ಗುಂಡ್ಲುಪೇಟೆ: ತಾಲೂಕಿನ ಹುತ್ತೂರು ಕೆರೆಯಿಂದ ವಡ್ಡಗೆರೆಗೆ ನೀರು ಹರಿಸುವ ಯೋಜನೆಗೆ ಚಾಲನೆ ನೀಡುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ಗುರುವಾರ ತಮ್ಮ ಜಾನುವಾರುಗಳೊಂದಿಗೆ ಆಗಮಿಸಿದ ಮತ್ತಷ್ಟು ರೈತರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ರೈತರು ತೀವ್ರವ ಆಕ್ರೋಶ ವ್ಯಕ್ತಪಡಿಸಿದರು.
ಆಕ್ರೋಶ: ಅನ್ನದಾತನ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದರೂ ಸಹ ಜಿಲ್ಲಾ ಉಸ್ತುವಾರಿ ಸಚಿವ ಎಂ.ಪುಟ್ಟರಂಗಶೆಟ್ಟಿ ಅವರು ಸ್ಥಳಕ್ಕೆ ಆಗಮಿಸದೇ ರೈತರ ವಿಚಾರದಲ್ಲಿ ಕಾಳಜಿ ವಹಿಸದೇ ಇರುವುದು ಪ್ರತಿಭಟನಾನಿರತ ರೈತರಲ್ಲಿನ ಆಕ್ರೋಶ ಮತ್ತಷ್ಟು ಜಾಸ್ತಿಯಾಗಲು ಕಾರಣವಾಗಿದೆ.
ಕಾಂಗ್ರೆಸ್ ಮುಖಂಡರ ಭೇಟಿ: ರೈತರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡರು ಕೆರೆಗೆ ನೀರು ಹರಿಸಲು ತಮ್ಮ ಪ್ರಯತ್ನ ಮಾಡುವ ಬಗ್ಗೆ ಭರವಸೆ ನೀಡಿದರು. ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಮೈಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಜಿಪಂ ಸದಸ್ಯರಾದ ಕೆ.ಎಸ್.ಮಹೇಶ್, ಬಿ.ಕೆ.ಬೊಮ್ಮಯ್ಯ ಯುವ ಮುಖಂಡರಾದ ಎಚ್.ಎಂ.ಗಣೇಶ್ ಪ್ರಸಾದ್, ಎಲ್.ಸುರೇಶ್, ಕಲ್ಮಳ್ಳಿ ಶಿವಕುಮಾರ್ ಮತ್ತಿತರರು ಆಗಮಿಸಿ ರೈತರಿಗೆ ತಮ್ಮ ಬೆಂಬಲ ಸೂಚಿಸಿದರು.
ನೀರು ಹರಿಸದಿದ್ದರೇ ಉಗ್ರ ಹೋರಾಟ: ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಮೊಂಡಾಟ ಕೈಬಿಟ್ಟು ನೀರು ಹರಿಸದಿದ್ದರೆ ಇನ್ನೂ ಉಗ್ರಹೋರಾಟ ನಡೆಸಬೇಕಾಗುತ್ತದೆ ಎಂದು ಸ್ಥಳಕ್ಕೆ ಆಗಮಿಸಿದ್ದ ಕಾಂಗ್ರೆಸ ಮುಖಂಡ ಗಣೇಶ್ ಪ್ರಸಾದ್ ಅವರನ್ನು ರೈತ ಮುಖಂಡರಾದ ಕಡಬೂರು ಮಂಜುನಾಥ್ ಹಾಗೂ ಹೊನ್ನೂರು ಪ್ರಕಾಶ್ ತರಾಟೆಗೆ ತೆಗೆದುಕೊಂಡರು.
Advertisement
ಕಳೆದ ಮೂರು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರ ಪ್ರತಿಭಟನೆ ಗುರುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸ್ಥಳದಲ್ಲೇ ಊಟ-ತಿಂಡಿ ತಯಾರು ಮಾಡಿಕೊಂಡು ನಿರಂತರವಾಗಿ ಸರಿ ಸುಮಾರು ಇನ್ನೂರಕ್ಕೂ ಹೆಚ್ಚು ರೈತರು ತಮ್ಮ ಜಾನುವಾರುಗಳೊಂದಿಗೆ ಪ್ರತಿಭಟನೆ ನಡೆಸುತ್ತಿದ್ದರೂ ಸಹ ಜಿಲ್ಲಾಡಳಿñಕ್ಕಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಿಗಾಗಲಿ ಕೇಳದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ.
Related Articles
Advertisement
ವಿನಾಕಾರಣ ಆರೋಪ: ತಾಲೂಕಿನ ಎಲ್ಲಾ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವುದು ದಿ.ಎಚ್.ಎಸ್.ಮಹದೇವಪ್ರಸಾದ್ ಅವರ ಮಹಾತ್ವಾಕಾಂಕ್ಷೆಯಾಗಿದ್ದು ತಮ್ಮ ತಾಯಿ ಸಚಿವೆಯಾಗಿದ್ದಾಗಲೂ ಯೋಜನೆಯ ಜಾರಿಗೆ ಹೆಚ್ಚಿನ ಆಸಕ್ತಿವಹಿಸಿದ್ದರು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದ್ದರಿಂದ ಹಾಗೂ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಸೋತ ಹಿನ್ನೆಲೆಯಲ್ಲಿ ಕೆಲವರು ತಮ್ಮ ಕುಟುಂಬದವರ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ.
