲಿಯೇ ಅತಿ ಹೆಚ್ಚು ಹಾಲಿನ ದರ ನೀಡುತ್ತಿದೆ ಎಂದು ತಿಳಿಸಿದರು.

40 ಕೋಟಿ ರೂ. ಲಾಭ ಗಳಿಸುವ ನಿರೀಕ್ಷೆ: ಮುಂದಿನ ಮಾರ್ಚ್‌ ಅಂತ್ಯಕ್ಕೆ ಹಾಸನ ಹಾಲು ಒಕ್ಕೂಟವು 40 ಕೋಟಿ ರೂ. ಲಾಭ ಗಳಿಸುವ ನಿರೀಕ್ಷೆಯಿದೆ. ಈ ಹಿನ್ನಲೆಯಲ್ಲಿ ಲಾಭಾಂಶವನ್ನು ಹಾಲು ಉತ್ಪಾದಕರಿಗೇ ಹಂಚಲು ನಿರ್ಧರಿಸಿದೆ. ಮಾರ್ಚ್‌ ಅಂತ್ಯದವರೆಗೂ ಪ್ರತಿ ಲೀಟರ್‌ಗೆ 29 ರೂ. ನೀಡುವುದರಿಂದ 25 ಕೋಟಿ ರೂ. ಹೆಚ್ಚುವರಿಯಾಗಿ ಹಾಲು ಉತ್ಪಾದಕರಿಗೆ ಪಾವತಿ ಮಾಡಿದಂತಾಗುತ್ತದೆ. ಆದರೂ ಈ ಆರ್ಥಿಕ ವರ್ಷಾಂತ್ಯಕ್ಕೆ ಅಂದರೆ ಮಾರ್ಚ್‌ ಅಂತ್ಯದ ವೇಳೆಗೆ ಒಕ್ಕೂಟವು 15 ಕೋಟಿ ರೂ. ನಿವ್ವಳ ಲಾಭ ಪಡೆಯಲಿದೆ ಎಂದರು.

ವಾರ್ಷಿಕ 1,500 ಕೋಟಿ ರೂ. ವಹಿವಾಟು: ಹಾಸನ ಹಾಲು ಒಕ್ಕೂಟವು ಈಗ ಪ್ರತಿದಿನ ಸುಮಾರು 9 ಲಕ್ಷ ಲೀಟರ್‌ ಹಾಲು ಸಂಗ್ರಹಿಸುತ್ತಿದ್ದು, ಅದರಲ್ಲಿ 1.50 ಲಕ್ಷ ಲೀಟರ್‌ನ್ನು ಮಾತ್ರ ಸಂಸ್ಕರಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ. ಇನ್ನುಳಿದ 7.50 ಲಕ್ಷ ಲೀಟರ್‌ನ್ನು ಹಾಲಿನ ವಿವಿಧ ಉತ್ಪನ್ನಗಳಿಗೆ ಪರಿವರ್ತನೆ ಮಾಡಲಾಗುತ್ತಿದೆ. ಯುಎಚ್‌ಟಿ ಹಾಲು, ಹಾಲಿನಪುಡಿ, ಬೆಣ್ಣೆ, ತುಪ್ಪ, ಐಸ್‌ಕ್ರೀಂ ಮತ್ತಿತರ ಉತ್ಪನ್ನಗಳಿಗೆ ಪರಿವರ್ತನೆ ಮಾಡುವುದರಿಂದ ವೆಚ್ಚ ಅಧಿಕ. ಆದರೂ ಹಾಸನ ಹಾಲು ಒಕ್ಕೂಟವು ಲಾಭದಲ್ಲಿ ನಡೆಯುತ್ತಿದ್ದು, ವಾರ್ಷಿಕ 1,500 ಕೋಟಿ ರೂ. ವಹಿವಾಟು ನಡೆಸುತ್ತಿದೆ ಎಂದರು ತಿಳಿಸಿದರು.

