Advertisement

ಪುಟ್ಟ ಕಲಾಕೃತಿಗಳಿಗೆ ಹೆಸರಾದ ಗಡಿನಾಡ ಕಾಸರಗೋಡಿನ ‘ಪುಟ್ಟ’

09:42 AM Apr 05, 2019 | keerthan |

ಬದಿಯಡ್ಕ: ಸಾಧಿಸಿದರೆ ಸಬಳ ನುಂಗಬಹುದು ಎಂಬ ಮಾತಿದೆ. ಸಾಧನೆ ಮಾಡುವ ಮನಸಿದ್ದರೆ, ಪರಿಶ್ರಮ ಪಡಲು ತಯಾರಾಗಿದ್ದರೆ ಪ್ರತಿಯೊಬ್ಬ ವ್ಯಕ್ತಿಗೂ ಯಶಸ್ಸು ಕಟ್ಟಿಟ್ಟ ಬುತ್ತಿ. ಯಾವುದೇ ವಿಷಯ ಅಥವಾ ವಿಚಾರವನ್ನು ಸೂಕ್ಷ್ಮವಾಗಿ ಗುರುತಿಸುವ ಮನೋಭಾವವು ವ್ಯತ್ಯಸ್ತ ಚಿಂತನೆಗಳಿಗೆ ದಾರಿ ಮಾಡಿಕೊಡುತ್ತದೆ. ಅಂತಹ ಒಂದು ವಿಶೇಷ ಆಲೋಚನೆಗೆ ಮೂರ್ತ ರೂಪ ಕೊಡುವ ಮೂಲಕ ಸಾಟಿಯಿಲ್ಲದ ಸಾಧನೆ ಮಾಡಿದವರಲ್ಲಿ ಗಡಿನಾಡಿನ ಪುಟ್ಟ ಇಚ್ಲಂಗೋಡು ಎಂದೇ ಖ್ಯಾತರಾಗಿರುವ ವೆಂಕಟೇಶ್‌ ಆಚಾರ್ಯ ಅವರೂ ಒಬ್ಬರು.

Advertisement

ಜೀವನವೆಂದರೆ ಸೂಕ್ಷ್ಮಾತಿ ಸೂಕ್ಷ್ಮ ವಿಚಾರಗಳ ಸಂತೆ. ಆ ಸೂಕ್ಷ್ಮವನ್ನು ಕಲೆಯ ಕಣ್ಣಿಂದ ನೋಡಿ, ಕಲಾಕೃತಿಯ ಸೃಷ್ಟಿಗೆ ಪ್ರಯತ್ನಿಸಿ ಅದನ್ನೇ ಒಂದು ಹವ್ಯಾಸವನ್ನಾಗಿ ಮಾಡಿಕೊಂಡಿರುವ ಪುಟ್ಟ ಅವರ ಕೈಯಲ್ಲರಳಿದ ಪುಟ್ಟ ಕಲಾಕೃತಿಗಳಿಗೆ ಲೆಕ್ಕವಿಲ್ಲ . 90 ಮಿ.ಗ್ರಾಂ. ಚಿನ್ನದಲ್ಲಿ ಕ್ರಿಕೆಟ್‌ ವಿಶ್ವಕಪ್‌, ಕೇವಲ 28 ರೂಪಾಯಿಯ 0.010 ಮಿ.ಗ್ರಾಂ ಚಿನ್ನದಲ್ಲಿ ಸ್ವಚ್ಚ ಭಾರತ್‌ ಲಾಂಛನವನ್ನು ತಯಾರಿಸಿರುವ ಈ ಕಲಾವಿದನ ಕೈಚಳಕ ಬೆರಗು ಮೂಡಿಸುತ್ತದೆ. ಅಕ್ಕಿ ಕಾಳಿನಲ್ಲಿ ಸ್ವಚ್ಚ ಭಾರತ್‌ ಎಂಬುದಾಗಿ ರಾಷ್ಟ್ರ ಭಾಷೆಯಲ್ಲಿ ನಮೂದಿಸಿರುವ ಪುಟ್ಟ ಅವರ ಕಲಾಸಾಧನೆ ವರ್ಣನಾತೀತ.


