Advertisement

ಯುವ ಮನ ಗೆದ್ದ ಮಿಲಿಟರಿ ದಿರಿಸು

08:38 AM May 31, 2019 | mahesh |

ಮೊದಲು ನಾವು ಯೋಧರನ್ನು ನೆನೆದಾಗ ಕಣ್ಣೆದುರು ಬರುವುದು ಸಮವಸ್ತ್ರದಲ್ಲಿ ನಿಂತ ಅವರ ಗಾಂಭೀರ್ಯದ ಮುಖ. ಅವರ ಶಿಸ್ತಿಗೆ ಯುನಿಫಾರ್ಮ್ ಕೂಡ ಕಾರಣವೇನೋ ಅನಿಸೋಕೆ ಶುರುವಾಗುತ್ತದೆ. ಅದರ ಗತ್ತು ಅಂತದ್ದು. ಎಲ್ಲರನ್ನೂ ಸೆಳೆಯುವುದರೊಂದಿಗೆ ಹೆಮ್ಮೆಯನ್ನೂ ಮೂಡಿಸುವ ಏಕೈಕ ದಿರಿಸಿದು. ಇದೇ ದಿರಿಸು ಇದೀಗ ಫ್ಯಾಶನ್‌ ಲೋಕದಲ್ಲಿ ಛಾಪು ಮೂಡಿಸುತ್ತಿದೆ.

Advertisement

ಪ್ರಪಂಚ ದಿನಾ ಹೊಸತನವನ್ನು ಬಯಸುತ್ತದೆ. ಇದು ಫ್ಯಾಶನ್‌ ಲೋಕದಲ್ಲಂತೂ ಇನ್ನೂ ವೇಗ ಪಡೆದಿದೆ. ಇಂದಿದ್ದ ಅಭಿರುಚಿ ನಾಳೆ ಇರುತ್ತೆ ಎಂದು ಹೇಳಲಾಗದು. ಹೀಗಾಗಿ ಮಾರುಕಟ್ಟೆಯಲ್ಲಿ ಸ್ಥಿರವಾಗಿರಲು ಹೊಸ ಹೊಸ ತಂತ್ರಗಳನ್ನು ಡಿಸೈನರ್‌ಗಳು ಹೆಣೆಯುತ್ತಲೇ ಇರುತ್ತಾರೆ. ಏರ್‌ಸ್ಟ್ರೈಕ್‌ ಅನಂತರವಂತೂ ಮಿಲಿಟರಿ ದಿರಿಸನ್ನು ಯುವ ಜನಾಂಗ ಅಕ್ಷರಶಃ ಅಪ್ಪಿಕೊಂಡಿದೆ ಎಂದರೆ ಸುಳ್ಳಲ್ಲ. ನಮ್ಮ ನೆಚ್ಚಿನ ನಾಯಕ ನಟನೋ, ಕ್ರಿಕೆಟ್ ಆಟಗಾರನೋ ಹಾಕಿದ ಉಡುಪು ಬೇಗನೇ ಜನರನ್ನು ಸೆಳೆದು ಬಿಡುತ್ತದೆ. ಆದರೆ ಈಗಿನ ಯುವ ಜನತೆ ಮುಗಿಬಿದ್ದಿರುವುದು ಮಿಲಿಟರಿ ಟ್ರೆಂಡಿಗೆ ಅಂದರೆ ಅಚ್ಚರಿ ಪಡಬೇಕಾಗಿಲ್ಲ. ಯೋಧನಾಗುವ ಕನಸು ಹೊತ್ತವರು, ಯೋಧರನ್ನು ಗೌರವಿಸುವವರ ಪ್ರೀತಿ ಈ ದಿರಿಸಿಗೆ ಸಿಗಲಾರಂಭಿಸಿದೆ.

ಟಿ ಶರ್ಟ್‌
ಪೂರ್ತಿ ತೋಳು, ಅರ್ಧ ತೋಳು ಮತ್ತು ತೋಳಿಲ್ಲದ ವಿನ್ಯಾಸಗಳ ಮಿಲಿಟರಿ ಟಿಶರ್ಟ್‌ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಮುಂಜಾನೆ ಜಾಗಿಂಗ್‌ ಅಥವಾ ಆಡುವಾಗ ಇವುಗಳನ್ನು ಧರಿಸಿ ಖುಷಿ ಪಡಬಹುದು. ಇವುಗಳು ಸೂರ್ಯನ ಬೆಳಕನ್ನು ಬೇಗನೆ ಹೀರಿಕೊಳ್ಳದೇ ಇರುವುದರಿಂದ ದೇಹ ಬೇಗನೆ ಬೆವರದೆ ತಂಪಾಗಿರುತ್ತದೆ.

