ಲಾಕ್‌ಡೌನ್ ಸಡಿಲಗೊಂಡರೂ ಶ್ರಮಿಕ್ ರೈಲಿಗೆ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗದ ಕಾರಣ, ನೂರಾರು ನಿರುದ್ಯೋಗಿ ವಲಸಿಗರು ಒಂದು ಸಾವಿರ ಕಿ.ಮೀ. ದೂರ ಕ್ರಮಿಸಿ ತಮ್ಮ ಮನೆಗಳಿಗೆ ತೆರಳಲು ಮುಂದಾಗಿದ್ದಾರೆ.
ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ ಎಂಬಾತ ಒಂದು ತಿಂಗಳು ಸಂಬಳ ಪಡೆದಿಲ್ಲ. ಹೀಗಿದ್ದರೂ ತನ್ನ ಕೊಠಡಿ ಖಾಲಿ ಮಾಡುವಂತೆ ಕಂಪೆನಿ ಯಜಮಾನ ಹೇಳಿದಾಗ, ಕುಮಾರ್ ಶ್ರಮಿಕ್ ರೈಲಿಗೆ ಟಿಕೆಟ್ ಕಾಯ್ದಿರಿಸಲು ವಿಫಲರಾಗಿದ್ದಾರೆ. ಅನಂತರ ಲೂಧಿಯಾನದಿಂದ ಒಂದು ಸಾವಿರ ಕಿ.ಮೀ. ದೂರದಲ್ಲಿರುವ ಮನೆಗೆ ಹೋಗಲು ನಿರ್ಧರಿಸಿದ್ದಾರೆ.
ಪಂಜಾಬ್ ಪೊಲೀಸರು ವಲಸೆ ಕಾರ್ಮಿಕರಿಗೆ ರಾಜ್ಯ ಗಡಿ ದಾಟಲು ಅವಕಾಶ ನೀಡದ ಕಾರಣ, ಅವರು ಹಳ್ಳಿಗಳ ಮೂಲಕ ಪ್ರಯಾಣಿಸಿದ್ದಾರೆ. ಶನಿವಾರ ಬೆಳಗ್ಗೆ ಅಂಬಾಲಾ ತಲುಪಲು ಅವರು ಪಂಜಾಬ್ – ಹರಿಯಾಣ ಗಡಿ ಬಳಿ ಘಗ್ಗರ್ ನದಿ ಉದ್ದಕ್ಕೂ ಸಾಗಬೇಕಾಯಿತು.
ಕುಮಾರ್ ಅವರಂತೆಯೇ ಇತರ ವಲಸೆ ಕಾರ್ಮಿಕರು ಕೂಡ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿರುವ ತಮ್ಮ ಮನೆ ತಲುಪಲು ಇದೇ ರೀತಿ ಪ್ರಯಾಣ ನಡೆಸಿದ್ದಾರೆ. ವಲಸೆ ಕಾರ್ಮಿಕರ ಇನ್ನೊಂದು ಗುಂಪು ಮತ್ತು ಅವರ ಕುಟುಂಬ ಅದೇ ನದಿ ದಾಟಿ ಅಂಬಾಲಾ ಜಿಲ್ಲೆ ಪ್ರವೇಶಿಸಿ, ಮನೆಯ ದಾರಿ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಲಾಕ್‌ಡೌನ್ ಅನಂತರ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಕಾರ್ಮಿಕರು ಕೈಯಲ್ಲಿದ್ದ ಹಣವನ್ನೂ ಖರ್ಚು ಮಾಡಿಕೊಂಡಿದ್ದಾರೆ. ಇರುವ ಮನೆಯ ಬಾಡಿಗೆ ಕಟ್ಟಲು ಒದ್ದಾಡುತ್ತಿರುವುದರಿಂದ ಇಲ್ಲಿರುವುದಕ್ಕಿಂತ ಊರು ಸೇರುವುದೇ ವಾಸಿ ಎಂದು ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.