Advertisement

ಸೇನೆ ಕೆಲಸದ ನೆಪದಲ್ಲಿ ವಂಚಿಸುತ್ತಿದ್ದ ಮಹಿಳೆ ಸೆರೆ

12:11 PM Aug 12, 2018 | |

ಬೆಂಗಳೂರು: ಸೇನೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹತ್ತಾರು ಮಂದಿಗೆ ಲಕ್ಷಾಂತರ ರೂ. ವಂಚಿಸಿದ ಮಹಿಳೆ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹೆಬ್ಟಾಳದ ಕೃಷ್ಣರಾಜನ್‌ (63), ಕೆಜಿಎಫ್ ಮೂಲದ ಸುಜಾತಾ (43) ಬಂಧಿತರು.

Advertisement

ಜ್ಯೋತಿಲಕ್ಷಿ ಮತ್ತು ಮೆಹಬೂಬ್‌ ಪಾಷಾ ಎಂಬ ಆರೋಪಿಗಳು ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ. ಆರೋಪಿಗಳಿಂದ ನಕಲಿ ಜಾಬ್‌ ಕಾರ್ಡ್‌, ಉದ್ಯೋಗ ಪ್ರಮಾಣಪತ್ರ, ಅಡ್ಮಿಟ್‌ ಕಾರ್ಡ್‌, ವೈದ್ಯಕೀಯ ತಪಾಸಣೆ ಪತ್ರ ಸೇರಿ ಹಲವು ದಾಖಲೆ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃಷ್ಣರಾಜನ್‌ ಈ ಮೊದಲು ಮೆಕ್ಯಾನಿಕ್‌ ಆಗಿದ್ದು, ಅನಾರೋಗ್ಯ ಕಾರಣ 8 ವರ್ಷಗಳಿಂದ ನಿವೇಶನ- ಮನೆ ಕೊಡಿಸುವ ಮಧ್ಯವರ್ತಿ ಕೆಲಸ ಮಾಡುತ್ತಿದ್ದ. ಉದ್ಯೋಗ ಕೊಡಿಸುವುದಾಗಿ ಹೇಳಿ ವಂಚಿಸುವುದೇ ಸುಜಾತಾಳ ಕೆಲಸವಾಗಿತ್ತು.

ಬೆಂಗಳೂರಿನ ರೈಲು ನಿಲ್ದಾಣ, ಬಸ್‌ ನಿಲ್ದಾಣ ಸೇರಿ ಹಲವೆಡೆ ಅಪರಿಚಿತರನ್ನು ಪರಿಚಯಿಸಿಕೊಳ್ಳುತ್ತಿದ್ದ ಸುಜಾತಾ, ನಂತರ ಕುಟುಂಬದ ಮಾಹಿತಿ ಸಂಗ್ರಹಿಸಿ ಸೇನೆ, ಚಾಲಕ, ತಾಂತ್ರಿಕ ಹುದ್ದೆ ಕೊಡಿಸುವುದಾಗಿ ನಂಬಿಸಿ, ಒಂದು ಹುದ್ದೆಗೆ 2 ಲಕ್ಷ ರೂ. ಬೇಡಿಕೆ ಇಡುತ್ತಿದ್ದಳು. ಈಕೆಯನ್ನು ನಂಬಿದ ಅಭ್ಯರ್ಥಿಗಳಿಂದ ಮುಂಗಡ 40 ಸಾವಿರ ರೂ. ಕೀಳುತ್ತಿದ್ದಳು.

ನಕಲಿ ವೈದ್ಯಕೀಯ ಪ್ರಮಾಣ ಪತ್ರ: ಹಣ ಪಡೆದ ಬಳಿಕ ಯುವಕರಿಂದ ಮೂಲ ದಾಖಲೆಗಳನ್ನು ಪಡೆದು, ವೈದ್ಯಕೀಯ ತಪಾಸಣೆಗೆ ಎಂದು ಮೆಹೆಬೂಬ್‌ ಪಾಷಾನ ಜತೆ ಊಟಿ, ಜಬಲ್‌ಪುರ ಹಾಗೂ ಇತರೆಡೆ ಕೆರೆದೊಯ್ದು ಅಲ್ಲಿನ ಜನರಲ್‌ ಆಸ್ಪತ್ರೆಯ ವೈದ್ಯರಿಗೆ ಲಂಚ ಕೊಟ್ಟು ನಕಲಿ ವೈದ್ಯಕೀಯ ಪರೀಕ್ಷೆ ನಡೆಸುತ್ತಿದ್ದಳು.

