ಬೆಂಗಳೂರು: ಸಂತಾನಹರಣ ಶಸ್ತ್ರಚಿಕಿತ್ಸೆಗೊಳಪಡಿಸಿದ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆಗೆ ಬಿಬಿಎಂಪಿ ನಿರ್ಧರಿಸಿದೆ. ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ನಿರಂತವಾಗಿ ನಡೆಯುತ್ತಿದ್ದರೂ ನಗರದಲ್ಲಿ ಅವುಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೊಳಪಟ್ಟ ಬೀದಿನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಸಲು ಉದ್ದೇಶಿಸಲಾಗಿದೆ.
ಈ ಸಂಬಂಧ ಬಿಬಿಎಂಪಿ ಆರೋಗ್ಯ ಇಲಾಖೆ (ಪ್ರಾಣಿಗಳು ಮತ್ತು ಪಶುಸಂಗೋಪನೆ)ಗೆ ಮೇಯರ್ ಆರ್. ಸಂಪತ್ ರಾಜ್ ಸೂಚನೆ ನೀಡಿದರು. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ರಾಜರಾಜೇಶ್ವರಿನಗರ ವಲಯದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಮೇಯರ್, ಸಾಕಷ್ಟು ಕ್ರಮ ಕೈಗೊಂಡಿದ್ದರೂ ನಾಯಿಗಳ ಹಾವಳಿ ಕುರಿತು ದೂರುಗಳು ಕೇಳಿಬರುತ್ತಲೇ ಇವೆ.
ಯಾವ ನಾಯಿಗೆ ಶಸ್ತ್ರಚಿಕಿತ್ಸೆ ಮಾಡಿದೆ ಎಂಬ ನಿಖರ ಮಾಹಿತಿಯೂ ಇಲ್ಲ. ಆದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಸಬೇಕು. ಆಗ ಶಸ್ತ್ರಚಿಕಿತ್ಸೆಗೆ ಒಳಗಾಗದ ನಾಯಿಗಳ ಸಂಖ್ಯೆ ಗೊತ್ತಾಗುತ್ತದೆ. ಈ ನಿಟ್ಟಿನಲ್ಲಿ ತಕ್ಷಣ ಕಾರ್ಯೋನ್ಮುಖರಾಗಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ದ್ರವರೂಪ: ಮೈಕ್ರೋಚಿಪ್ ದ್ರವ ರೂಪದಲ್ಲಿರುತ್ತದೆ. ಇದನ್ನು ಸಿರೆಂಜ್ ಮೂಲಕ ಆ ಪ್ರಾಣಿಗಳ ಕೊರಳಿನ ಮೃದು ಭಾಗಕ್ಕೆ ಕಳುಹಿಸಲಾಗುವುದು. ಈ ಎಲೆಕ್ಟ್ರಾನಿಕ್ ಉಪಕರಣದಲ್ಲಿ ವಿಶೇಷ ಗುರುತಿನ ಸಂಖ್ಯೆ ನೀಡಲಾಗಿರುತ್ತದೆ. ಬೆಲೆ 200 ರೂ. ಆಗುತ್ತದೆ. ಈ ಚಿಪ್ ಅಳವಡಿಕೆಯಿಂದ ಒಂದೇ ನಾಯಿಗೆ ಒಂದಕ್ಕಿಂತ ಹೆಚ್ಚು ಬಾರಿ ಅನಗತ್ಯವಾಗಿ ಲಸಿಕೆ ಹಾಕುವುದು ತಪ್ಪುತ್ತದೆ. ಎಷ್ಟು ಬೀದಿ ನಾಯಿಗಳಿಗೆ ಲಸಿಕೆ ಹಾಕಲಾಗಿದೆ?
ಎಷ್ಟು ನಾಯಿಗಳನ್ನು ಸಂತಾನಹರಣ ಶಸ್ತ್ರಚಿಕಿತ್ಸೆಗೊಳಪಡಿಸಲಾಗಿದೆ? ಎಂಬುದರ ನಿಖರ ಮಾಹಿತಿ ದೊರೆಯುತ್ತದೆ. ಇದರ ಮುಂದುವರಿದ ಭಾಗವಾಗಿ ಜಿಪಿಎಸ್ ಆಧಾರಿತ ಕಾಲರ್ ಐಡಿ ಕೂಡ ಇದರೊಂದಿಗೆ ಅಳವಡಿಸಲು ಅವಕಾಶ ಇದೆ. ಇದರಿಂದ ಬೀದಿ ನಾಯಿಗಳ ಚಲನವಲನಗಳ ಬಗ್ಗೆ ಕುಳಿತಲ್ಲಿಯೇ ಮಾಹಿತಿ ಪಡೆಯಬಹುದು. ಆದರೆ, ಇದರ ಬೆಲೆ ಸಾವಿರ ರೂ. ಆಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕೆರೆಗಳ ಮಾಹಿತಿ ಕಡ್ಡಾಯ: ಇದಕ್ಕೂ ಮೊದಲು ಸಭೆಯಲ್ಲಿ ಮಾತನಾಡಿದ ಮೇಯರ್, ರಾಜರಾಜೇಶ್ವರಿ ನಗರ ವಲಯದಲ್ಲಿ ಒಟ್ಟು 22 ಕೆರೆಗಳಿದ್ದು, ಪ್ರತಿ ಕೆರೆಗಳ ವಿಸ್ತೀರ್ಣ, ಅವುಗಳ ವಿಶೇಷತೆ, ಖರ್ಚು ಮಾಡಿದ ಅನುದಾನ ಮತ್ತಿತರ ಮಾಹಿತಿಗಳು ನಾಮಫಲಕದಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಕೆರೆಗಳಿಗೆ ವಲಸೆ ಬಂದ ಹಕ್ಕಿಗಳ ವಿವರ ಮತ್ತು ಅವುಗಳ ಪೋಷಣೆ ಮಾಡಬೇಕು. ಕೆರೆಯ ಸುತ್ತ ಸಾರ್ವಜನಿಕರ ವಾಯುವಿಹಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತೆರಿಗೆ ವಸೂಲಿಯಲ್ಲಿ ರಾಜರಾಜೇಶ್ವರಿನಗರದ ಕಂದಾಯ ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ. ಹಾಗಾಗಿ, ರಾಜರಾಜೇಶ್ವರಿನಗರ ವಲಯದಲ್ಲಿ ಹೆಚ್ಚು ತೆರಿಗೆ ವಸೂಲಿಗೆ ಗಮನಹರಿಸಬೇಕು. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಸಹಾಯಕವಾಗಲಿದೆ. ವಲಯದ ವ್ಯಾಪ್ತಿಯಲ್ಲಿ ನೆಟ್ಟ ಗಿಡಗಳ ಸಂರಕ್ಷಣೆ ಜತೆಗೆ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು. ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ ಹಾಗೂ ರಾಜರಾಜೇಶ್ವರಿನಗರ ವಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.