ಪುಟ್ಟ ಅವರ ಹೆಚ್ಚಿನ ಕಲಾಕೃತಿಗಳು ಪೆನ್ಸಿಲ್‌ ಲೆಡ್‌ನ‌ಲ್ಲಿದೆ. ಪೆನ್ಸಿಲ್‌ನ ತುದಿಯಲ್ಲಿ ಯೋಗಾಸನದ ಭಂಗಿ, ಭಾರತದ ಭೂಪಟ, ದೀಪಾವಳಿ ಲ್ಯಾಂಪ್‌, ವಿಶ್ವಕಪ್‌ ಮೊದಲಾದ ನೂರಾರು ಕಲಾಕೃತಿಗಳನ್ನು ರಚಿಸಿದ್ದು ಇದೀಗ ಬೆಂಕಿ ಕಡ್ಡಿಯ ತುದಿಯಲ್ಲಿ ನಮ್ಮ ಪಾರ್ಲಿಮೆಂಟನ್ನೇ ನಿಲ್ಲಿಸಿದ್ದಾರೆ ಎಂದರೆ ಈ ಸೂಕ್ಷ್ಮ ಕಲಾವಿದನ ಕಲಾನೈಪುಣ್ಯತೆಗೆ ಶರಣು ಎನ್ನಲೇ ಬೇಕು. ವೋಟ್ ಫಾರ್ ಇಂಡಿಯಾ ಎನ್ನುವ ಸಂದೇಶವನ್ನು ಹೊತ್ತಿರುವ ಬೆಂಕಿ ಕಡ್ಡಿಯ ತುದಿಯಲ್ಲಿ ಭಾರತದ ಸಂಸತ್ತಿನ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಅದೇ ರೀತಿ ಸೇವ್‌ ಶಬರಿಮಲೆ ಎಂಬ ಸಂದೇಶದೊಂದಿಗೆ ಶಬರಿಮಲೆಯ ಸೂಕ್ಷ್ಮ ಕಲಾಕೃತಿಯನ್ನೂ ಇದೇ ರೀತಿ ತಯಾರಿಸಿದ್ದರು. ಚಾಕ್ ಪೀಸ್, ಸಾಬೂನು ಮೊದಲಾದ ವಸ್ತುಗಳನ್ನು ಬಳಸಿಯೂ ಇವರು ಪುಟ್ಟ ಪುಟ್ಟ ಅತ್ಯಾಕರ್ಷಕ ಕಲಾಕೃತಿಗಳನ್ನುತಯಾರಿಸಿದ್ದಾರೆ.

ಮುಳ್ಳೇರಿಯಾ ಸಮೀಪದ ತಲೆಬೈಲು ನಿವಾಸಿಯಾಗಿರುವ ಪುಟ್ಟ ಸುಬ್ರಾಯ ಆಚಾರ್ಯ -ಶಾರದಾ ದಂಪತಿಯರ ಪುತ್ರರಾಗಿದ್ದು ಸೂಕ್ಷ್ಮ ಕಲಾವಿದರ ಸ್ಥಾನದಲ್ಲಿ ಪ್ರಸ್ತುತ ಅಗ್ರಪಂಕ್ತಿಯ ಕಲಾವಿದ. ತನ್ನ ಕಲ್ಪನೆಗೆ ಸೂಕ್ಷ್ಮ ಕಲಾಕೃತಿಯ ರೂಪ ನೀಡಿ ಅಚ್ಚರಿ ಮೂಡಿಸುವ ಪುಟ್ಟ ಅಂಚೆ ಕಾರ್ಡ್‌ನಲ್ಲಿ ಓಂ ನಮಃ ಶಿವಾಯ ಎಂದು 6524 ಬಾರಿ ಶಿವ ಪಂಚಾಕ್ಷರಿ ಬರೆದಿದ್ದು, ಈ ಅಕ್ಷರಗಳಿಂದ ಮಾತ್ರ ಶಿವನ ಚಿತ್ರ ಸಹಿತ ಅನೇಕ ಸೂಕ್ಷ್ಮ ಚಿತ್ರ ರಚನೆಗಳನ್ನು ಮಾಡಿದ್ದಾರೆ.

