ಹೊಸದಿಲ್ಲಿ : ಕಾಂಗ್ರೆಸ್ ಪಕ್ಷದ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರ ಹತ್ತು ವರ್ಷ ಪ್ರಾಯದ ಪುತ್ರಿಗೆ ರೇಪ್ ಬೆದರಿಕೆ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯ ಈ ಕುರಿತು ಕೇಸೊಂದನ್ನು ದಾಖಲಿಸಿಕೊಂಡು ಬೆದರಿಕೆಗಳ ಹಿಂದಿರುವ ವ್ಯಕ್ತಿಯನ್ನು ಗುರುತಿಸುವಂತೆ ಆದೇಶಿಸಿದೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರಿಗೆ ಬೆದರಿಕೆ ಒಡ್ಡಲು ಬಳಸಲಾಗಿರುವ ಟ್ವಿಟರ್ ಖಾತೆಯ ವಿವರಗಳನ್ನು ಒದಗಿಸುವಂತೆಯೂ ಮುಂಬಯಿ ಪೊಲೀಸರನ್ನು ಕೇಂದ್ರ ಗೃಹ ಸಚಿವಾಲಯ ಕೇಳಿಕೊಂಡಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರಿಯಾಂಕಾ ಚತುರ್ವೇದಿ ಅವರು ಈ ಬಗ್ಗೆ ನಿನ್ನೆ ಸೋಮವಾರ ಮುಂಬಯಿ ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಟ್ವಿಟರ್‌ನಲ್ಲಿ ಟ್ರೋಲ್ ಖಾತೆಯೊಂದನ್ನು ಬಳಸಿಕೊಂಡು ತನಗೆ ಮತ್ತು ತನ್ನ ಪುತ್ರಿಗೆ ಬೆದರಿಕೆ ಒಡ್ಡಲಾಗಿದೆ ಎಂದವರು ದೂರಿದ್ದರು. “ಪೊಲೀಸರು ನನಗೆ ಸೂಕ್ತ ಕ್ರಮದ ಆಶ್ವಾಸನೆ ನೀಡಿದ್ದಾರೆ’ ಎಂದು ಪ್ರಿಯಾಂಕಾ ಅವರು ಮಾಧ್ಯಮಕ್ಕೆ ತಿಳಿಸಿದ್ದರು.
ಟ್ವಿಟರ್ ಟ್ರೋಲಿಗ ತನ್ನ ಪ್ರೊಫೈಲ್‌ನಲ್ಲಿ ಶ್ರೀರಾಮನ ಚಿತ್ರವನ್ನು ಹಾಕಿಕೊಂಡಿರುವ ಹೊರತಾಗಿಯೂ ಆತ ನೀಚತನದ ಅಭಿಪ್ರಾಯ ಬರೆಯಲು ಹೇಸಿಲ್ಲ’ ಎಂದು ಪ್ರಿಯಾಂಕಾ ಅವರು ಹೇಳಿದ್ದರು.