Advertisement

ಹಾಲು ಉತ್ಪಾದನಾ ಮೇಕೆ ಘಟಕ ಕಾಮಗಾರಿ ಅಪೂರ್ಣಕ್ಕೆ ಆಕ್ಷೇಪ

11:53 PM Sep 14, 2019 | sudhir |

ಸೋಮವಾರಪೇಟೆ: ತಾಲೂಕಿನ ಮದಲಾಪುರ ಹಾಲು ಉತ್ಪಾದನಾ ಮೇಕೆ ಘಟಕ ಮೂರು ವರ್ಷದ ಹಿಂದೆಯೇ ಪ್ರಾರಂಭಗೊಂಡಿದ್ದು,ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇಲ್ಲಿನ ಕಾಮಗಾರಿ ಕೂಡ ಗುಣಮಟ್ಟದಿಂದ ಕೂಡಿಲ್ಲ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷರು ಆರೋಪಿಸಿದರು.

Advertisement

ಇಲ್ಲಿನ ತಾಲೂಕು ಪಂಚಾಯಿತಿಯ ಪ್ರಗತಿ ಪರಿಶೀಲನೆ ಸಭೆ ಗುರುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷರಾದ ಪುಷ್ಪರಾಜೇಶ್‌ ಅಧ್ಯಕ್ಷತೆಯಲ್ಲಿ ನಡೆಯಿತು. ಮದ‌ಲಾಪುರದಲ್ಲಿ ಮೇಕೆ ಹಾಲು ಉತ್ಪಾದನ ಘಟಕಕ್ಕೆ 2016-17 ರಲ್ಲಿ ಚಾಲನೆ ನೀಡಲಾಗಿದೆ .ಸುಮಾರು 112 ಎಕರೆ ವಿಸ್ತೀರ್ಣವನ್ನು ಹೊಂದಿದ್ದು ಸುತ್ತಲೂ ಬೇಲಿ ಹಾಕಲಾಗಿದೆ. ಇಲ್ಲಿ ಕಾಮಗಾರಿ ನಡೆಸುತ್ತಿರುವ ಮಡಿಕೇರಿಯ ಪಂಚಾಯತ್‌ ರಾಜ್‌ ಇಂಜಿನೀಯರಿಂಗ್‌ ವಿಭಾಗ ಯಾವುದೇ ಮಾಹಿತಿ ನೀಡಿಲ್ಲ ಎಂದು ಉಪಾಧ್ಯಕ್ಷ ಎಂ.ಬಿ ಅಭಿಮನ್ಯುಕುಮಾರ್‌ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ‌ರಾದ ಬದಾಮಿ ಮಾತನಾಡಿ, 2017-18 ರಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ, ಶೇ 80ರಷ್ಟು ಕಾಮಗಾರಿ ಮಗಿದಿದೆ. ಒಟ್ಟು 50 ರಿಂದ 60 ಎಕರೆ ಜಾಗದಲ್ಲಿ ಮೇಕೆಗಳಿಗೆ ಮೇವು ಬೆಳೆಯಲು ಸ್ಥಳಾವಕಾಶ ಇದೆ. ಸುಮಾರು 200 ಹೆಣ್ಣು ಮತ್ತು 8 ಗಂಡು ಮೇಕೆಗಳನ್ನು ಘಟಕದಲ್ಲಿ ಪೋಷಣೆ ಮಾಡಲಾಗುವುದು ಎಂದು ಹೇಳಿದರು.

ಕುಡಿಯುವ ನೀರು ಸರಬರಾಜು ಯೋಜನೆ ಇಲಾಖೆ ಮತ್ತು ಸೆಸ್ಕ್ ಇಲಾಖೆಯ ನಡುವೆ ಕಾಮಗಾರಿಗೆ ಸಂಬಂಧಿಸಿದಂತೆ ಸಮನ್ವಯತೆ ಇಲ್ಲ.ಮಾಹಿತಿ ಕೊರತೆ ಇರುವುದರಿಂದ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಗ್ರಾಮೀಣ ಭಾಗದ ಜನರು ಮಳೆಗಾಲದಲ್ಲಿ ಕುಡಿಯುವ ನೀರಿಗೆ ಪರಿತಪಿಸುತ್ತಿದ್ದಾರೆ ಎಂದು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸಭೆಗೆ ತಿಳಿಸಿದರು ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕವಾಗಿ ಆಹಾರ ಸರಬರಾಜು ಆಗುತ್ತಿಲ್ಲ. ಗುಮ್ಮನಕೊಲ್ಲಿ ಅಂಗನವಾಡಿ ಕೇಂದ್ರದಲ್ಲಿ 6 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಆದರೆ ದಾಖಲು ಪುಸ್ತಕದಲ್ಲಿ 21 ವಿದ್ಯಾರ್ಥಿಗಳು ಎಂದು ನಮೂದಿಸಲಾಗಿದೆ. ಪ್ರಭಾರ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರು ವೈದ್ಯರು ಜನಪ್ರತಿನಿಧಿಗಳು ಹಾಗೂ ಜನಸಾಮಾನ್ಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ.ತತ್‌ಕ್ಷಣವೇ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲು ಮೇಲಧಿಕಾರಿಗಳಿಗೆ ಪತ್ರ ಬರೆಯುವಂತೆ ಆರೋಗ್ಯಾಧಿಕಾರಿಗೆ ಉಪಾಧ್ಯಕ್ಷರು ಸೂಚಿಸಿದರು. ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಣಧಿಕಾರಿ ಸುನೀಲ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next