Advertisement

ಅಂಚೆ ಕಾರ್ಡಿನಲ್ಲಿ 150 ಬಾರಿ ವಿವೇಕಾನಂದ ಎಂದು ಬರೆದು ಸ್ವಾಮಿ ವಿವೇಕಾನಂದರ ಚಿತ್ರರಚನೆ, ಭಾರತದ 29 ರಾಜ್ಯಗಳ ಹೆಸರನ್ನು ಬಳಸಿ ಪ್ರಧಾನಿ ಮೋದಿಯವರ ಚಿತ್ರರಚನೆ ಹಾಗೂ ಕೇವಲ ಅರ್ಧ ಇಂಚಿನ ಕಾಗದದಲ್ಲಿ 2014ರ ಕ್ಯಾಲೆಂಡರ್‌ ಸೃಷ್ಠಿಸಿದ್ದಾರೆ. ಮಾತ್ರವಲ್ಲದೆ ಹಳೆಯ ನಾಣ್ಯಗಳ, ನೋಟುಗಳ ಸಂಗ್ರಹವನ್ನೂ ಹವ್ಯಾಸವಾಗಿಟ್ಟುಕೊಂಡಿರುವ ಇವರ ಕಲಾಭಿಮಾನ ಮಾದರಿಯಾಗಿದೆ.


ವೃತ್ತಿಯಲ್ಲಿ ಅಕ್ಕಸಾಲಿಗರಾಗಿದ್ದು, ಅದರ ನಡುವೆಯೂ ಸೂಕ್ಷ್ಮಾತಿ ಸೂಕ್ಷ್ಮ ಕಲಾಕೃತಿಗಳ ಕೆತ್ತನೆಗೆ ಸಮಯ ಕಂಡುಕೊಳ್ಳುವ ಈ ಉತ್ತಮ ಕಲಾವಿದನ ಅನನ್ಯ ಸಾಧನೆಗೆ ಸಂದ ಅದೆಷ್ಟೋ ಗೌರವ ಸಮ್ಮಾನ, ಪ್ರಶಸ್ತಿಗಳ ಪ್ರೋತ್ಸಾಹ ಇನ್ನೂ ಅಸಂಖ್ಯಾತ, ಊಹಾತೀತ ಕಲೆಯ ಸೃಷ್ಠಿಗೆ ಕಾರಣವಾಗಲಿ.

“ಬಾಲ್ಯದಿಂದಲೇ ಕಲೆಯ ಮೇಲೆ ಅತೀವವಾದ ಕುತೂಹಲ, ಒಲವು ಮೂಡಿತ್ತು. ಆದರೆ ವ್ಯತ್ಯಸ್ತವಾಗಿ ಏನಾದರೂ ಮಾಡಬೇಕೆಂಬ ಹಂಬಲ ಸೂಕ್ಷ್ಮ ಕಲಾಕೃತಿಗಳ ರಚನೆಗೆ ಪ್ರೇರಣೆಯಾಯಿತು. ಹೊಸಹೊಸ ಪ್ರಯೋಗಗಳ ಮೂಲಕ ಸಾಧ್ಯತೆಗಳನ್ನು ಕಲಾಕೃತಿಗಳನ್ನಾಗಿ ಮಾಡುವ ಪ್ರಯತ್ನದಲ್ಲಿದ್ದೇನೆ.”
ವೆಂಕಟೇಶ್‌ ಆಚಾರ್ಯ (ಪುಟ್ಟ ಇಚ್ಲಂಗೋಡು)

ಚಿತ್ರ- ವರದಿ
ಅಖೀಲೇಶ್‌ ನಗುಮುಗಂ

Advertisement

Udayavani is now on Telegram. Click here to join our channel and stay updated with the latest news.

Next