ಮಂಗಳೂರು: ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣಕ್ಕೆ ಪ್ರವೇಶಿಸುವಾಗ ಕೊಡಲಾಗುವ ವಿಶೇಷ ಪ್ರವೇಶಾತಿ ಕಾರ್ಯಕ್ರಮದ ಬಗ್ಗೆ ಶಿಕ್ಷಕರಿಗೆ ಮೇ 14ರಿಂದ ಮೇ 16ರ ವರೆಗೆ “ಶಿಕ್ಷಕರ ಅಭಿವೃದ್ಧಿ ಕಾರ್ಯಾಗಾರ’ವನ್ನು ಮೂಡಬಿದಿರೆಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದು, ಮಂಗಳವಾರ ಉದ್ಘಾಟಿಸಲಾಯಿತು.
ದಿಲ್ಲಿಯ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (ಎಐಸಿಟಿಇ) ಪ್ರಾಯೋಜಿಸಿದ ಈ ಕಾರ್ಯಾ ಗಾರವನ್ನು ಎಐಸಿಟಿಇ ಬೆಂಗಳೂರು ದಕ್ಷಿಣ ಪ್ರಾದೇಶಿಕ ಕಚೇರಿ ಸಹಾಯ ನಿರ್ದೇಶಕ ರಮೇಶ್ ಎನ್. ಉದ್ಘಾಟಿಸಿದರು. ಎಂಜಿನಿಯರಿಂಗ್ ಕೋರ್ಸ್‌ನಲ್ಲಿ ಮೂರು ವಾರಗಳ ವಿದ್ಯಾರ್ಥಿ ಪ್ರವೇಶಾತಿ ತರಬೇತಿ ಕಾರ್ಯಕ್ರಮದ ಪ್ರಾಮುಖ್ಯತೆ ಬಗ್ಗೆ ಅವರು ತಿಳಿಸಿದರು. ವಿದ್ಯಾರ್ಥಿಗಳ ಜೀವನ ಕೌಶಲವನ್ನು ಹೆಚ್ಚಿಸಲು ಮತ್ತು ಅವರ ಮಹತ್ವಾಕಾಂಕ್ಷೆಗೆ ಸಮಗ್ರ ದೃಷ್ಟಿಕೋನವನ್ನು ಪಡೆಯಲು ಈ ಕಾರ್ಯಕ್ರಮ ಸಹಕಾರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೈಟ್ ಅಧ್ಯಕ್ಷ ರಾಜೇಶ್ ಚೌಟ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಹೊಸ ಪರಿಸರದ ಪರಿಚಯ, ಪ್ರತಿಭೆಯನ್ನು ಹೊರಹಾಕಲು ಸೂಕ್ತ ವೇದಿಕೆ, ವಿವಿಧ ವೃತ್ತಿಪರ ಶಿಷ್ಟಾಚಾರಗಳ ಮಾಹಿತಿ ಲಭಿಸುತ್ತದೆ ಎಂದರು.
ಎಐಸಿಟಿಇ ರಾಜ್ಯ ಅಕಾಡೆಮಿ ಕೋ- ಆರ್ಡಿನೇಟರ್ ವಂದನಾ ಸಿಂಘಾಲ್, ವಿಟಿಯು ಕೋ-ಆರ್ಡಿನೇಟರ್ ಪ್ರೊ| ಚಿಕಣ್ಣ, ಎಐಸಿಟಿಇ ದಯಾಲ್ ಭಾಗವಹಿಸಿದ್ದರು. ಉದ್ಧವ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಮೈಟ್ ಕಾಲೇಜಿನ ಪ್ರಾಂಶುಪಾಲ ಡಾ| ಜಿ.ಎಲ್. ಈಶ್ವರ ಪ್ರಸಾದ್ ಸ್ವಾಗತಿಸಿದರು. ಡಾ| ಆಶಾ ಕ್ರಾಸ್ತಾ ವಂದಿಸಿದರು.