ಉಡುಪಿ: ಅಹಂ ವಿನಾ ಮಾತೃಭೂಮಿಯ ಮೇಲೆ ಪ್ರೀತಿಯಷ್ಟೇ ಇರುವ ರಾಷ್ಟ್ರೀಯತೆ ಇಂದಿನ ಅಗತ್ಯ ಎಂದು ನಾಟಕಕಾರ, ಸಾಹಿತ್ಯ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪಂಜಾಬಿನ ರಂಗತಜ್ಞ ಅತಮ್‌ಜಿತ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ಮಣಿಪಾಲದ ಡಾ| ಟಿಎಂಎ ಪೈ ಸಭಾಂಗಣದಲ್ಲಿ ಮಣಿಪಾಲ್ ಇಂಟರ್‌ನ್ಯಾಶನಲ್ ಲಿಟರೇಚರ್ ಆ್ಯಂಡ್ ಆರ್ಟ್ಸ್ ಪ್ಲಾಟ್ ಫಾರಂ (ಮಿಲಾಪ್) ಆಯೋಜಿಸಿದ “ಎ ಮಿಲಿನಿಯಮ್ ರಿವಿಸಿಟೆಡ್: ಟ್ರೆಡಿಶನ್ ಆ್ಯಂಡ್ ಟ್ರಾನ್ಸ್‌ಫಾರ್ಮೇಶನ್’ ವಾರ್ಷಿಕ ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರೀಯತೆ ಎನ್ನುವುದು ಪ್ರೀತಿಯ ಸೆಲೆಯಾಗಬೇಕೇ ವಿನಾ ಬೆದರಿಸುವ ಬೆತ್ತದಂತಿರಬಾರದು ಎಂದರು.
ಹಿಂಸೆಯ ಪ್ರಶ್ನೆಗೆ ಮೌನದ ಉತ್ತರವಿರುತ್ತದೆ. ಖಡ್ಗದಿಂದ ನೆತ್ತರು ಹರಿಸುವ ಬದಲು ಲೇಖನಿಯ ಮೂಲಕ ಉತ್ತರ ಹುಡುಕುವ ಪ್ರಯತ್ನ ಮಾಡಬೇಕು. ಪರಂಪರೆಯ ಭದ್ರ ಪಂಚಾಂಗವಿಲ್ಲದೆ ಕಟ್ಟಡ ಕಟ್ಟಬಾರದು. ಪರಂಪರೆ, ವಸುಧೈವ ಕುಟುಂಬಕಂ, ಸತ್ಯ, ಕಲ್ಯಾಣರಾಜ್ಯ, ಡಿವೈನ್ ಪವರ್ ಈ ಪಂಚತಣ್ತೀಗಳನ್ನು ಡಾ| ಕರಣ್ ಸಿಂಗ್ ಪ್ರತಿಪಾದಿಸುತ್ತಾರೆ. ಇದುವೇ ನಮ್ಮ ಭವಿಷ್ಯ ಮತ್ತು ಭಾತೃತ್ವದ ಮೂಲ ಎಂದರು.
ಬೇರೆ ಬೇರೆ ಭಾಷೆಗಳ ನಡುವೆ ಸೇತು ನಿರ್ಮಿಸುವ ಪ್ರಯತ್ನ ನಡೆಯಬೇಕು. ಜ್ಞಾನದಲ್ಲಿ ಹಿರಿಯ, ಕಿರಿಯ ಭೇದ ಸಲ್ಲದು. ವಿವಿಧ ಕ್ಷೇತ್ರಗಳ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಮಿಲಾಪ್ ಸಾಹಿತ್ಯ ಸಮ್ಮೇಳನ ಆದರ್ಶಪ್ರಾಯವಾಗಿದೆ ಎಂದು ಸಾಹಿತಿ ಡಾ| ಎಚ್.ಎಸ್. ಶಿವಪ್ರಕಾಶ್ ತಮ್ಮ ದಿಕ್ಸೂಚಿ ಭಾಷಣದಲ್ಲಿ ಅಭಿಪ್ರಾಯ ಪಟ್ಟರು.
ಮಣಿಪಾಲ ವಿ.ವಿ. ಕುಲಪತಿ ಡಾ| ಎಚ್. ವಿನೋದ ಭಟ್ ಅವರು ತಮ್ಮ ವಿ.ವಿ.ಯಲ್ಲಿ ಕಲೆ, ಸಾಹಿತ್ಯ ಚಟುವಟಿಕೆಗಳಿಗೂ ಅವಕಾಶ ನೀಡುತ್ತಿರುವುದಕ್ಕೆ ಈ ಸಮ್ಮೇಳನ ಸಾಕ್ಷಿ ಎಂದರು. ಸಮ್ಮೇಳನದ ಸಂಚಾಲಕಿ ಡಾ| ನೀತಾ ಇನಾಂದಾರ್ ಸ್ವಾಗತಿಸಿದರು. ಮಣಿಪಾಲ್ ಯುನಿವರ್ಸಲ್ ಪ್ರಸ್ ಮುದ್ರಿಸಿದ ಡಾ| ಕೆ.ವಿ. ಅಕ್ಷರ ಮತ್ತು ಮೈತ್ರೇಯಿ ಅವರ ಎರಡು ಪುಸ್ತಕಗಳನ್ನು ಬಿಡು ಗಡೆಗೊಳಿಸಲಾಯಿತು.
ಹುಟ್ಟಿದಲ್ಲಿಗೆ ಬರುವ ಮೀನುಗಳು!
ಕೆನಡಾದ ಕೆಂಬುಜ್ ನದಿಯ ಪ್ರವಾಹದಲ್ಲಿ 1,400 ಕಿ.ಮೀ. ದೂರ ಸಾಗುವ ಮೀನುಗಳು ಕೊನೆಗೆ ಹುಟ್ಟಿದಲ್ಲಿಗೆ ವಾಪಸು ಬರುತ್ತವೆ. ಹಾಗೆ ಬರುವಾಗ ಅವು ಪ್ರವಾಹಕ್ಕೆ ಎದುರಾಗಿ ಈಜಬೇಕಾಗುತ್ತದೆ. ಮಾನವರೂ ತಮ್ಮ ರಾಷ್ಟ್ರೀಯತೆಯ ಬಗ್ಗೆ ಮರು ಚಿಂತನೆ ನಡೆಸಬೇಕು. ವಿದೇಶವಾಸಿಗಳು ಸ್ವದೇಶಕ್ಕೆ ಮರಳಬೇಕು ಎಂದು ಅತಮ್‌ಜಿತ್ ಸಿಂಗ್ ಕರೆ ನೀಡಿದರು.