Advertisement

ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣ: ನಗರ ಪೊಲೀಸ್ ಕಮಿಷನರ್ ಹರ್ಷ ಹೇಳಿದ್ದೇನು?

09:47 AM Jan 21, 2020 | Team Udayavani |

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅವರಣದಲ್ಲಿ ಸ್ಫೋಟಕ ತುಂಬಿದ್ದ ಶಂಕಿತ ಬ್ಯಾಗ್ ಒಂದು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಹರ್ಷ ಐ.ಪಿ.ಎಸ್. ಅವರು ತನಿಖೆಯಲ್ಲಿ ಇದುವರೆಗೆ ಆಗಿರುವ ಬೆಳಣಿಗೆಗಳ ಕುರಿತು ಮಾಧ್ಯಮಗಳಿಗೆ ವಿವರವಾದ ಮಾಹಿತಿಯನ್ನು ಒದಗಿಸಿದ್ದಾರೆ.

Advertisement

ಬಜ್ಪೆಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ 8.49ರ ಸುಮಾರಿಗೆ ಡಿಪಾರ್ಚರ್ ಟರ್ಮಿನಲ್ ಬಳಿಯ ಟಿಕೆಟ್ ಕೌಂಟರ್ ಬಳಿ ಹತ್ತಿರ ಶಂಕಾಸ್ಪದ ವ್ಯಕ್ತಿಯೊಬ್ಬ ಶಂಕಿತ ಬ್ಯಾಗ್ ಅನ್ನು ಬಿಟ್ಟುಹೋದ ಬಳಿಕ ಸ್ಥಳದಲ್ಲಿ ಭದ್ರತೆಗೆ ನಿಯೋಜಿತವಾಗಿರುವ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ನವರು ತಮ್ಮ ಸೆಕ್ಯುರಿಟಿ ನಿಯಮಾವಳಿಗೆ ಅನುಗುಣವಾಗಿ ಶಂಕಿತ ಬ್ಯಾಗ್ ಅನ್ನು ತೀವ್ರ ತಪಾಸಣೆ ನಡೆಸಿ ಇದು ಸ್ಫೋಟಕ ಇರಬಹುದು ಎಂಬ ಸಂಶಯದ ಮೇಲೆ ಈ ವಿಚಾರವನ್ನು ಮಂಗಳೂರು ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುತ್ತಾರೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸ್ ಇಲಾಖೆಯು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳವನ್ನು ಘಟನಾ ಸ್ಥಳಕ್ಕೆ ಕರೆಸಿಕೊಳ್ಳುತ್ತಾರೆ. ಸ್ಥಳಕ್ಕಾಗಮಿಸಿದ ಬಾಂಬ್ ಪತ್ತೆ ದಳದವರು ಪ್ರಾಥಮಿಕ ಪರೀಕ್ಷೆಯನ್ನು ನಡೆಸಿ ಇದನ್ನು ನಿಷ್ಕ್ರಿಯಗೊಳಿಸುವುದು ಅತ್ಯಗತ್ಯ ಎಂಬ ನಿರ್ಧಾರಕ್ಕೆ ಬರುತ್ತಾರೆ.

ಬಳಿಕ ಸ್ಥಳಿಯ ಪೊಲೀಸರ ನೆರವಿನಿಂದ ಘಟನಾ ಸ್ಥಳವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದುಕೊಂಡು ಸ್ಫೋಟಕ ಕಂಟೈನರ್ ನೆರವಿನಿಂದ ಶಂಕಿತ ಸ್ಪೋಟಕ ತುಂಬಿದ್ದ ಬ್ಯಾಗನ್ನು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತದೆ. ಬಳಿಕ ಸ್ಫೋಟಕವನ್ನು ಸುರಕ್ಷಿತವಾಗಿ ಸ್ಫೋಟಿಸುವ ಹೊಣೆಯನ್ನು ಬಾಂಬ್ ನಿಷ್ಕ್ರಿಯ ದಳದವರು ಕೆಂಜಾರು ಮೈದಾನದಲ್ಲಿ ಯಶಸ್ವಿಯಾಗಿ ನಡೆಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಸಿ.ಎ.ಎಸ್.ಎಫ್.ನ ದೂರಿನ ಮೇರೆಗೆ ಬಜ್ಪೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಮತ್ತು ಲಭ್ಯವಿರುವ ಎಲ್ಲಾ ಸಾಕ್ಷ್ಯಾಧಾರಗಳ ಮೇಲೆ ಪೊಲೀಸರು ಈಗಾಗಲೇ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ಕೃತ್ಯ ಎಸಗಿರುವ ದುಷ್ಕರ್ಮಿಯ ಪ್ರಾಥಮಿಕ ಚಹರೆ ಮಾಹಿತಿಗಳು ಲಭ್ಯವಾಗಿದ್ದು ಅದನ್ನು ಸಾರ್ವಜನಿಕ ಮಾಹಿತಿ ಮತ್ತು ಗುರುತಿಸುವಿಕೆಗಾಗಿ ಪೊಲೀಸರು ಈಗಾಗಲೇ ಎಲ್ಲೆಡೆ ಹಂಚಿಕೊಂಡಿದ್ದಾರೆ.


ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ಲಭಿಸಿರುವ ಮಾಹಿತಿಯಂತೆ, ಮಧ್ಯವಯಸ್ಕ ಪುರುಷ ತನ್ನ ಗುರುತನ್ನು ಮರೆಮಾಚಿ ಆಟೋ ರಿಕ್ಷಾದಲ್ಲಿ ಬಂದು ಈ ದುಷ್ಕೃತ್ಯ ಎಸಗಿರುವುದು ಮೇಲ್ನೋಟದಲ್ಲಿ ಕಂಡುಬಂದಿದೆ. ಈಗಾಗಲೇ ಮೂರು ತನಿಖಾ ತಂಡಗಳನ್ನು ರಚಿಸಲಾಗಿದೆ. ಮತ್ತು ತನಿಖೆಯಲ್ಲಿ ಹಲವಾರು ಮಾಹಿತಿಗಳು ಈ ತನಿಖಾ ತಂಡಗಳಿಗೆ ಈಗಾಗಲೇ ಲಭಿಸಿದೆ.

Advertisement

ಈ ರೀತಿಯ ವಿಧ್ವಂಸಕ ಕೃತ್ಯಗಳನ್ನು ಪತ್ತೆ ಹಚ್ಚಲು ಇರುವ ಸಂಸ್ಥೆಗಳ ಜೊತೆ ಈ ಘಟನೆಯಲ್ಲಿ ಲಭ್ಯವಿರುವ ಸುಳಿವುಗಳನ್ನು ಈಗಾಗಲೇ ಹಂಚಿಕೊಳ್ಳಲಾಗಿದೆ. ಈ ಕುರಿತಾದಂತೆ ಸಾರ್ವಜನಿಕರಿಗೆ ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸುಳಿವು ಲಭಿಸಿದಲ್ಲಿ ಅದನ್ನು ಪೊಲೀಸ್ ಇಲಾಖೆಯ ಜೊತೆಗೆ ಹಂಚಿಕೊಳ್ಳುವಂತೆ ಕಮಿಷನರ್ ಅವರು ಸಾರ್ವಜನಿಕರಲ್ಲಿ ವಿನಂತಿಯನ್ನು ಮಾಡಿಕೊಂಡಿದ್ದಾರೆ.

ಈಗಾಗಲೇ ಪೊಲೀಸರು ಬಿಡುಗಡೆಗೊಳಿಸಿರುವ ಶಂಕಾಸ್ಪದ ವ್ಯಕ್ತಿಯ ಚಹರೆಯನ್ನು ಹೋಲುವ ವ್ಯಕ್ತಿಗಳ ಮಾಹಿತಿ ಎಲ್ಲಿಯಾದರೂ ಸಿಕ್ಕಿದಲ್ಲಿ ಅಥವಾ ಈ ಹಿಂದೆ ಶಂಕಾಸ್ಪದ ವ್ಯಕ್ತಿಯನ್ನು ಮಂಗಳೂರು ನಗರದಲ್ಲಿ ಯಾರಾದ್ರೂ ನೋಡಿದ್ದಲ್ಲಿ, ಅಥವಾ ಬೇರಿನ್ಯಾವುದೇ ಸುಳಿವಿದ್ದಲ್ಲಿ ಅವುಗಳನ್ನು ಪೊಲೀಸ್ ಇಲಾಖೆಯ ಯಾವುದೇ ಅಧಿಕಾರಿಗೆ ಅಥವಾ ಪೊಲೀಸ್ ನಿಯಂತ್ರಣ ಕೊಠಡಿಗೆ ನೀಡಬಹುದು ಎಂದು ಪೊಲೀಸ್ ಕಮಿಷನರ್ ಅವರು ಇದೇ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮಂಗಳೂರು ನಗರದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ನಗರದ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಈಗಾಗಲೇ ಕಟಿಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರದ ಸೂಕ್ಷ್ಮ ಪ್ರದೇಶಗಳ ನಿಗಾವಣೆ ಮತ್ತು ತಪಾಸಣೆಯಲ್ಲಿ ಈಗಾಗಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅತೀ ಶೀಘ್ರದಲ್ಲಿ ಈ ತನಿಖೆಯಲ್ಲಿ ಪೊಲೀಸರು ನಿರ್ಣಾಯಕ ಹಂತವನ್ನು ತಲುಪುವ ವಿಶ್ವಾಸವನ್ನು ಪೊಲೀಸ್ ಕಮಿಷನರ್ ಹರ್ಷ ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next