ಹೊಸದಿಲ್ಲಿ : “ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗುವ ಉಗ್ರರು ಹುತಾತ್ಮರು; ಅವರು ನಮ್ಮ ಸಹೋದರರು’ ಎಂದಿರುವ ಪಿಡಿಪಿ ಶಾಸಕ ಇಜಾಜ್ ಅಹ್ಮದ್ ಪೀರ್ ಅವರ ಹೇಳಿಕೆ ತೀವ್ರ ವಿವಾದವನ್ನು ಸೃಷ್ಟಿಸಿದೆ.
ಮಾಧ್ಯಮದೊಂದಿಗೆ ಮಾತನಾಡುತ್ತಿದ್ದ ಶಾಸಕ ಪೀರ್ ಅವರು, ರಾಜ್ಯದಲ್ಲಿನ ಹಲವಾರು ಉಗ್ರ ಹೋರಾಟಗಾರರು ಅಪ್ರಾಪ್ತ ವಯಸ್ಕರಾಗಿದ್ದು ಅವರಿಗೆ ತಮ್ಮ ಕೃತ್ಯಗಳಿಂದಾಗುವ ಫಲಿತಾಂಶದ ಅರಿವಿಲ್ಲ’ ಎಂದು ಹೇಳಿದರು.
“ಉಗ್ರ ಹೋರಾಟಗಾರರಲ್ಲಿ ಹಲವರು ಅಪ್ತಾಪ್ತ ವಯಸ್ಸಿನವರು; ಅವರಿಗೆ ತಾವೇನು ಮಾಡುತ್ತಿದ್ದೇವೆ ಎಂಬುದೇ ಗೊತ್ತಿಲ್ಲ; ಅವರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾದಾಗ ನಾವು ಅವರ ಸಾವಿಗೆ ಸಂಭ್ರಮಿಸಬಾರದು; ಅವರ ಸಾವು ನಮ್ಮ ಸಮಷ್ಟೀ ವೈಫಲ್ಯವಾಗಿದೆ’ ಎಂದು ಶಾಸಕ ಪೀರ್ ಹೇಳಿದರು.
ಇದೇ ವೇಳೆ ಪೀರ್ ಅವರು ಉಗ್ರರೊಂದಿಗೆ ಹೋರಾಡುತ್ತಾ ಮೃತಪಡುವ ಸೈನಿಕರಿಗೂ ತಮ್ಮ ಅನುಕಂಪವನ್ನು ವ್ಯಕ್ತಪಡಿಸಿದರು.
ಜಮ್ಮು ಕಾಶ್ಮೀರದಲ್ಲಿನ ಪಿಡಿಪಿ ಸರಕಾರದಲ್ಲಿ ಜತೆಗಾರ ಪಕ್ಷವಾಗಿರುವ ಬಿಜೆಪಿ, ಶಾಸಕ ಪೀರ್ ಅವರ ಈ ವಿವಾದಾತ್ಮಕ ಹೇಳಿಕೆಗಳನ್ನು ಬಲವಾಗಿ ಖಂಡಿಸಿದೆ.
“ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳು ಕಾಶ್ಮೀರದ, ಕಾಶ್ಮೀರಿಗಳ, ಅಭಿವೃದ್ಧಿಯ ಮತ್ತು ಶಾಂತಿಯ ವೈರಿಗಳು; ಅವರು ನಮ್ಮ ಸಹೋದರರಾಗಲು ಹೇಗೆ ಸಾಧ್ಯ ?’ ಎಂದು ಕೇಂದ್ರ ಸಚಿವ ಮುಖ್‌ತಾರ್ ಅಬ್ಟಾಸ್ ನಕ್ವಿ ಹೇಳಿದ್ದಾರೆ.