ನ್ಯೂಯಾರ್ಕ್: ಚೀನಾದ ಬೈಟೇಡ್ಯಾನ್ಸ್ ಒಡೆತನದ ಟಿಕ್ ಟಾಕ್ ಅಪ್ಲಿಕೇಶನ್ ನನ್ನು ಅಮೆರಿಕಾದಲ್ಲೂ ನಿಷೇಧಿಸುವ ಕುರಿತಾಗಿ ಪರಿಶೀಲಿಸಲಾಗುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ ಬೆನ್ನಲ್ಲೇ ಮೈಕ್ರೋಸಾಫ್ಟ್ ಸಂಸ್ಥೆ, ಟಿಕ್ ಟಾಕ್ ಖರೀದಿಸಲು ಆಸಕ್ತಿ ತೋರಿದೆ ಎಂದು ವರದಿಗಳು ತಿಳಿಸಿದ್ದವು. ಇದೀಗ ಮೈಕ್ರೋಸಾಫ್ಟ್ ಕಾರ್ಪ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯನಾದೆಲ್ಲಾ ಅಮೆರಿಕಾ ಅಧ್ಯಕ್ಷರೊಂದಿಗೆ ಈ ಕುರಿತು ಮಾತುಕತೆ ನಡೆಸಿದ್ದು ಕುತೂಹಲ ಕೆರಳಿಸಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೊಂದಿಗೆ ದೂರವಾಣಿ ಮೂಲಕ ಟಿಕ್ ಟಾಕ್ ಖರೀದಿ ಕುರಿತು ಸತ್ಯನಾದೆಲ್ಲಾ ಮಾತನಾಡಿದ್ದು, ಈ ವೇಳೆ ಟಿಕ್ ಟಾಕ್ ಖರೀದಿ ಮಾಡಿದರೆ ದೇಶದ ಆಡಳಿತ ಬೆಂಬಲ ನೀಡುತ್ತದೆಯೇ? ಎಂದು ಖಚಿತಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಮೈಕ್ರೋಸಾಫ್ಟ್ ಅಮೆರಿಕಾ ಸೇರಿದಂತೆ ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಗಳಲ್ಲಿ ಟಿಕ್ ಟಾಕ್ ಅನ್ನು ಖರೀದಿಸುವ ಮಾತುಕತೆ ನಡೆಸಿದೆ. ಮಾತ್ರವಲ್ಲದೆ ಸೆಪ್ಟೆಂಬರ್ 15ರ ನಂತರ ಒಪ್ಪಂದವನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ ಎಂದು ಸತ್ಯ ನಾಡೆಲ್ಲಾ ತಿಳಿಸಿದ್ದಾರೆ.
ಈ ಹಿಂದೆ ರಾಷ್ಟ್ರೀಯ ಭದ್ರೆತೆಗೆ ಧಕ್ಕೆ ತರುತ್ತಿದೆ ಎಂದು ಟ್ರಂಪ್ ಪತ್ರಿಕಾಗೋಷ್ಟಿಯಲ್ಲಿ ಟಿಕ್ ಟಾಕ್ ನಿಷೇಧಿಸುವ ಕುರಿತಾಗಿ ಮಾತುಕತೆ ನಡೆಸಿದ್ದರು. ಆದರೇ ಜಾಗತಿಕವಾಗಿ 2 ಶತಕೋಟಿಗಿಂತ ಹೆಚ್ಚು ಬಳಕೆದಾರರು ಟಿಕ್ ಟಾಕ್ ಅಪ್ಲಿಕೇಶನ್ ನಲ್ಲಿ ಸಕ್ರೀಯರಾಗಿದ್ದು ಈ ಹಿನ್ನಲೆಯಲ್ಲಿ ಚೀನಾದ ಕಂಪೆನಿ ಶತಕೋಟಿ ವ್ಯವಹಾರ ಮಾಡುವ ಟಿಕ್‌ಟಾಕ್ ಅನ್ನು ಅಮೆರಿಕ ಮೂಲದ ಮೈಕ್ರೋಸಾಫ್ಟ್ ಖರೀದಿ ಮಾಡಲು ಆಸಕ್ತಿ ತೋರಿದೆ ಎನ್ನಲಾಗಿದೆ.