ಟೋಕಿಯೋ: ಸಾಫ್ಟ್ವೇರ್ ಎಂಜಿನಿಯರ್‌ಗಳು ಅಂದರೆ ಕೆಲಸ ಕೆಲಸ ಕೆಲಸ ಅಂತಿರ್ತಾರೆ. ವಾರದ ಐದು ದಿನ ಶ್ರಮವಹಿಸಿ ದುಡಿದು ವಾರಾಂತ್ಯದಲ್ಲಿ ರಜೆ ವಾಡಿಕೆ. ಜಪಾನ್‌ನಂತಹ ದೇಶದಲ್ಲಿ ಕೆಲಸದ ವಿಧಾನ, ಸಿಬಂದಿ ಕೆಲಸದ ಅವಧಿ ಇನ್ನೂ ಹೆಚ್ಚು. ಅಲ್ಲೀಗ ಹೊಸ ಯೋಜನೆಯೊಂದನ್ನು ಮೈಕ್ರೋಸಾಫ್ಟ್ ಕಾರ್ಯಗತಗೊಳಿಸಿದ್ದು, ಫಲಿತಾಂಶ ತೀರ ಅಚ್ಚರಿಯದ್ದಾಗಿದೆ.
2300 ಮಂದಿಯನ್ನು ಈ ಯೋಜನೆಯಡಿ ಮೈಕ್ರೋಸಾಫ್ಟ್ ತಂದಿದೆ. ವರ್ಕ್ ಲೈಫ್ ಚಾಯಿಸ್ ಚಾಲೆಂಜ್ ಸಮ್ಮರ್ 2019 ಹೆಸರಿನಲ್ಲಿ ಯೋಜನೆಯಿದ್ದು ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ ಮಾಡಲು ಹೇಳಲಾಗಿತ್ತು. ಜತೆಗೆ 30 ನಿಮಿಷಕ್ಕಿಂತ ಹೆಚ್ಚು ಹೊತ್ತು ಸಭೆಗಳನ್ನು ನಡೆಸದಂತೆ ಹೇಳಲಾಗಿದೆ. ಇದರಿಂದ ಶೇ.40ರಷ್ಟು ಉತ್ಪಾದನೆ ಸಾಮರ್ಥ್ಯ ಹೆಚ್ಚಾಗಿರುವುದು, ಕೆಲಸದಲ್ಲಿ ಹೆಚ್ಚಿನ ಆಸಕ್ತಿ, ಸಿಬಂದಿ ಲವಲವಿಕೆ ಕಂಡುಬಂದಿದೆಯಂತೆ.
ಪ್ರತಿ ಸಭೆಗಳು 30 ನಿಮಿಷಕ್ಕೆ ಸೀಮಿತವಾಗಿರುವಂತೆ ಅದರಲ್ಲಿ ಭಾಗಿಯಾಗುವವರ ಸಂಖ್ಯೆ 5ಕ್ಕೂ ಮೀರಿ ಇರಬಾರದೆಂದು ಸೂಚಿಸಲಾಗಿತ್ತು.
ರಜಾ ದಿನಗಳಲ್ಲಿ ಪ್ರವಾಸಕ್ಕೆ 60 ಸಾವಿರ ರೂ. ಕೊಡುಗೆಯನ್ನೂ ನೀಡಲಾಗಿತ್ತು.
ಕಡಿಮೆ ಒತ್ತಡ ಸಿಬಂದಿಗೆ ಸೃಷ್ಟಿಯಾದ್ದರಿಂದ ಕಂಪೆನಿಗಾಗಿ ಅವರು ಉಳಿದ ನಾಲ್ಕು ದಿನಗಳಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಜತೆಗೆ ಹೆಚ್ಚು ವಿದ್ಯುತ್ ಮುಗಿಯುವುದು ಕಡಿಮೆಯಾಗಿದೆ. ಕಾಗದಗಳ ಬಳಕೆ ಪ್ರಮಾಣವೂ ಗಣನೀಯವಾಗಿ ತಗ್ಗಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ. ಶೇ.40ರಷ್ಟು ಉತ್ಪಾದಕತೆಯನ್ನು ಕೇವಲ ಶೇ.20ರಷ್ಟು ಕಡಿಮೆ ಕೆಲಸದ ಅವಧಿಯ ಮೂಲಕ ಸಾಧಿಸಲಾಗಿದೆ. ವಾರದಲ್ಲಿ ಆಗುವ ಉತ್ಪಾದಕತೆಗಿಂತಲೂ ಇದು ಹೆಚ್ಚಿನದ್ದಾಗಿದೆ. ಅಲ್ಲದೇ ರಜೆ ಬಳಿಕ ಒಂದು ಸಾಮಾನ್ಯ ಕೆಲಸಕ್ಕೆ ಅವರು ತೆಗೆದುಕೊಳ್ಳುವ ಸಮಯಕ್ಕಿಂತ ಶೇ.25ರಷ್ಟು ಕಡಿಮೆ ಸಮಯದಲ್ಲಿ ಕೆಲಸಗಳನ್ನು ಪೂರೈಸಿದ್ದಾರೆ ಎಂದು ಹೇಳಿದೆ. ಮುಂದಿನ ಚಳಿಗಾಲದಲ್ಲೂ ಸಿಬಂದಿಗೆ ಇಂತಹ ಆಫರ್ ಕೊಡಲು ಕಂಪೆನಿ ಮುಂದಾಗಿದೆ. ಆದರೆ ಯಾವುದೇ ಹೆಚ್ಚುವರಿ ರಜೆಯನ್ನು ನೀಡುವುದಿಲ್ಲ ಎಂದು ಹೇಳಿದೆ.