Advertisement

ಮಿಡ್‌ನೈಟ್‌ ಪೇಂಟರ್‌

06:00 AM Dec 04, 2018 | Team Udayavani |

ಬೈಕಿನಲ್ಲಿ ಹೋಗುವಾಗ ತಾನು ಬಿದ್ದ ಗುಂಡಿಗೇ, ಚಿತ್ರ ಮೂಡಿಸಿ, ಸಮಾಜದ ಕಣ್ತೆರೆಸಿದವರು ಮೈಸೂರಿನ ಕಲಾ ವಿದ್ಯಾರ್ಥಿ ಶಿವರಂಜನ್‌. ರಸ್ತೆ ಗುಂಡಿ ಕಾಣಿಸಿದ ಸ್ಥಳಗಳಲ್ಲಿ, ಈತ ರಾತ್ರೋ ರಾತ್ರಿ ಕುಂಚ ಹಿಡಿದು ಚಿತ್ರ ಕಾರ್ಯಾಚರಣೆ ನಡೆಸುತ್ತಾರೆ…

Advertisement

ಬದುಕು ಗುಂಡಿ ಒಳಕ್ಕೆ ಬೀಳಿಸಿದರೂ, ಮತ್ತೆ ಕೈ ಹಿಡಿದು ಮೇಲಕ್ಕೆತ್ತುತ್ತೆ ಅನ್ನೋದಕ್ಕೆ ಮೈಸೂರಿನ ಕಲಾವಿದ ಶಿವರಂಜನ್‌ ಸಾಕ್ಷಿ. ಅದು ಮೈಸೂರಿನ ಹತ್ತಿರದ ಯರಗನಹಳ್ಳಿಯ ರಸ್ತೆ. ಶಿವರಂಜನ್‌ ಎಂದಿನ ಲಹರಿಯಲ್ಲಿ ಬೈಕನ್ನೇರಿ ಹೊರಟಿದ್ದರು. ರಸ್ತೆ ಮಧ್ಯದಲ್ಲಿ ರಾಕ್ಷಸನಂತೆ ಬಾಯೆರೆದ ಗುಂಡಿ ಆ ಕ್ಷಣಕ್ಕೆ ಅವರಿಗೆ ಕಾಣಿಸಲೇ ಇಲ್ಲ. ಧೊಪ್ಪನೆ ಬಿದ್ದರು! ಸಣ್ಣಪುಟ್ಟ ಪೆಟ್ಟಾಯಿತು. ಮೇಲೆದ್ದು, ಸಾವರಿಸಿಕೊಂಡು ಮನೆ ಮುಟ್ಟಿದರು.

ಆದರೆ, ಶಿವರಂಜನ್‌ಗೆ ಆ ರಾತ್ರಿ ಯಾಕೋ ನಿದ್ದೆಯೇ ಕಣ್ಣಿಗಿಳಿಯಲಿಲ್ಲ. ತನ್ನಂತೆ ಇತರರೂ ಆ ಗುಂಡಿಯೊಳಕ್ಕೆ ಬಿದ್ದರೆ?- ಚಿಂತೆ ಕಾಡಿತು. ಈತ ತಡಮಾಡಲಿಲ್ಲ. ಬಣ್ಣ ತುಂಬಿದ ಡಬ್ಬಿ, ಕುಂಚ ಹಿಡಿದು, ತಾವು ಬಿದ್ದ ಸ್ಥಳಕ್ಕೆ ರಾತ್ರಿಯೇ ಹೊರಟುಬಿಟ್ಟರು. ಗುಂಡಿಯ ಸುತ್ತ ಚಿತ್ರ ಬಿಡಿಸಿ, ಅದಕ್ಕೆ ರಾಕ್ಷಸನ ರೂಪವನ್ನೇ ಕೊಟ್ಟರು. ಯಾರಿಗೇ ಆದರೂ ಅದನ್ನು ನೋಡಿದ ತಕ್ಷಣ ಅದರ ಅಪಾಯ ತಿಳಿಯಲಿಯೆಂಬ ಮೌನ ಕಾಳಜಿ ಆ ಚಿತ್ರದಲ್ಲಿತ್ತು. ಸಂಬಂಧಿಸಿದವರ ಬೇಜವಾಬ್ದಾರಿಯೂ ಅದರೊಳಗೆ ಇಣುಕುತ್ತಿತ್ತು. ಬೆಳಗಾಗುವುದರೊಳಗೆ ಆ ಚಿತ್ರದ ಸುತ್ತ ಜನ ಮುತ್ತಿಕೊಂಡರು. ಆಳುವ ವರ್ಗಕ್ಕೆ ಚುರುಕ್‌ ಮುಟ್ಟಿಸಿತ್ತು, ಆ ಚಿತ್ರ.

