ಬಂಕಾಪುರ: ಬಿಸಿಲಿನ ಝಳಕ್ಕೆ ಮನೆಯಿಂದ ಹೊರಗೆ ಕಾಲಿಡದ ಪರಿಸ್ಥಿತಿ ಒಂದು ಕಡೆಯಾದರೆ, ಅದೇ ಬಿಸಿಲಿನ ತಾಪಕ್ಕೆ ಬಾಯಾರಿದರೆ ಕುಡಿಯಲು ನೀರಿಗಾಗಿ ಮೈಲುಗಟ್ಟಲೆ ಅಲೆದಾಡುವುದೇ ನಿತ್ಯ ಕಾಯಕವಾಗಿದೆ.
ಕಾಲಗಳ ಪ್ರಕಾರ ಇದು ಬೇಸಿಗೆ ಮುಗಿದು ಮಳೆಗಾಲ ಪ್ರಾರಂಭವಾದ ದಿನ. ಆದರೆ, ಬಿಸಿಲಿನ ತಾಪ, ನೀರಿಗಾಗಿ ಪ್ರಲಾಪ ಮಾತ್ರ ಇನ್ನೂ ತಪ್ಪಿಲ್ಲ. ಮೊದಲೇ ದುಡಿಯಲು ಕೆಲಸವಿಲ್ಲದೆ ಪರದಾಡುತ್ತಿರುವ ಬಡಜನತೆ. ನೀರು ಅರಸಿ ಗಲ್ಲಿ ಗಲ್ಲಿಗಳಲ್ಲಿ ಅಲೆಯುವ ಪರಸ್ಥಿತಿ ಬಂದೋದಗಿದೆ. ಜಿಲ್ಲಾಧಿಕಾರಿಗಳೂ ಅಧಿಕಾರಿಗಳ ಸಭೆ ನಡೆಸಿ ಯಾವ ಹಳ್ಳಿಯಲ್ಲೂ ನೀರಿನ ಸಮಸ್ಯೆ ತಲೆದೂರದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರೂ, ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸುವಲ್ಲಿ ಬೇಜವಾಬ್ದಾರಿತನ ತೋರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಬೇಸಿಗೆ ಕಳೆದು ಮಳೆಗಾಲ ಪ್ರಾರಂಭವಾದರೂ ಮಳೆ ಹನಿ ಭೂಸ್ಪರ್ಶಿಸುವ ಮುನ್ಸುಚನೆ ಕಾಣದೇ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿರುವ ಕಾರಣ ಅಂತರ್ಜಲ ಮಟ್ಟ ಕುಸಿದು ಪಾತಾಳ ಸೇರುತ್ತಿದೆ. ಇದರಿಂದ ಬೋರವೆಲ್ಗಳು ಬತ್ತಿ ಬರಡಾಗುತ್ತಿರುವುದರಿಂದ ಪಟ್ಟಣದ ಸಾರ್ವಜನಿಕರು ನೀರಿಗಾಗಿ ಪರದಾಡುವಂತಾಗಿದೆ. ಪುರಸಭೆಯಿಂದ 15 ರಿಂದ 20 ದಿನಕ್ಕೊಮ್ಮೆ ನಳಗಳ ಮೂಲಕ ನೀರು ಪೂರೈಸುತ್ತಿದ್ದು, ಅದು ಅರೆಕಾಸಿನ ಮಜ್ಜಿಗೆ ನೀಡಿದಂತಾಗುತ್ತಿದೆ. ಇದರಿಂದ ಮನೆ ಮಂದಿ ಕೆಲಸ ಕಾರ್ಯ ಬಿಟ್ಟು ನೀರಿಗಾಗಿ ಅಲೆದಾಡುತ್ತಿದ್ದಾರೆ.
ಸರ್ಕಾರ ನೀರಿಗಾಗಿ ಕೋಟ್ಯಾಂತರ ರೂ. ಅನುದಾನ ವ್ಯಯ ಮಾಡುತ್ತಿದ್ದು, ಅದು ಪಟ್ಟಣದ ಜನತೆಗೆ ತಲುಪದಂತಾಗಿದೆ. ಟ್ಯಾಂಕರಗಳ ಮೂಲಕವಾದರೂ ನೀರು ಪೂರೈಕೆ ಮಾಡಬೇಕಾಗಿದ್ದ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯಧೋರಣೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ತಿಂಗಳಿಗೆ ಮೂರು ಬಾರಿ ನೀರು ಪೂರೈಕೆಮಾಡುತ್ತಿದ್ದ ಪುರಸಭೆ ಈಗ ತಿಂಗಳಿಗೆ ಎರಡೇ ಬಾರಿ ನಳದ ಪೂರೈಸುತ್ತಿದ್ದಾರೆ. ಅಲ್ಲದೆ ಅದಕ್ಕೊಂದು ಸೂಕ್ತ ದಿನ ನಿಗದಿ ಮಾಡದೇ ಮನಸ್ಸಿಗೆ ಬಂದಾಗೊಮ್ಮೆ ವಾಟರ್ ಮನ್ ನೀರು ಬಿಡುವವರೆಗೂ ಸಾರ್ವಜನಿಕರು ಕಾಯ್ದು ಕುಳಿತು ನೀರು ಹಿಡಿಯುವಂತಾಗಿದೆ.
ಸಾರ್ವಜನಿಕರು ಸಹನೆ ಕಳೆದುಕೊಳ್ಳುವುದಕ್ಕಿಂತ ಮುಂಚಿತವಾಗಿ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತುಕೊಂಡು ಪಟ್ಟಣದ ಜನತೆಗೆ ನೀರಿನ ದಾಹ ತಣಿಸುವರೆ ಎಂದು ಕಾದು ನೋಡಬೇಕಿದೆ.
•ಸದಾಶಿವ ಹಿರೇಮಠ