ಶರ್ಟ್‌ಗಳು
ಈ ಮಾದರಿಯ ಶರ್ಟ್‌ಗಳು ವಿವಿಧ ಬಣ್ಣಗಳಲ್ಲಿ ಲಭಿಸುತ್ತದೆ. ಮಾಮೂಲಿಯಾಗಿ ಬಟನ್‌ಗಳು ದೊಡ್ಡದಿರುವ ಇಂತಹ ಶರ್ಟ್‌ಗಳಲ್ಲಿ ಮಿಲಿಟರಿ ಬ್ಯಾಜ್‌ಗಳ ವಿನ್ಯಾಸಗಳು ಸಾಮಾನ್ಯ. ಇದು ಖಡಕ್‌ ಲುಕ್‌ ನೀಡುವುದರೊಂದಿಗೆ ಎಲ್ಲರಿಗೂ ಹಿಡಿಸುವಂತಿರುತ್ತದೆ.

ಬ್ಲ್ಯಾಕ್‌ ಜೀನ್ಸೇ ಇರಲಿ, ಬ್ಲು ಜೀನ್ಸೇ ಇರಲಿ, ಇಲ್ಲ ಫಾರ್ಮಲ್ ಫ್ಯಾಂಟ್‌ಗಳೇ ಇರಲಿ. ಈ ಮಿಲಿಟರಿ ದಿರಿಸುಗಳು ಅದಕ್ಕೆ ನಿಸ್ಸಂದೇಹವಾಗಿ ಹೊಂದಿಕೆಯಾಗುತ್ತದೆ. ಮಿಲಿಟರಿ ಉಡುಪು ಸಂಪೂರ್ಣ ಮಿಲಿಟರಿ ಮಾದ‌ರಿಯ ಉಡುಪಲ್ಲ. ಕೇವಲ ಬಣ್ಣ ಮತ್ತು ಅದರ ಡಿಸೈನ್‌ಗಳಲ್ಲಿ ಸ್ವಲ್ಪ ಮಿಲಿಟರಿ ಡ್ರೆಸ್‌ಗೆ ಹೋಲಿಕೆಯಿರುವ ದಿರಿಸು. ಸರ್ವಕಾಲಕ್ಕೂ ಸೂಕ್ತವಾಗುವ ಈ ದಿರಿಸು ಇಂದು ಮಾರುಕಟ್ಟೆಯಲ್ಲಿ ಟ್ರೆಂಡ್‌ ಆಗಿ ಬದಲಾಗುತ್ತಿದೆ.

ಮಿಲಿಟರಿ ಜಾಕೆಟ್
ಇವುಗಳು ಅತ್ಯಂತ ಆರಾಮದಾಯಕ ದಿರಿಸಾಗಿರುವುದರಿಂದ ಸರ್ವಋತುವಿಗೂ ಸೂಕ್ತ. ಬಿಸಿಲ ರಕ್ಷಣೆಗೆ ಕ್ಯಾಪ್‌ ಇರುವಂತಹ ಜಾಕೆಟ್‌ಗಳೂ ಮಾರುಕಟ್ಟೆಯಲ್ಲಿ ಲಭ್ಯ. ಟಿ ಶರ್ಟ್‌ಗೆ ಈ ಮಿಲಿಟರಿ ಜಾಕೆಟ್ ತೊಟ್ಟರೆ ಸಾಮಾನ್ಯ ಉಡುಪಿಗೂ ಮೆರುಗು ಬರುವುದರಲ್ಲಿ ಅನುಮಾನವಿಲ್ಲ.
ಇಷ್ಟಪಡಲು 5 ಕಾರಣ
1 ಎಲ್ಲ ಕಾಲಕ್ಕೂ ಸೂಕ್ತವಾಗಿರುತ್ತದೆ.
2 ಇವುಗಳ ಬಣ್ಣ ಹೋಗುವುದಿಲ್ಲ. ಹೋದರೂ ಅಡ್ಡಿ ಇಲ್ಲ.
3 ವಾಷ್‌ ಮಾಡಿ ಆದ ಮೇಲೂ ಕಲೆಗಳುಳಿದರೂ ಉಡುಪಿನ ಅಂದಗೆಡುವುದಿಲ್ಲ.
4 ಎಲ್ಲ ಬಣ್ಣಗಳ ಪ್ಯಾಂಟ್‌ಗಳಿಗೂ ಸುಲಭವಾಗಿ ಹೊಂದಿಕೆಯಾಗುತ್ತದೆ.
5 ಪ್ಯಾಂಟ್‌ಗಳೊಂದಿಗೆ ಮ್ಯಾಚಿಂಗ್‌ ಸುಲಭ
Advertisement

– ಹಿರಣ್ಮಯಿ

 

Advertisement

Udayavani is now on Telegram. Click here to join our channel and stay updated with the latest news.

Next