Advertisement

ಬಂದಿದೆ ಹೊಸ ಎಂಜಿ ಹೆಕ್ಟರ್‌ ಎಲೆಕ್ಟ್ರಿಕ್‌ ಎಸ್‌ಯುವಿ

10:02 AM Dec 06, 2019 | Team Udayavani |

ಹೊಸದಿಲ್ಲಿ: ಭಾರತದ ಕಾರು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಅಮೆರಿಕದ ಪ್ರಸಿದ್ಧ ಕಾರು ತಯಾರಿಕ ಕಂಪೆನಿ ಎಂಜಿ ಹೆಕ್ಟರ್‌ (ಮೋರಿಸ್‌ ಗ್ಯಾರೇಜಸ್‌) ಇದೀಗ ಭಾರತದಲ್ಲಿ ತನ್ನ ಮೊತ್ತ ಮೊದಲ ಎಲೆಕ್ಟ್ರಿಕ್‌ ಕಾರನ್ನು ಪರಿಚಯಿಸಿದೆ.

Advertisement

ಬದಲಾದ ಸಂದರ್ಭದಲ್ಲಿ ಭಾರತದಲ್ಲೂ ಎಲೆಕ್ಟ್ರಿಕ್‌ ಕಾರುಗಳ ಹವಾ ಶುರುವಾಗಿದ್ದು ಎಂಜಿ ಹೆಕ್ಟರ್‌ ಕೂಡ ಈ ದೃಷ್ಟಿಯಲ್ಲಿ ಇತರ ಪ್ರಸಿದ್ಧ ಕಾರು ತಯಾರಿಕೆ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡುವ ಉದ್ದೇಶವನ್ನು ಹೊಂದಿದೆ.

ಸದ್ಯ ಈ ಕಾರಿನ ಬಿಡಿಭಾಗಗಳನ್ನು ಆಮದು ಮಾಡಿ, ಭಾರತದಲ್ಲಿ ಜೋಡಿಸಲಾಗುತ್ತದೆ. ಎಂಜಿ ಹೆಕ್ಟರ್‌ ನೂತನ ಕಾರಿಗೆ ಝಡ್‌ಎಸ್‌ ಇವಿ ಎಂದು ಹೆಸರಿಟ್ಟಿದೆ.

ವಿಶೇಷತೆಗಳೇನು?
ಸಾಕಷ್ಟು ಐಷಾರಾಮಿ ಮತ್ತು ಅತಿ ಹೆಚ್ಚು ಫೀಚರ್‌ಗಳನ್ನು ಹೊಂದಿರುವ ಕಾರು ಇದು. 44.5 ಕಿ.ವ್ಯಾ. ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು ಸಿಂಗಲ್‌ ಚಾರ್ಜ್‌ಗೆ 340 ಕಿ.ಮೀ. ಕ್ರಮಿಸಲಿದೆ. ಲೀಥಿಯಂ ಅಯಾನ್‌ ಬ್ಯಾಟರಿ ಇದ್ದು, 50 ಕಿ.ವ್ಯಾ ಡಿಸಿ ಚಾರ್ಜರ್‌ನಲ್ಲಿ ಕೇವಲ 40 ನಿಮಿಷದಲ್ಲಿ ಶೇ.80ರಷ್ಟು ಚಾರ್ಜ್‌ ಆಗುವ ಸಾಮರ್ಥ್ಯ ಹೊಂದಿದೆ. 7.4 ಕಿ.ವ್ಯಾ.ನ ಸಾಮಾನ್ಯ ಚಾರ್ಜರ್‌ ಆದರೆ ಕಾರಿನ ಬ್ಯಾಟರಿ ಪೂರ್ಣ ಚಾರ್ಜ್‌ ಆಗಲು 7 ತಾಸು ತಗಲುತ್ತದೆ. ಕಾರಿನೊಂದಿಗೆ ಇದೇ ಚಾರ್ಜರ್‌ ಉಚಿತವಾಗಿ ಸಿಗುತ್ತದೆ. ಕಾರಿನ ಮೋಟಾರು 141 ಎಚ್‌ಪಿ ಸಾಮರ್ಥ್ಯದ್ದಾಗಿದ್ದು 353 ಎನ್‌ಎಂ ಟಾರ್ಕ್‌ ಹೊಂದಿದೆ. ಇದರೊಂದಿಗೆ 8 ಇಂಚಿನ ಇನ್ಫೋ ಎಂಟರ್‌ಟೈನ್‌ಮೆಂಟ್‌ ವ್ಯವಸ್ಥೆ, ಆ್ಯಪಲ್‌, ಆಂಡ್ರಾಯಿಡ್‌ ಅಟೋ (ಕಾರು ನಿಯಂತ್ರಣ ವ್ಯವಸ್ಥೆ), ಬ್ಲೂಟೂತ್‌, ಕೆಮರಾ ವ್ಯವಸ್ಥೆ, ಸನ್‌ರೂಫ್, ಏರ್‌ಫಿಲ್ಟರ್‌ಗಳನ್ನು ಕಾರು ಹೊಂದಿದೆ.

ಚಾರ್ಜಿಂಗ್‌ ಸ್ಟೇಷನ್‌
ಹೊಸ ಎಲೆಕ್ಟ್ರಿಕ್‌ ಕಾರು ಮಾರಾಟದೊಂದಿಗೆ ಎಂಜಿ ಹೆಕ್ಟರ್‌ ಕಂಪೆನಿ, ಈ ಕಾರು ಮಾರಾಟವಾಗುವ ಸ್ಥಳದಲ್ಲಿ 50 ಕಿ.ವ್ಯಾ. ಡಿಸಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಲಿದೆ. ಈಗಾಗಲೇ ದೇಶದ ಐದು ನಗರಗಳಾದ ದಿಲ್ಲಿ, ಹೈದರಾಬಾದ್‌, ಮುಂಬಯಿ, ಬೆಂಗಳೂರು, ಅಹಮದಾಬಾದ್‌ಗಳ ಷೋರೂಂಗಳಲ್ಲಿ ಈ ಚಾರ್ಜಿಂಗ್‌ ಸ್ಟೇಷನ್‌ಗಳು ಲಭ್ಯವಿವೆ. ಮುಂದಿನ ಐದು ವರ್ಷಗಳಲ್ಲಿ ದೇಶದ ಮೆಟ್ರೋಗಳಲ್ಲಿ ಪ್ರತಿ 5 ಕಿ.ಮೀ.ಗೆ 1 ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸುವ ಗುರಿಯನ್ನೂ ಅದು ಹೊಂದಿದೆ. ಹೈವೇಯಲ್ಲಿ ಪ್ರತಿ 25 ಕಿ.ಮೀ.ಗೆ ಒಂದರಂತೆ ಚಾರ್ಜಿಂಗ್‌ ಸ್ಟೇಷನ್‌ ಸ್ಥಾಪಿಸಲಾಗುವುದು ಎಂದು ಅದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next