ಬಿಟ್ಟು ಹೋಗಿದ್ದ ವಲಸೆ ಹಕ್ಕಿಗಳು ಕೋವಿಡ್-19ಗೆ ಹೆದರಿ ಮತ್ತೆ ಮರಳಿ ಗೂಡು ಸೇರಿಕೊಂಡಿವೆ. ಇದರಿಂದ ಹಳ್ಳಿಗಳಲ್ಲಿ ಜನಸಂಖ್ಯೆ ಪ್ರಮಾಣದಲ್ಲೂ ಹೆಚ್ಚಳವಾಗಿದೆ.
Advertisement
ಕೋವಿಡ್-19 ಸೋಂಕು ಕಾಲಿಡುತ್ತಿದ್ದಂತೆ ಮಹಾನಗರಗಳಲ್ಲಿ ಠಿಕಾಣಿ ಹೂಡಿದ್ದ ಹಳ್ಳಿಗರು ಹೇಳದೆ ಕೇಳದೇ ಮಕ್ಕಳು, ಮೊಮ್ಮಕ್ಕಳೊಂದಿಗೆ ತಮ್ಮ ತಮ್ಮ ಹಳ್ಳಿಗಳನ್ನು ಸೇರಿಕೊಂಡಿದ್ದಾರೆ. ವಯಸ್ಸಾದ ತಂದೆ-ತಾಯಿಗಳನ್ನು ಬಿಟ್ಟು ಬೇರಾರೂ ಕಾಣದ ಮನೆಯಲ್ಲೀಗ ಮಕ್ಕಳು, ಮೊಮ್ಮಕ್ಕಳು, ಸೊಸೆಯರು ಎಲ್ಲರೂ ಬಂದು ಸೇರಿಕೊಂಡಿದ್ದಾರೆ. ಒಂದೊಂದು ಮನೆಯಲ್ಲಿ ಕನಿಷ್ಠ 10ರಿಂದ 15 ಮಂದಿ ವಾಸವಾಗಿದ್ದಾರೆ. ಹಳ್ಳಿಗಳೇ ಸುರಕ್ಷಿತ: ಹಣ ಸಂಪಾದನೆಯನ್ನೇ ಗುರಿಯಾಗಿಸಿಕೊಂಡು ಹುಟ್ಟೂರನ್ನೇ ಮರೆತುಹೋಗಿದ್ದ ಜನರು ಈಗ ಕೊರೊನಾಗೆ ಹೆದರಿಜೀವಭಯದಿಂದ ತವರಿಗೆ ಬಂದು ಸೇರಿಕೊಂಡಿದ್ದಾರೆ. ಪ್ರಾಣಕ್ಕೆ ಸಂಚಕಾರ ಎದುರಾದಾಗ ಮಹಾನಗರಗಳಿಗಿಂತ ಹಳ್ಳಿಗಳೇ ಹೆಚ್ಚು ಸುರಕ್ಷಿತ ಎಂಬ ಪ್ರಜ್ಞೆ ಈಗ ಜನರಲ್ಲಿ ಜಾಗೃತಗೊಂಡಿದೆ. ಅದಕ್ಕಾಗಿ ಎಲ್ಲರೂ ಪ್ರಾಣ ರಕ್ಷಣೆಗಾಗಿ ತವರೂರಿನಲ್ಲಿ ಠಿಕಾಣಿ ಹೂಡಿದ್ದಾರೆ.ಮಹಾನಗರಗಳಿಂದ ವಲಸೆ ಬಂದಿರುವಜನರಿಂದ ಹಳ್ಳಿಗಳಲ್ಲಿ ಜನಸಂಖ್ಯೆ ಏರಿಕೆಯಾಗಿದೆ. ತಮ್ಮೂರಲ್ಲಿ ಹಿಂದೆಂದೂ ಇಷ್ಟೊಂದು ಜನರನ್ನೇ ಕಾಣದ ಆ ಊರಿನ ಜನರು ಕಳೆದೊಂದು ತಿಂಗಳಲ್ಲಿ ಊರಿಗೆ ವಲಸೆ ಬಂದವರನ್ನು