ಕಲ್ಯಾಣ ಕಾರ್ಯಕ್ರಮಗಳು: ಹಾಲು ಉತ್ಪಾದಕರಿಗೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನೂ ಹಾಸನ ಹಾಲು ಒಕ್ಕೂಟವು ಹಮ್ಮಿಕೊಂಂಡಿದೆ. 30 ಸಾವಿರ ಹಾಲು ಉತ್ಪಾದಕರಿಗೆ ವಿಮೆ, 50 ಸಾವಿರ ಹೈನು ರಾಸುಗಳನ್ನು ವಿಮೆಗೆ ಒಳಪಡಿಸುತ್ತಿದ್ದು, ವಿಮಾ ಕಂತಿನ ಶೇ.60 ರಷ್ಟನ್ನು ಹಾಲು ಒಕ್ಕೂಟವೇ ಭರಿಸಲಿದ್ದು, ಫ‌ಲಾನುಭವಿ ಶೇ.40 ರಷ್ಟು ಕಂತು ಪಾವತಿ ಮಾಡುವ ಕಾರ್ಯಕ್ರಮ ರೂಪಿಸಿದೆ. ಹಾಲು ಉತ್ಪಾದಕರು ಅಕಾಲಿಕ ಮರಣಕ್ಕೆ ತುತ್ತಾದರೆ 2 ಲಕ್ಷ ರೂ. ಹೈನು ರಾಸು ಸಾವನ್ನಪ್ಪಿದರೆ 50 ಸಾವಿರ ರೂ. ವಿಮೆ ಮೊತ್ತ ಸಿಗಲಿದೆ. ಈ ಕಾರ್ಯಕ್ರಮಕ್ಕೆ ಹಾಸನ ಹಾಲು ಒಕ್ಕೂಟವು ವಾರ್ಷಿಕ 4 ಕೋಟಿ ರೂ. ಅನುದಾನ ನೀಡುತ್ತದೆ ಎಂದು ರೇವಣ್ಣ ವಿವರಿಸಿದರು. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಅವರೂ ಉಪಸ್ಥಿತರಿದ್ದರು.

Advertisement

ರಾಜ್ಯದ ವಿವಿಧ ಹಾಲು ಒಕ್ಕೂಟಗಳು ನಿಗದಿಪಡಿಸಿರುವ ಹಾಲು ಖರೀದಿ ದರದ ವಿವರ
ಕ್ರ.ಸಂ. ಒಕ್ಕೂಟಗಳು ಒಕ್ಕೂಟದಿಂದ ಸಂಘಕ್ಕೆ ಹಾಲು ಉತ್ಪಾದಕರಿಗೆ
1. ಹಾಸನ 31.79 ರೂ. 29.00 ರೂ.
2. ಬೆಂಗಳೂರು 29.30 ರೂ. 28.00 ರೂ.
3. ಕೋಲಾರ 27.00 ರೂ. 25.00 ರೂ.
4. ಮೈಸೂರು 27.65 ರೂ. 25.50 ರೂ.
5. ಮಂಡ್ಯ 29.40 ರೂ. 28.50 ರೂ.
6. ತುಮಕೂರು 26.73 ರೂ. 26.00 ರೂ.
7. ಶಿವಮೊಗ್ಗ 30.50 ರೂ. 28.50 ರೂ.
8. ದಕ್ಷಿಣ ಕನ್ನಡ 29.57 ರೂ. 28.67 ರೂ.
9 ಧಾರವಾಡ 24.35 ರೂ 23.25 ರೂ.
10 ಬೆಳಗಾವಿ 25.50 ರೂ. 24.00 ರೂ.
11. ವಿಜಯಪುರ 26.15 ರೂ. 24.00 ರೂ.
12 ಬಳ್ಳಾರಿ 25.70 ರೂ. 23.50 ರೂ.
13. ಕಲಬುರ್ಗಿ 25.30 ರೂ 24.60 ರೂ.
14 ಚಾಮರಾಜನಗರ 27.65 ರೂ. 25.50 ರೂ.

ದಕ್ಷಿಣ ಭಾರತದ ಮೊದಲ ಪೆಟ್‌ ಬಾಟಲ್‌ ಘಟಕ ನಿರ್ಮಾಣ
ಹಾಸನ: ಯುಎಚ್‌ಟಿ ಹಾಲಿನ ಉತ್ಪಾದನಾ ಘಟಕವನ್ನು ಹಾಸನ ಡೇರಿ ವಿಸ್ತರಿಸಿದ್ದು, ಪ್ರತಿ ದಿನ 2 ಲಕ್ಷ ಲೀಟರ್‌ನಿಂದ 4 ಲಕ್ಷ ಲೀಟರ್‌ ಯುಎಚ್‌ಟಿ ಹಾಲು ಸಂಸ್ಕರಣಾ ಘಟಕವು ಗುರುವಾರದಿಂದ ಕಾರ್ಯಾರಂಭ ಮಾಡಲಿದೆ. 6 ತಿಂಗಳವರೆಗೂ ಹಾಳಾಗದಂತೆ ಸಂಸ್ಕರಿಸಿ ಟೆಟ್ರಾಪ್ಯಾಕ್‌ಗಳಲ್ಲಿ ಹಾಲನ್ನು ಮಾರಾಟ ಮಾಡುವ ಯುಎಚ್‌ಟಿ ವಿಸ್ತರಣಾ ಘಟಕಕ್ಕೆ 100 ಕೋಟಿ ರೂ ವೆಚ್ಚವಾಗಿದ್ದು, ಉತ್ತರದ ಜಮ್ಮು – ಕಾಶ್ಮೀರ, ಈಶಾನ್ಯರಾಜ್ಯಗಳು ಹಾಗೂ ಭಾರತೀಯ ಸೈನ್ಯಕ್ಕೂ ಹಾಸನ ಹಾಲು ಒಕ್ಕೂಟವು ಯುಎಚ್‌ಟಿ ಹಾಲನ್ನು ಪೂರೈಸಲಿದೆ.