ಪ್ರತಿಭಟನೆ ನಿಲ್ಲಲ್ಲ: ನಾವು ನೀರು ತುಂಬಿಸುವ ಯೋಜನೆಯ ಪರವಾಗಿದ್ದು, ಈ ವಿಚಾರದಲ್ಲಿ ನಮ್ಮದೇನು ಅಡ್ಡಿಯಿಲ್ಲ. ಈ ಬಗ್ಗೆ ತಾವು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ ನೀರು ಹರಿಸಲು ಪ್ರಯತ್ನ ಮಾಡುತ್ತೇನೆ. ಆದ್ದರಿಂದ ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದರು. ಆದರೆ ರೈತರು ಕೆರೆಗೆ ನೀಡು ಹರಿಯುವವರೆಗೂ ಯಾವುದೇ ಕಾರಣಕ್ಕೂ ಪ್ರತಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದ್ದಿದ್ದಾರೆ.
25ರಂದು ಬೃಹತ್ ಪಾದಯಾತ್ರೆ ನಡೆಸಲು ನಿರ್ಧಾರ: ವಿವಿಧ ಸಂಘಟನೆಗಳ ನೆರವಿನಿಂದ ಜೂನ್ 25ರಂದು ಸುಮಾರು 5 ಸಾವಿರ ಜನರನ್ನು ಸೇರಿಸಿ ಹುತ್ತೂರಿನಿಂದ ಜಿಲ್ಲಾ ಕೇಂದ್ರಕ್ಕೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಯೋಜನೆಯು ಕಾರ್ಯರೂಪಕ್ಕೆ ಬರುವವರೆಗೂ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುತ್ತದೆ ಎಂದು ಜಿಲ್ಲಾ ಕಾರ್ಯಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ತಿಳಿಸಿದರು.
ವಕೀಲರ ಸಂಘದ ಬೆಂಬಲ: ಕಾಮಗಾರಿ ಪೂರ್ಣಗೊಂಡಿದ್ದರೂ ವಡ್ಡಗೆರೆ ಕೆರೆಗೆ ನೀರು ಹರಿಸುವ ವಿಚಾರದಲ್ಲಿ ಮೊಂಡಾಟ ನಡೆಸುತ್ತಿರುವವ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ನಿರ್ಧಾರ: ವಕೀಲರ ಸಂಘದ ಅಧ್ಯಕ್ಷ ಜಿ.ಬಿ.ನಂಜಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸಭೆಯಲ್ಲಿ ರೈತರಿಗೆ ನೈತಿಕ ಬೆಂಬಲ ಹಾಗೂ ಎಲ್ಲಾ ರೀತಿಯಲ್ಲಿಯೂ ಸಹಕಾರ ನೀಡಲು ಸಭೆ ನಿರ್ಧರಿಸಿತು. ಮುಂದಿನ ಸೋಮವಾರದವರೆಗೆ ನೀರು ಹರಿಸದಿದ್ದರೆ ರೈತರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಹಾಗೂ ಅಲ್ಲದೆ ಇದೇ ರೀತಿ ರೈತರಿಗೆ ತೊದರೆಯಾಗುತ್ತಿದ್ದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲೂ ವಕೀಲರ ಸಂಘ ನಿರ್ಧರಿಸಿತು. ಹಸಿರುಸೇನೆಯ ರೈತ ಸಂಘದ ತಾಲೂಕು ಅಧ್ಯಕ್ಷ ಕುಂದಕೆರೆ ಸಂಪತ್ತು, ಮುಖಂಡರಾದ ಕಡಬೂರು ಮಂಜುನಾಥ್ ಸೇರಿದಂತೆ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು, ಮುಖಂಡರು ಮತ್ತು ಸುತ್ತಮುತ್ತಲಿನ ರೈತರು ಇದ್ದರು.
ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ನೀರು ಬಿಡುವಂತೆ ಒತ್ತಾಯಿಸಿ ಹಾಗೂ ರೈತ ವಿರೋಧಿ ಧೋರಣೆ ತೋರುತ್ತಿರುವ ಉಸ್ತುವಾರಿ ಸಚಿವ ಎಂ.ಪುಟ್ಟರಂಗಶೆಟ್ಟಿ ಅವರ ನಡೆಯನ್ನು ಖಂಡಿಸಿ ಪಟ್ಟಣದ ಮೈಸೂರು ಚಾಮರಾಜನಗರ ಜಿಲ್ಲಾ ಸಹಕಾರಿ ಬ್ಯಾಂಕ್ ಎದುರು ರೈತ ಸಂಘದ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಪಟ್ಟಣದ ಎಂ.ಡಿ.ಸಿ.ಸಿ.ಬ್ಯಾಂಕ್ ವೃತ್ತದಲ್ಲಿ ಸಮಾವೇಶಗೊಂಡ ರೈತ ಸಂಘದ ಯುವ ಮುಖಂಡರು ಮತ್ತು ಕಾರ್ಯಕರ್ತರು ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ನೀರು ಬಿಡುವಂತೆ ಒತ್ತಾಯಿಸಿ ಹಾಗೂ ರೈತ ವಿರೋಧಿ ಧೋರಣೆ ತೋರುತ್ತಿರುವ ಉಸ್ತುವಾರಿ ಸಚಿವ ಎಂ.ಪುಟ್ಟರಂಗಶೆಟ್ಟಿ ಅವರ ನಡೆಯನ್ನು ಖಂಡಿಸಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ರೈತರ ಹೋರಾಟವನ್ನು ಹತ್ತಿಕ್ಕಲು ಜಿಲ್ಲಾಡಳಿತ ಪೊಲೀಸ್ ಮೂಲಕ ಯತ್ನಿಸುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ದ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ನಂತರ ಸ್ಥಳಕ್ಕೆ ಆಗುಸಿದ ಪೊಲೀಸರು ತಡೆ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ನಂದೀಶ್, ನಾಗೇಂದ್ರ, ಮಹೇಂದ್ರ, ಮಹೇಶ್ ಇತರರು ಇದ್ದರು.