Advertisement

ಜತೆಗೆ ಉಳಿದುಕೊಂಡಿದ್ದ ಹೋಟೆಲ್‌ಗೆ ಸೇನೆಯ ಸಮವಸ್ತ್ರ ಧರಿಸಿದವರನ್ನು ಕರೆಸಿ, ಸೇನೆಯ ಅಧಿಕಾರಿ ಎಂದು ಪರಿಚಯಿಸಿ, ಕೆಲ ಪರೀಕ್ಷೆ ನಡೆಸಿ ಬೆಂಗಳೂರಿಗೆ ವಾಪಸ್‌ ಕಳಿಸುತ್ತಿದ್ದಳು. ಕೆಲ ದಿನಗಳ ನಂತರ ಅಭ್ಯರ್ಥಿಗಳಿಗೆ ನಕಲಿ ಉದ್ಯೋಗ ಪ್ರಮಾಣ ಪತ್ರ ಕೊಟ್ಟು ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಳ್ಳುತ್ತಿದ್ದಳು. ಪ್ರತಿ ಅಭ್ಯರ್ಥಿ ಬಳಿ ವ್ಯವಹರಿಸುವಾಗ ಹೊಸ ಸಿಮ್‌ಕಾರ್ಡ್‌ ಬಳಸುತ್ತಿದ್ದಳು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಜೈಲು ಸೇರಿದ್ದ ಸುಜಾತಾ: ಸೇನೆ ಉದ್ಯೋಗ ಕೊಡಿಸುವುದಾಗಿ ವಂಚಿಸಿದ ಆರೋಪದಲ್ಲಿ 2013ರಲ್ಲಿ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಸುಜಾತಾ ಜೈಲು ಸೇರಿದ್ದಳು. ಬಿಡುಗಡೆಯಾಗಿ ಬಂದು ಮತ್ತೆ ಅದೇ ಕೃತ್ಯದಲ್ಲಿ ತೊಡಗಿದ್ದಳು. ಇಂಗ್ಲಿಷ್‌, ಹಿಂದಿ, ಕನ್ನಡ, ತಮಿಳು, ತೆಲುಗು ಸೇರಿ ಹಲವು ಭಾಷೆಗಳನ್ನು ಸಲಲಿತವಾಗಿ ಮಾತನಾಡಿ ಅಭ್ಯರ್ಥಿಗಳನ್ನು ವಂಚಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ತೆ ಹೇಗೆ?: ಆರೋಪಿ ಕೃಷ್ಣರಾಜನ್‌ ಪುತ್ರ ಮುತ್ತು, ಬಿಕಾಂ ಪದವೀಧರ ದೀಪುಶಂಕರ್‌ ಎಂಬಾತನನ್ನು 2018ರ ಜನವರಿಯಲ್ಲಿ ಪರಿಚಯಿಸಿಕೊಂಡಿದ್ದ. “ನನ್ನ ತಂದೆಗೆ ಸೇನೆಯಲ್ಲಿ ಕೆಲ ಅಧಿಕಾರಿಗಳ ಪರಿಚಯವಿದೆ. ಅವರ ಮೂಲಕ ಕೆಲಸ ಕೊಡಿಸುತ್ತೇನೆ’ ಎಂದು ಹೇಳಿ ಹೆಬ್ಟಾಳದಲ್ಲಿರುವ ತನ್ನ ಮನೆಗೆ ದೀಪುನನ್ನು ಕರೆದುದೊಯ್ದು, ಕೃಷ್ಣರಾಜನ್‌ಗೆ ಪರಿಚಯಿಸಿದ್ದ. ನಂತರ ಸುಜಾತಾಳನ್ನು ಮನೆಗೆ ಕರೆಸಿದ ಆರೋಪಿ ಕೃಷ್ಣರಾಜ್‌, ಗುಮಾಸ್ತ ಕೆಲಸ ಕೊಡಿಸುವುದಾಗಿ ದೀಪುನಿಂದ ಮುಂಗಡ 40 ಸಾವಿರ ರೂ. ಹಣ ಪಡೆದುಕೊಂಡಿದ್ದರು.

ಬಳಿಕ ದೀಪು ಶಂಕರ್‌ನನ್ನು ಊಟಿಯ ವೆಲ್ಲಿಂಗ್‌ಟನ್‌ನ ಹೊಟೆಲ್‌ಗೆ ಕರೆದುದೊಯ್ದು ಸುಜಾತಾ, ವೈದ್ಯಕೀಯ ಪರೀಕ್ಷೆ ಮಾಡಿಸಿ, 2 ದಿನಗಳ ಬಳಿಕ ನಗರಕ್ಕೆ ವಾಪಸ್‌ ಕರೆತಂದಿದ್ದಳು. ಬಳಿಕ ಮಿಲಿಟರಿ ಹುದ್ದೆಯ ನಕಲಿ ನೇಮಕ ಪತ್ರ ನೀಡಿ ತಲೆಮರೆಸಿಕೊಂಡಿದ್ದಳು. ದೀಪುಶಂಕರ್‌ ಸಂಬಂಧಿಸಿದ ಕಚೇರಿಗೆ ಹೋಗಿ ವಿಚಾರಿಸಿದಾಗ, ನೇಮಕಾತಿ ಪತ್ರ ನಕಲಿ ಎಂದು ತಿಳಿಸಿದೆ. ಈ ಸಂಬಂಧ ಜು.31ರಂದು ಹೆಬ್ಟಾಳ ಠಾಣೆಯಲ್ಲಿ ದೀಪು ಪ್ರಕರಣ ದಾಖಲಿಸಿದ್ದರು. ನಂತರ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next