ಹಾಸನ ಹಾಲು ಒಕ್ಕೂಟ ಪ್ರಾರಂಭಿಸಿರುವ ಐಸ್‌ಕ್ರೀಂ ಗೆ ಭಾರೀ ಬೇಡಿಕೆ ಇದೆ. ಇದರಿಂದ ಉತ್ತೇಜಿತವಾಗಿರುವ ಒಕ್ಕೂಟವು ಹೊಸ, ಹೊಸ ಉತ್ಪನ್ನಗಳ ಘಟಕಗಳ ಪ್ರಾರಂಭಿಸುತ್ತಿದ್ದು, 150 ಕೋಟ ರೂ. ವೆಚ್ಚದ ಸುವಾಸಿತ ಹಾಲು ತಯಾರಿಕೆಯ ಪೆಟ್‌ ಬಾಟಲ್‌ ಘಟಕವನ್ನೂ ನಿರ್ಮಿಸಿದ್ದು, ಹೊಸ ಘಟಕವು ಏಪ್ರಿಲ್‌ ಮೊದಲ ವಾರದಿಂದ ಕಾರ್ಯಾರಂಭ ಮಾಡಲಿದೆ. ಜರ್ಮನ್‌ ತಂತ್ರಜ್ಞಾನದ ಪೆಟ್‌ಬಾಟಲ್‌ ಘಟಕವು ಗಂಟೆಗೆ 30 ಸಾವಿರ ಬಾಟಲ್‌ಗ‌ಳನ್ನು ಉತ್ಪಾದಿಸಲಿದೆ ಎಂದರು.

ರಾಷ್ಟ್ರದ 3 ನೇ ಹಾಗೂ ದಕ್ಷಿಣ ಭಾರತದ ಮೊದಲ ಪೆಟ್‌ಬಾಟಲ್‌ ಘಟಕ ಸ್ಥಾಪನೆಯ ಹೆಗ್ಗಳಿಕೆಯ ಹಾಸನ ಹಾಲು ಒಕ್ಕೂಟವು ಗುಜರಾತ್‌ನ ಆನಂದ್‌ನಲ್ಲಿರುವ 2 ಪೆಟ್‌ಬಾಟಲ್‌ ಘಟಕಗಳಿಗಿಂತ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿದ ಪೆಟ್‌ ಬಾಟಲ್‌ ಘಟಕ ನಿರ್ಮಿಸಿದ್ದು, ಪ್ರಾರಂಭದಲ್ಲಿ 200 ಮಿ.ಲೀ. ಮತ್ತು ಒಂದು ಲೀಟರ್‌ನ ಬಾಟಲ್‌ಗ‌ಳ ವಿವಿಧ ಸ್ವಾದದ ಸುವಾಸಿತ ಹಾಲು ಉತ್ಪಾದಿಸಿ ಮಾರುಕಟ್ಟೆಗೆ ಬಿಡಲು ಸಿದ್ಧತೆ ಆರಂಭಿಸಿದೆ ಎಂದು ಒಕ್ಕೂಟದ ಅಧ್ಯಕ್ಷ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಅವರೂ ಹಾಜರಿದ್ದರು.

ಜಿಲ್ಲಾ ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿ ಕೌಶಿಕದ ಬಳಿ 53 ಎಕರೆಯಲ್ಲಿ ಮೆಗಾಡೇರಿ ನಿರ್ಮಾಣವೂ ಏಪ್ರಿಲ್‌ ನಂತರ ಆರಂಭವಾಗಲಿದೆ. 504 ಕೋಟಿ ರೂ. ವೆಚ್ಚದಲ್ಲಿ ಮೆಗಾಡೇರಿ ನಿರ್ಮಾಣದ ಯೋಜನೆ ತಯಾರಾಗಿದೆ ಎಂದು ವಿವರ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next