Advertisement

ಮೇಲ್ಮನೆಗೆ ವಲಸಿಗರ ಪಟ್ಟು ನಾಯಕರಿಗೆ ಇಕ್ಕಟ್ಟು

07:20 AM Jun 13, 2020 | Lakshmi GovindaRaj |

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ 5 ಮಂದಿ ವಲಸಿಗರು ಇದೀಗ ವಿಧಾನ ಪರಿಷತ್‌ಗೆ ಆಯ್ಕೆ ಮಾಡುವಂತೆ ಪಟ್ಟು ಹಿಡಿದಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರಿಗೆ  ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಅನರ್ಹ ಶಾಸಕರಾದ ಆರ್‌.ಶಂಕರ್‌ ಜತೆಗೆ ಪ್ರತಾಪಗೌಡ ಪಾಟೀಲ್‌, ಮುನಿರತ್ನ ಅವರೂ ತಮ್ಮನ್ನು ಮೇಲ್ಮನೆಗೆ ಆಯ್ಕೆ ಮಾಡಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಲಾರಂಭಿಸಿದ್ದಾರೆ.

Advertisement

ಇನ್ನೊಂದೆಡೆ ಉಪ ಚುನಾವಣೆಯಲ್ಲಿ ಪರಾಭವಗೊಂಡ ಎಚ್‌.ವಿಶ್ವನಾಥ್‌, ಎಂಟಿಬಿ ನಾಗರಾಜ್‌ ಮೇಲ್ಮನೆಗೆ ಆಯ್ಕೆ ಮಾಡುವಂತೆ ಪಟ್ಟು ಹಿಡಿದಿದ್ದು, ವಲಸಿಗರಲ್ಲೇ ಪೈಪೋಟಿ ಶುರುವಾಗಿದೆ ಎಂದು ಮೂಲಗಳು ತಿಳಿಸಿವೆ. ಮಸ್ಕಿ- ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಪ್ರಕರಣ ನ್ಯಾಯಾಲಯದಲ್ಲಿದ್ದು, ಇದನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಪ್ರತಾಪಗೌಡ ಪಾಟೀಲ್‌, ಮುನಿರತ್ನ ಅವರು ರಾಜ್ಯ ಬಿಜೆಪಿ ನಾಯಕರಿಗೆ ಹಲವು ಬಾರಿ ಮನವಿ  ಮಾಡಿದ್ದರು.

ಆದರೆ, ದೂರುದಾರರು ಪ್ರಕರಣ ಹಿಂಪಡೆಯದ ಕಾರಣ ಬಾಕಿ ಉಳಿದಿದೆ. ಪ್ರಕರಣ ಇತ್ಯರ್ಥವಾಗಿ ಉಪಚುನಾವಣೆ ಘೋಷಣೆ ವಿಳಂಬ ಹಿನ್ನೆಲೆಯಲ್ಲಿ ಮೇಲ್ಮನೆಗೆ ಆಯ್ಕೆ ಮಾಡುವಂತೆ ಒತ್ತಡ ಹೇರಲಾರಂಭಿಸಿದ್ದಾರೆ.  ಇದರಿಂದ ಯಡಿಯೂರಪ್ಪ ಸೇರಿ ಇತರೆ ನಾಯಕರಿಗೆ ಇನ್ನಷ್ಟು ತಲೆನೋವು ಹೆಚ್ಚಾಗಿದೆ. ಮಸ್ಕಿ-ರಾಜರಾಜೇಶ್ವರಿನಗರ ಕ್ಷೇತ್ರದ ಫ‌ಲಿತಾಂಶಕ್ಕೆಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿನ ಪ್ರಕರಣ ಇನ್ನೂ ಇತ್ಯರ್ಥವಾಗದ ಕಾರಣ  ಉಪಚುನಾವಣೆ ಘೋಷಣೆಯಾಗಿಲ್ಲ.

ಇದರಿಂದ 1ವರ್ಷದಿಂದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳಾಗದೆ ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ ಹಿಂದೆ ಕೊಟ್ಟ ಮಾತಿನಂತೆ ನನ್ನನ್ನು ಹಾಗೂ ಮುನಿರತ್ನ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಸಚಿವ ಸ್ಥಾನ ನೀಡಬೇಕು. ಮುಂದೆ ನಮ್ಮ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದಾಗ ಸ್ಪರ್ಧಿಸಿ ಗೆಲ್ಲುವ ಮೂಲಕ ಸ್ಥಾನ ಬಿಟ್ಟು ಕೊಡುತ್ತೇನೆ. ಹೀಗಾಗಿ ಮೇಲ್ಮನೆಗೆ ಆಯ್ಕೆ ಮಾಡಬೇಕು ಎಂಬುದು ನಮ್ಮ ಬೇಡಿಕೆ  ಎಂದು ಪ್ರತಾಪಗೌಡ ಪಾಟೀಲ್‌ “ಉದಯವಾಣಿ’ಗೆ ಹೇಳಿದರು.