ಶಿವರಂಜನ್‌, ಮಂಡ್ಯದ ಮಳವಳ್ಳಿ ಬಳಿಯ ಹಲಗೂರಿನವರು. ಕಲೆಯ ಬಗ್ಗೆ ಸಣ್ಣ ವಯಸ್ಸಿನಲ್ಲೇ ಆಸಕ್ತಿ ತಳೆದವರು. ಪುಟ್ಟ ಹುಡುಗನಾಗಿದ್ದಾಗಲೇ ಮನೆಯ ಕಿತ್ತುಹೋದ ಗೋಡೆಗಳು, ಶಿವರಂಜನ್‌ ಕೈಚಳಕದಿಂದ ಚಿತ್ತಾರಗೊಂಡು ನಗುತ್ತಿದ್ದವು. ಎಸ್ಸೆಸ್ಸೆಲ್ಸಿಯ ನಂತರ ಮೈಸೂರಿನ ಕಾವಾ ಸಂಸ್ಥೆ ಸೇರಿದ ಮೇಲೆ, ಅವ್ಯವಸ್ಥೆಯ ಕುರಿತ ಜಾಗೃತಿಯೂ ಅವರ ಮೂರನೇ ಕಣ್ಣನ್ನು ತೆರೆಸಿತು.

ಅಂದಹಾಗೆ, ಶಿವು ಕಲಾ ಕಾರ್ಯಾಚರಣೆ ನಡೆಸೋದೇ ತಡರಾತ್ರಿಯಲ್ಲಿ. ಹಗಲಿನಲ್ಲಿ ವಾಹನಗಳ ಓಡಾಟ, ಟ್ರಾಫಿಕ್‌ ಮುಂತಾದವು ಮೇಲ್ನೋಟದ ಕಾರಣಗಳಷ್ಟೇ. ಅಸಲೀ ಕಾರಣವೆಂದರೆ, ಹಗಲಿನಲ್ಲಿ ಈ ಕೆಲಸಕ್ಕೆ ಕೈ ಹಾಕಿದರೆ ಆ ಏರಿಯಾದ ಕಾರ್ಪೊರೇಟರ್‌, ಅಧಿಕಾರಿಗಳು, ರಾಜಕಾರಣಿಗಳಿಗೆ ಸಂಬಂಧಿಸಿದ ಜನ ಬಂದು “ವಿಚಾರಿಸಿ’ಕೊಳ್ಳುತ್ತಾರಂತೆ. ಇಂಥ ಅನುಭವ ಆಗಿರುವುದರಿಂದ, ಇಂಥವರೊಂದಿಗೆ ಗುದ್ದಾಡಿ ಕಾಲಹರಣ ಮಾಡುವ ಬದಲು, ರಾತ್ರಿ ಸದ್ದಿಲ್ಲದೇ ತಮ್ಮ ಕೆಲಸ ಮುಗಿಸಿರುತ್ತಾರೆ ಶಿವು. ಬೆಳಗಾಗುವ ವೇಳೆಗೆ ಆ ಚಿತ್ರ ಸಂಚಲನ ರೂಪಿಸಿರುತ್ತೆ.

Advertisement

ಇಲ್ಲಿಯವರೆಗೆ ಸುಮಾರು 30 ರಿಂದ 35 ಕಡೆ ಇಂಥ ಚಿತ್ರ ಹೋರಾಟ ನಡೆಸಿದ್ದು, 25ಕ್ಕೂ ಹೆಚ್ಚು ಕಡೆಗಳಲ್ಲಿ ಗೆಲುವು ಸಿಕ್ಕಿದೆ. ಸ್ವಂತ ಹಣದಲ್ಲಿ ಪೇಂಟಿಂಗ್‌ಗೆ ಬೇಕಾದ ಸಾಮಗ್ರಿಗಳನ್ನು ಕೊಂಡು, ಚಿತ್ರದ ಮುಖೇನ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ. ಜರ್ಮನಿಯ ಕಲಾವಿದ ಮ್ಯಾನ್ಸಿ$Rಇವರಿಗೆ ಸ್ಫೂರ್ತಿ.

