Advertisement

ವಲಸೆ ಕಾರ್ಮಿಕರಲ್ಲಿ ಮೂಡಬೇಕಿದೆ ಜೀವನೋತ್ಸಾಹ

10:39 AM Apr 16, 2020 | mahesh |

ಬೆಂಗಳೂರು: ಕೋವಿಡ್ – 19 ಹಿನ್ನೆಲೆಯಲ್ಲಿ ಲಾಕ್‌ ಡೌನ್‌ ಅವಧಿ ಮೇ 3ರವರೆಗೆ ವಿಸ್ತರಣೆ ಬೆನ್ನಲ್ಲೇ ವಲಸೆ ಕಾರ್ಮಿಕರು “ತಮ್ಮೂರಿಗೆ ಕಳುಹಿಸಿ’ ಎಂದು ಪಟ್ಟು ಹಿಡಿಯುತ್ತಿದ್ದು, ಮಹಾರಾಷ್ಟ್ರ ಮಾದರಿಯಲ್ಲಿ ಇಲ್ಲೂ ಪರಿಸ್ಥಿತಿ ಉಲ್ಬಣಗೊಳ್ಳಬಹುದಾ ಎಂಬ ಆತಂಕ ಎದುರಾಗಿದೆ.

Advertisement

ಕಾರ್ಮಿಕ ಇಲಾಖೆಯ ಆಶ್ರಯ ಪಡೆದು ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿರುವ ವಲಸೆ ಕಾರ್ಮಿಕರು ಏ.14 ರ ನಂತರ ಲಾಕ್‌ ಡೌನ್‌ ಮುಗಿದು ತಮ್ಮ ಊರುಗಳಿಗೆ ಮರಳಬಹುದು ಎಂದುಕೊಂಡಿದ್ದರು. ಆದರೆ, ಲಾಕ್‌ ಡೌನ್‌ ಅವಧಿ ಮೇ 3ರವರೆಗೆ ಮುಂದುವರಿದಿರುವುದರಿಂದ ಅಲ್ಲಿಯವರೆಗೆ ಇಲ್ಲೇ ಉಳಿಯಲು ಒಪ್ಪುತ್ತಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸುಮಾರು 75 ಸಾವಿರದಷ್ಟು ವಲಸೆ ಕಾರ್ಮಿಕರು ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿ ಆಶ್ರಯ ಪಡೆದು ಕಾರ್ಮಿಕ ಇಲಾಖೆ ವಿತರಿಸುತ್ತಿರುವ ಊಟ ಸೇವಿಸುತ್ತಿದ್ದಾರೆ. ವಲಸೆ ಕಾರ್ಮಿಕರಲ್ಲಿ ಅಸ್ಸಾಂ , ತ್ರಿಪುರ, ಗುಜರಾತ್‌, ಒರಿಸ್ಸಾ, ಬಿಹಾರ, ಉತ್ತರ ಪ್ರದೇಶ , ರಾಜ್ಯದ ರಾಯಚೂರು, ಬಳ್ಳಾರಿ, ಕಲಬುರಗಿ ಭಾಗದವರು ಇದ್ದಾರೆ. ಆ ಪೈಕಿ ಕೆಲವರಿಗೆ ಊಟ ಹೊಂದಾಣಿಕೆ ಆಗುತ್ತಿಲ್ಲ, ಇಲ್ಲಿ ಕೆಲಸ
ಮಾಡಿದರೂ ತಮಗೆ ಬೇಕಾದ ತಮ್ಮ ಆಹಾರ ಪದ್ಧಯಡಿ ಅಡುಗೆ ಮಾಡಿಕೊಳ್ಳುತ್ತಿದ್ದವರಿಗೆ ನಿತ್ಯ ಒಂದೇ ತರಹದ ಊಟ ರುಚಿಸುತ್ತಿಲ್ಲ. ಮತ್ತೆ ಹಲವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿವೆ. ರಕ್ತದ ಒತ್ತಡ, ಮಧುಮೇಹ ಸಮಸ್ಯೆ ಇದ್ದವರಂತೂ ಪರದಾಡುವಂತಾಗಿದೆ. ಹೀಗಾಗಿ, ನಮ್ಮನ್ನು ಊರಿಗೆ ಬಿಟ್ಟುಬಿಡಿ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ದುಂಬಾಲು ಬೀಳುತ್ತಿದ್ದಾರೆ.