ಕಂಡು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಕುಟುಂಬಗಳು ಈಗ ಕಂಡು ಬರುತ್ತಿವೆ. ಮಕ್ಕಳು-ಮೊಮ್ಮಕ್ಕಳೊಂದಿಗೆ ದೂರವಾಗಿ ಒಂಟಿಯಾಗಿ ಜೀವನ ನಡೆಸುತ್ತಿದ್ದ ಹಿರಿಯ ಜೀವಗಳು ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಮಹಾನಗರಗಳಿಂದ ಜನರು ಹಳ್ಳಿಗಳತ್ತ ವರ್ಷಕ್ಕೊ, ಎರಡು ವರ್ಷಕ್ಕೋ ನಡೆಯುವ ಊರಬ್ಬದ ಸಮಯದಲ್ಲಿ ಒಂದು ದಿನದ ಮಟ್ಟಿಗೆ ಬಂದು ಹೋಗುತ್ತಿದ್ದ ಮಕ್ಕಳು-ಮೊಮ್ಮಕ್ಕಳು, ಸೊಸೆಯಂದಿರು ಮನೆಯಲ್ಲಿರುವ ಹಿರಿಯ ಜೀವಗಳನ್ನು ಮರೆತು ಮಹಾನಗರದ ವಾತಾವರಣದಲ್ಲಿ ಬೆರೆತು ಹೋಗಿದ್ದರು. ಹಳ್ಳಿಗರು, ಹಳ್ಳಿಯ ಜೀವನವನ್ನು ನಿಕೃಷ್ಠವಾಗಿ ಕಾಣುತ್ತಾ ಊರಿನತ್ತ ಮುಖ ಮಾಡದೆ ತಮ್ಮ ಮಕ್ಕಳಿಗೂ ತವರಿನ ಗಾಳಿ ಸೋಕದಂತೆ ತಡೆದಿದ್ದರು. ಕಳೆದೊಂದು ತಿಂಗಳ ಹಿಂದೆ ಕಾಲಿಟ್ಟ ಕೊರೊನಾದಿಂದ ಹೇಳದೆ ಕೇಳದೆ ಮಹಾನಗರಗಳಿಂದ ಉಟ್ಟ ಬಟ್ಟೆಯಲ್ಲಿ ಕುಟುಂಬ ಸಮೇತರಾಗಿ ಹಳ್ಳಿಗಳಿಗೆ ಬಂದಿಳಿದಿದ್ದಾರೆ. ಬದುಕುಳಿಯುವುದಕ್ಕೆ ಹಳ್ಳಿಗಳಿಗಿಂತ ಸುರಕ್ಷಿತ ಪ್ರದೇಶ ಮತ್ತೂಂದಿಲ್ಲ ಎನ್ನುವುದರ ಅರಿವಾಗಿದೆ. 30 ದಿನಗಳಿಂದ ಹಳ್ಳಿ ವಾತಾವರಣ, ಅಲ್ಲಿಯ ಜೀವನ ಶೈಲಿಗೆ ಎಲ್ಲರೂ ಒಗ್ಗಿಕೊಂಡಿದ್ದಾರೆ. ಇದು ಶಾಶ್ವತವಾಗಿ ಉಳಿಯುವುದೋ ಅಥವಾ ಕೊರೊನಾ ಕಣ್ಮರೆಯಾದ ಕೂಡಲೇ ಮತ್ತೆ ಹಳ್ಳಿಗಳು
ವೃದ್ಧಾಶ್ರಮಗಳಾಗಲಿವೆಯೋ ಎನ್ನುವುದನ್ನು ಕಾದು ನೋಡಬೇಕಿದೆ.