ಈ ಚಿತ್ರ ಕಾರ್ಯಾಚರಣೆಯ ಆಚೆಗೂ ಶಿವು ಇಷ್ಟವಾಗುವುದು, ಅವರ ಪರಿಸರ ಪ್ರೀತಿಯ ಕಾರಣಕ್ಕೆ. ಪ್ರಾಣಿಪಕ್ಷಿಗಳೆಂದರೆ ಇವರಿಗೆ ಇನ್ನಿಲ್ಲದ ಪ್ರೀತಿ, ತಿಳಿವಳಿಕೆ ಇದೆ. ಮಕ್ಕಳು ಎಂತೆಂಥದೋ ಉಡುಗೊರೆಗಳಿಗೆ ತಂದೆತಾಯಿಯ ಮುಂದೆ ಹಠ ಮಾಡುವುದನ್ನು ನೋಡಿದ್ದೇವೆ. ಶಿವು ಐದನೇ ಕ್ಲಾಸಿನಲ್ಲಿರುವಾಗ ಹಠ ಮಾಡಿದ್ದು, ಒಂದು ಹಸು ಬೇಕೆಂದು! ತಂದೆಯಿಂದ ಹಸುವಿನ ಕರು ಗಿಫ್ಟ್ ಪಡೆದು, ಶಾಲೆ ಮುಗಿದ ಮೇಲೆ ಅದರ ಆರೈಕೆ ಮಾಡುತ್ತಿದ್ದರು. 

ಮನೆಯಲ್ಲಿ ವಿಶೇಷ ಪಕ್ಷಿಗಳನ್ನು ಸಾಕಿಕೊಂಡು, ಅದರೊಟ್ಟಿಗೆ ಸಂಭಾಷಿಸುತ್ತಾರೆ. ಪಕ್ಷಿಗಳ ಹುಟ್ಟು, ಬೆಳವಣಿಗೆ, ಅವುಗಳ ಸ್ವಭಾವ ಮುಂತಾದವುಗಳ ಬಗ್ಗೆ ಗಂಟೆಗಟ್ಟಲೆ ಮಾತಾಡಬಲ್ಲರು. ತಾಯಿ ಕಳಕೊಂಡ ಪಕ್ಷಿಗಳಿಗೆ ಹೇಗೆ ಆಹಾರ ನೀಡಬೇಕು? ಆಹಾರ ಕೊಡುವ ಮನುಷ್ಯನನ್ನು ಅವು ಹೇಗೆ ಹಚ್ಚಿಕೊಳ್ಳುತ್ತವೆ? ಎಷ್ಟೋ ಮೈಲು ಹಾರಿದರೂ, ತಾನು ಹುಟ್ಟಿದ ಗೂಡನ್ನು ಹಕ್ಕಿ ಹೇಗೆ ನೆನಪಿಟ್ಟುಕೊಳ್ಳುತ್ತದೆ?- ಇವೆಲ್ಲ ಕೌತುಕಕ್ಕೂ ಅವರು ವೈಜ್ಞಾನಿಕವಾಗಿ ಫ್ರೆàಮ್‌ ಹಾಕಬಲ್ಲರು.

ಈ ಪರಿಸರ ಪ್ರೀತಿಯೇ, ಅವರ ಕುಂಚದ ಕೈಚಳಕದಲ್ಲಿ ವ್ಯಕ್ತವಾಗುತ್ತದೆ. ಪಕ್ಷಿಯ ಸಂಕಟ ಹೇಗೋ, ಮನುಷ್ಯನ ಸಂಕಟವೂ ಹಾಗೇ ಎಂದು ನಂಬಿರುವ ಅವರಿಗೆ, ರಸ್ತೆ ಗುಂಡಿಯಂಥ ಸಮಸ್ಯೆಗಳು ಬಹುಬೇಗ ಕಣ್ಣಿಗೆ ಬೀಳುತ್ತವೆ. ಅದಕ್ಕಾಗಿ ಅವರು ಕಲೆಯ ಮದ್ದನ್ನು ಹಚ್ಚುವ ಕೆಲಸ ಮಾಡುತ್ತಾರೆ.

ನಮ್ಮ- ನಿಮ್ಮ ಸುತ್ತಲೂ ಗುಂಡಿಗಳಿವೆ. ನಮ್ಮೊಳಗೊಬ್ಬ ಕಲಾವಿದನಿದ್ದರೆ, ಆ ಗುಂಡಿಯೂ ನಾಳೆ ಮುಚ್ಚಿಕೊಳ್ಳುತ್ತದೆ. ಕಲೆಗೆ ಅಸಾಧ್ಯ ಎನ್ನುವುದು ಯಾವುದಿದೆ?

ಕುಸುಮಬಾಲೆ ಆಯರಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next