ಹೊಸದಿಲ್ಲಿ : ‘ಅಸ್ಸಾಂ ಎನ್‌ಆರ್‌ಸಿ (ಅಸ್ಸಾಂ ನ್ಯಾಶನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್) ಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ನಾಶ ಮಾಡಲು ಕೇಂದ್ರ ಗೃಹ ಸಚಿವಾಲಯ ಯತ್ನಿಸುತ್ತಿದೆ’ ಎಂದು ಸುಪ್ರೀಂ ಕೋರ್ಟ್ ಇಂದು ಗಂಭೀರ ಆರೋಪ ಮಾಡಿತು.
‘ಎನ್‌ಆರ್‌ಸಿ ಪ್ರಕ್ರಿಯೆಯನ್ನು ಮುಂದುವರಿಸಿಕೊಂಡು ಹೋಗುವುದು ಗೃಹ ಸಚಿವಾಲಯಕ್ಕೆ ಬೇಕಾಗಿಲ್ಲ; ಹಾಗಾಗಿ ಈ ಪ್ರಕ್ರಿಯೆಯನ್ನು ನಾಶ ಮಾಡುವ ಉದ್ದೇಶದಲ್ಲಿ ಪ್ರತಿ ಬಾರಿಯೂ ಒಂದಲ್ಲ ಒಂದು ಕಾರಣವನ್ನು ಹಿಡಿದುಕೊಂಡು ಅದು ಬರುತ್ತಿದೆ’ ಎಂದು ಸುಪ್ರೀಂ ಕೋರ್ಟ್ ಚಾಟಿ ಬೀಸಿತು.
‘ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್) ಪ್ರಕೃತ ಚುನಾವಣಾ ಕರ್ತವ್ಯದಲ್ಲಿ ವ್ಯಸ್ತವಾಗಿರುವುದರಿಂದ ಎರಡು ವಾರಗಳ ಮಟ್ಟಿಗೆ ಎನ್‌ಆರ್‌ಸಿ ಕೆಲಸ ನಿಲ್ಲಿಸುವುದಕ್ಕೆ ಅನುಮತಿ ನೀಡುವಂತೆ’ ಕೋರಿರುವ ಕೇಂದ್ರ ಗೃಹ ಸಚಿವಾಲಯವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, “ಎನ್‌ಆರ್‌ಸಿ ಪ್ರಕ್ರಿಯೆ ಮುಂದುವರಿಸಲು ನಿಮಗೆ ಇಷ್ಟವಿಲ್ಲ; ಹಾಗಾಗಿ ನೀವು ಪ್ರತೀ ಬಾರಿ ಒಂದಲ್ಲ ಒಂದು ನೆಪ ಹಿಡಿದುಕೊಂಡು ಬರುತ್ತೀರಿ” ಎಂದು ಖಂಡತುಂಡವಾಗಿ ಹೇಳಿತು.
‘ಆದರೂ ಎನ್‌ಆರ್‌ಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿರುವ ಜುಲೈ 31ರ ಡೆಡ್ ಲೈನನ್ನು ನಾವು ಎಷ್ಟು ಮಾತ್ರಕ್ಕೂ ವಿಸ್ತರಿಸುವುದಿಲ್ಲ’ ಎಂದು ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ ಸರಕಾರಕ್ಕೆ ಮುಲಾಜಿಲ್ಲದೆ ಹೇಳಿತು.
ಎನ್‌ಆರ್‌ಸಿ ಪ್ರಕ್ರಿಯೆ ಮುಂದುವರಿಯುವಂತೆ ರಾಜ್ಯದ ಕೆಲವು ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡುವುದನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗವನ್ನು ಕೇಳಿಕೊಂಡಿತು.