ಮುಂಬೈ: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಹಿರಿಯ ನಾಯಕ ಮಿಲಿಂದ್ ದಿಯೋರಾ ಅವರು ಇಂದು ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರೊಂದಿಗೆ ಮಿಲಿಂದ್ ದಿಯೋರಾ ಕಾಣಿಸಿಕೊಳ್ಳಲಿದ್ದಾರೆ.
ದಿಯೋರಾ ಅವರು ಕಾಂಗ್ರೆಸ್ ನಿಂದ ಹೊರಹೋಗುತ್ತಿದ್ದಾರೆ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರುತ್ತಾರೆ ಎಂಬ ಊಹಾಪೋಹಗಳು ಕೇಳಿಬಂದಿತ್ತು. ಆದರೆ ಸ್ವತಃ ಮಿಲಿಂದ್ ಅವರೇ ಶನಿವಾರ ಈ ವರದಿಯನ್ನು ತಳ್ಳಿಹಾಕಿದ್ದರು. ಇದಾಗಿ ಒಂದು ದಿನದ ನಂತರ ಅವರು ಕಾಂಗ್ರೆಸ್ ತೊರೆದಿದ್ದಾರೆ.
ಇತ್ತೀಚೆಗೆ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದ ಸಾರ್ವಜನಿಕರಿಗೆ ಹಕ್ಕು ಚಲಾಯಿಸುವ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ ದಿಯೋರಾ ಅವರು ತಮ್ಮ ಬೆಂಬಲಿಗರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.
“ನಾನು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ, ಪಕ್ಷದೊಂದಿಗಿನ ನನ್ನ ಕುಟುಂಬದ 55 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದ್ದೇನೆ” ಎಂದು ರಾಜೀನಾಮೆ ನೀಡುವ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಎಲ್ಲಾ ನಾಯಕರು, ಸಹೋದ್ಯೋಗಿಗಳು ಮತ್ತು ಕಾರ್ಯಕರ್ತರಿಗೆ ಇಷ್ಟು ವರ್ಷಗಳಲ್ಲಿ ನೀಡಿದ ಅಚಲ ಬೆಂಬಲಕ್ಕಾಗಿ ನಾನು ಕೃತಜ್ಞನಾಗಿದ್ದೇನೆ” ಎಂದು ದಿಯೋರಾ ಹೇಳಿದರು.
ಕಾಂಗ್ರೆಸ್‌ನ ಹಿರಿಯ ಮುರಳಿ ದಿಯೋರಾ ಅವರ ಪುತ್ರ ಮಿಲಿಂದ್ 2004 ಮತ್ತು 2009ರಲ್ಲಿ ಮುಂಬೈ ದಕ್ಷಿಣ ಕ್ಷೇತ್ರದಿಂದ ಗೆದ್ದಿದ್ದರು. ನಂತರದ 2014 ಮತ್ತು 2019ರ ಚುನಾವಣೆಗಳಲ್ಲಿ ಶಿವಸೇನೆಯ (ಅವಿಭಜಿತ) ನಾಯಕ ಅರವಿಂದ್ ಸಾವಂತ್ ವಿರುದ್ಧ ಸೋಲನುಭವಿಸಿದ್ದರು.