ಆರ್‌.ಶಂಕರ್‌ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಸಚಿವ ಸ್ಥಾನ ನೀಡಲೇಬೇಕು. ಹಾಗೆಯೇ ನಮ್ಮನ್ನು ಪರಿಷತ್‌ಗೆ ಆಯ್ಕೆ ಮಾಡಿ ಸಚಿವಗಿರಿ ನೀಡುವಂತೆ  ಕೋರಲಾಗಿದೆ. ಆದರೆ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದಟಛಿರಾಗಿರುತ್ತೇವೆಂದರು. ರಾಜ್ಯಸಭೆ ಚುನಾವಣೆಗೆ ಅನಿರೀಕ್ಷಿತ ಅಭ್ಯರ್ಥಿ ಆಯ್ಕೆ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ ಅಭ್ಯರ್ಥಿಗಳ ಆಯ್ಕೆ ಹೇಗೆ ಎಂಬ ಅತಂಕವೂ  ಆಕಾಂಕ್ಷಿಗಳಲ್ಲಿದೆ. ಜೂ.15 ಇಲ್ಲವೇ 16ರಂದು ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಯಲಿದ್ದು, ಕುತೂಹಲ ಮೂಡಿಸಿದೆ.

Advertisement

ಕೇಂದ್ರದ ನಾಯಕರ ಮನೋಭಾವ ಗಮನದಲ್ಲಿಟ್ಟುಕೊಂಡು ಜೂ.15 ಇಲ್ಲವೇ 16ರಂದು ಕೋರ್‌ ಕಮಿಟಿ  ಸಭೆಯಲ್ಲಿ ಪರಿಷತ್‌ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಚರ್ಚಿಸಲಾಗುವುದು. ಸರ್ಕಾರ ರಚನೆಗೆ ಕಾರಣರಾದವರನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಪಕ್ಷ ಕಟ್ಟಿದವರಿಗೆ ಸಿಟ್ಟು. ಪಕ್ಷ ಕಟ್ಟಿದವರನ್ನು ಗಮನದಲ್ಲಿಟ್ಟುಕೊಂಡರೆ ಸರ್ಕಾರ ರಚನೆಗೆ ನೆರವಾದರು ಸಿಟ್ಟಾಗುತ್ತಾರೆ. ಗೆಲುವಿಗೆ ನೂರಾರು ಅಪ್ಪಂದಿರು. ಸೋಲು ಮಾತ್ರ ಅನಾಥ. ಹಾಗಾಗಿ ಎಲ್ಲರನ್ನೂ ದೃಷ್ಟಿಯಲ್ಲಿಟ್ಟುಕೊಂಡು ಕೋರ್‌ ಕಮಿಟಿ ಸಭೆಯಲ್ಲಿ ತೀರ್ಮಾನಿಸುತ್ತೇವೆ ಎಂದು ಸಚಿವ ಸಿ.ಟಿ. ರವಿ  ಹೇಳಿದರು.

ಸಚಿವ ಆರ್‌.ಅಶೋಕ್‌, ಪರಿಷತ್‌ಗೆ ಈ ಬಾರಿ ಕಾರ್ಯಕರ್ತರು ಹಾಗೂ ತ್ಯಾಗ ಮಾಡಿ ಪಕ್ಷಕ್ಕೆ ಬಂದವರಿಗೆ ಅವಕಾಶ ಸಿಗಬಹುದು. ತ್ಯಾಗ ಮಾಡಿ ಬಂದ ಎಂಟಿಬಿ ನಾಗರಾಜ್‌, ಆರ್‌. ಶಂಕರ್‌ ಅವರಿಗೆ ಸ್ಥಾನ ನೀಡುವ ಬಗ್ಗೆ  ಚರ್ಚೆಯಾಗಬಹುದು. ಹಾಗೆಯೇ ಕಾರ್ಯಕರ್ತರಿಗೆ ಅವಕಾಶ ನೀಡಬೇಗುತ್ತದೆ. ಕೋರ್‌ ಕಮಿಟಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಅಭ್ಯರ್ಥಿ ಆಯ್ಕೆ ಕಗ್ಗಂಟು ಸಾಧ್ಯತೆ: ಆಕಾಂಕ್ಷಿ ವಲಸಿಗರ ಪೈಕಿ ಆರ್‌.ಶಂಕರ್‌, ಎಚ್‌.ವಿಶ್ವನಾಥ್‌, ಎಂಟಿಬಿ ನಾಗರಾಜ್‌ ಕುರುಬ ಾಯದವರಾಗಿದ್ದರೆ, ಪ್ರತಾಪಗೌಡ ಪಾಟೀಲ್‌ ಪರಿಶಿಷ್ಟ ಪಂಗಡ, ಮುನಿರತ್ನ ಹಿಂದುಳಿದ ವರ್ಗಕ್ಕೆ  ಸೇರಿದವರಾಗಿದ್ದಾರೆ. ಬಿಜೆಪಿಗೆ 4 ಸ್ಥಾನ ಗೆಲ್ಲಲು ಅವಕಾಶವಿದ್ದು, ವಲಸಿಗ 5 ಮಂದಿಯೇ ಪ್ರಬಲ ಆಕಾಂಕ್ಷಿಗಳಾಗಿರುವುದು ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ವಲಸಿಗರಿಗೆ ಅವ ಕಾಶ ಕೊಟ್ಟರೆ, ಪಕ್ಷ ನಿಷ್ಠರ ಅಸಮಾಧಾನಕ್ಕೆ  ಕಾರಣ ವಾಗಲಿದೆ. ಹಾಗೆಂದು ವಲಸಿಗರನ್ನು ಕಡೆಗಣಿಸಿದರೆ ಕೊಟ್ಟಮಾತು ತಪ್ಪಿದ ಆರೋಪಕ್ಕೆ ಬಿಜೆಪಿ ನಾಯಕರು ಗುರಿಯಾಗಬೇಕಾಗುತ್ತದೆ. ಒಟ್ಟಾರೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next