ಆದರೆ, ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿ ಅದು ನಮ್ಮ ಕೈಲಿಲ್ಲ, ಸರ್ಕಾರವು ಮೇ 3ರವರೆಗೆ ಈಗಿರುವ ಕಡೆಯೇ ಇರಬೇಕು ಎಂದು ಹೇಳಿದೆ. ಸಂಚಾರವೇ ಬಂದ್‌ ಆಗಿರುವುದರಿಂದ ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಕಳುಹಿಸುವುದು ಅಸಾಧ್ಯ. ಇನ್ನು ರಾಜ್ಯದ ಇತರೆ ಜಿಲ್ಲೆಗಳಿಗೆ
ಸೇರಿದವರನ್ನು ಕಳುಹಿಸಲು ಬಹುತೇಕ ಗ್ರಾಮಗಳಲ್ಲಿ ಪ್ರವೇಶ ನಿಷೇಧ ಮಾಡಲಾಗಿದೆ ಹೀಗಾಗಿ ಅದೂ ಕಷ್ಟ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ಮಹಾರಾಷ್ಟ್ರ, ಬಿಹಾರ ಮಾದರಿಯಲ್ಲಿ ರಾಜ್ಯದಲ್ಲೂ ಸಮಸ್ಯೆಯಾಗಬಹುದು ಎಂಬ ಮಾತುಗಳು ಇವೆ. ಬೆಂಗಳೂರು ನಗರ
ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರು ಈ ಬಗ್ಗೆ ಆತಂಕ ವ್ಯಕ್ತಪಡಿಸಿ, ಸಲಹೆ ಸೂಚನೆ ಕೇಳಿದ್ದಾರೆ. ಆದರೆ, ಕಾರ್ಮಿಕರನ್ನು ಕಳುಹಿಸುವುದು ಸೂಕ್ತ, ಕೆಲಸ ಮಾಡಲು ಅವಕಾಶ ಕೊಡಬೇಕು ಎಂದು ತಜ್ಞರು, ಕಾರ್ಮಿಕ ಮುಖಂಡರು ಹೇಳುತ್ತಾರೆ.

ಮನವರಿಕೆ ಮಾಡಿ ಊರಿಗೆ ಬಿಟ್ಟು ಬನ್ನಿ
21 ದಿನಗಳ ಲಾಕ್‌ ಡೌನ್‌ನಿಂದ ಕೆಂಗೆಟ್ಟಿದ್ದವರು ಇದೀಗ ಇನ್ನೂ ಮೂರು ವಾರ ಎಂದರೆ ಅವರ ಮಾನಸಿಕ ಸ್ಥಿತಿ ಕಷ್ಟವಾಗಬಹುದು. ಕುಟುಂಬದ ಜತೆ ಮನೆಯಲ್ಲಿರುವವರಿಗೇ ಮಾನಸಿಕ ಖನ್ನತೆ ಸೇರಿದಂತೆ ಇತರೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಇಂತಹ ಸಂದರ್ಭದಲ್ಲಿ ಕುಟುಂಬ ಸದಸ್ಯರನ್ನು ಬಿಟ್ಟು ಕಲ್ಯಾಣ ಮಂಟಪ, ಸಮುದಾಯ ಭವನದಲ್ಲಿರುವವರ ಸ್ಥಿತಿ ಏನಾಗಬೇಡ ಎಂದು ಸಿಐಟಿಯು ಅಧ್ಯಕ್ಷೆ ಎಸ್‌.ವರಲಕ್ಷ್ಮೀ ಪ್ರಶ್ನಿಸುತ್ತಾರೆ. ಬೇರೆ ರಾಜ್ಯದ ವಲಸೆ ಕಾರ್ಮಿಕರನ್ನು ಕಳುಹಿಸಲು ಸಾಧ್ಯವಿಲ್ಲ ದಾದರೆ ನಮ್ಮ ರಾಜ್ಯದ ಬೇರೆ ಜಿಲ್ಲೆಯವರನ್ನು ಆರೋಗ್ಯ ತಪಾಸಣೆ ಮಾಡಿ ಸ್ಥಳೀ ಯರಿಗೆ ಮನವರಿಕೆ ಮಾಡಿಕೊಟ್ಟು
ಊರುಗಳಿಗೆ ಬಿಟ್ಟುಬರುವ ವ್ಯವಸ್ಥೆಯನ್ನು ಸರ್ಕಾರವೇ ಮಾಡಿದರೆ ಸೂಕ್ತ. ಇದರಿಂದ ಸರ್ಕಾರಕ್ಕೂ ಹೊರೆ ತಪ್ಪುತ್ತದೆ, ವಲಸೆ ಕಾರ್ಮಿಕರು  ತಮ್ಮ ಕುಟುಂಬ ಸೇರಿಕೊಳ್ಳುತ್ತಾರೆ ಎನ್ನುತ್ತಾರೆ .

ಕಾರ್ಮಿಕರಿಗೆ ಊಟ, ವಸತಿ
ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕ ಮಂಡಳಿ ವತಿಯಿಂದ ನಿತ್ಯ 72 ಸಾವಿರ ಕಾರ್ಮಿಕರಿಗೆ ಊಟ ಮತ್ತು ವಸತಿ ಕಲ್ಪಿಸಲಾಗಿದೆ ಎಂದು ಅದರ ಉಸ್ತುವಾರಿ ವಹಿಸಿರುವ ಪ್ರಥಮ್‌ ಹೇಳುತ್ತಾರೆ. 72 ಸಾವಿರ ಪೈಕಿ ಸುಮಾರು 50 ಸಾವಿರ ಮಂದಿ ವಲಸೆ ಕಾರ್ಮಿಕರು ಎಂದು ಹೇಳಲಾಗಿದೆ.
ಕಾರ್ಮಿಕ ಇಲಾಖೆ ಪ್ರಕಾರ ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ 18652 ಕಾರ್ಮಿಕರಿಗೆ ಊಟ ಮತ್ತು ವಸತಿ ಕಲ್ಪಿಸಲಾಗಿದ್ದು ಆ ಪೈಕಿ 13772 ಮಂದಿ ವಲಸೆ ಕಾರ್ಮಿಕರು.

Advertisement
Advertisement

Udayavani is now on Telegram. Click here to join our channel and stay updated with the latest news.

Next