Advertisement

ಮಹಾನಗರ ಪಾಲಿಕೆ ಚುನಾವಣೆ: ಕಾಂಗ್ರೆಸ್‌, ಬಿಜೆಪಿಗೆ ಸವಾಲಿನ ಕಣ

09:32 PM Oct 22, 2019 | mahesh |

ಮಹಾನಗರ: ಮಹಾನಗರ ಪಾಲಿಕೆಗೆ ನಾಮಪತ್ರ ಸಲ್ಲಿಕೆ ಆರಂಭಕ್ಕೆ ಒಂದು ದಿನ ಬಾಕಿಯಿರುವಂತೆಯೇ ರಾಜಕೀಯ ಪಕ್ಷಗಳಿಂದ ಚುನಾವಣೆೆ ಸಿದ್ದತೆ ಆರಂಭಗೊಂಡಿದೆ. ಈ ಚುನಾವಣೆಯು ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಪ್ರತಿಷ್ಠೆ ಕಣವಾಗಿ ಪರಿಗಣಿತವಾಗಿದ್ದು, ಕಾಂಗ್ರೆಸ್‌ ಪಾಲಿಕೆಯಲ್ಲಿ ಅಧಿಕಾರ ಉಳಿಸಿಕೊಳ್ಳುವ ಸವಾಲು ಎದುರಿಸುತ್ತಿದ್ದರೆ, ಅತ್ತ ಬಿಜೆಪಿ ಅಧಿಕಾರ ಗಳಿಸಿಕೊಳ್ಳುವ ತವಕದಲ್ಲಿದೆ.

Advertisement

ಪಾಲಿಕೆಗೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 35 ಸ್ಥಾನಗಳನ್ನು ಗಳಿಸಿ ಆಡಳಿತ ಪಕ್ಷವಾಗಿ ಹೊರ ಹೊಮ್ಮಿತ್ತು. ಅದಕ್ಕೆ ಹಿಂದಿನ ಅವಧಿಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ 20 ಸ್ಥಾನಗಳಿಸಿ ವಿರೋಧ ಪಕ್ಷದ ಸ್ಥಾನದಲ್ಲಿತ್ತು. ಉಳಿದಂತೆ ಜೆಡಿಎಸ್‌ 2, ಸಿಪಿಎಂ, ಎಸ್‌ಡಿಪಿಐ ಹಾಗೂ ಪಕ್ಷೇತರರು ಒಂದು ಸ್ಥಾನವನ್ನು ಪಡೆದುಕೊಂಡಿದ್ದರು.

ಈ ಬಾರಿಯೂ ಹಿಂದಿನ ಸಾಧನೆ ಮರುಕಳಿಸುವಂತೆ ಮಾಡಿ ಮತ್ತೆ ಅಧಿಕಾರಕ್ಕೇರುವ ಸವಾಲು ಕಾಂಗ್ರೆಸ್‌ ಮುಂದಿದೆ. ಆದರೆ, 6 ವರ್ಷಗಳಲ್ಲಿ ರಾಜಕೀಯವಾಗಿ ಬಹಳಷ್ಟು ಬದಲಾವಣೆಗಳು, ಸ್ಥಿತ್ಯಂತರಗಳು ಆಗಿವೆ. ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ಪಾಲಿಕೆ ವ್ಯಾಪ್ತಿಯ ಮಂಗಳೂರು ದಕ್ಷಿಣ ಹಾಗೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿದೆ. ಇದು ಮಹಾನಗರ ಪಾಲಿಕೆ ಚುನಾವಣೆ ಮೇಲೆ ಪರಿಣಾಮ ಬೀರಬಹುದೇ ಎಂಬ ವಿಶ್ಲೇಷಣೆ ನಡೆಯುತ್ತಿವೆ. ಆದರೆ ವಿಧಾನಸಭಾ, ಲೋಕಸಭಾ ಚುನಾವಣೆಗಳು ಹಾಗೂ ಸ್ಥಳೀಯ ಚುನಾವಣೆಗಳ ನಡುವೆ ಹೋಲಿಕೆ ಸರಿಯಾಗುವುದಿಲ್ಲ. ಮಹಾಚುನಾವಣೆಗಳಲ್ಲಿ ರಾಜ್ಯ, ರಾಷ್ಟ್ರಮಟ್ಟದ ಸಮಸ್ಯೆಗಳು, ವಿಚಾರಗಳು ಪರಿಣಾಮ ಬೀರಿದರೆ ಸ್ಥಳೀಯ ಚುನಾವಣೆಗಳಲ್ಲಿ ಸ್ಥಳೀಯ ಸಮಸ್ಯೆಗಳು, ಬೆಳವಣಿಗೆಗಳು ಪ್ರಮುಖವಾಗಿರುತ್ತವೆ ಎಂಬ ವಾದವನ್ನು ಮುಂದಿಡಲಾಗುತ್ತಿದೆ.

ಲೋಕಸಭಾ ಚುನಾವಣೆಯ ಅನಂತರ ನಡೆದಿರುವ ನಗರಾಡಳಿತ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿಗಿಂತ ಉತ್ತಮ ಸಾಧನೆ ಮಾಡಿದೆ ಎಂಬ ಲೆಕ್ಕಚಾರವನ್ನು ಇದಕ್ಕೆ ಸಮರ್ಥನೆಯಾಗಿ ನೀಡಲಾಗುತ್ತಿದೆ.

ರಾಜಕೀಯ ಚಿತ್ರಣ
2018ರ ಮೇ ತಿಂಗಳಿನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬರುವ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಭಾರೀ ಮತಗಳ ಅಂತರದಿಂದ ಜಯಗಳಿಸುವ ಮೂಲಕ ಎರಡೂ ಕ್ಷೇತ್ರಗಳನ್ನು ಮರಳಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ವಿರುದ್ಧ ಬಿಜೆಪಿ 16,075 ಮತಗಳ ಅಂತರದಿಂದ ಜಯಗಳಿಸಿತ್ತು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ವಿರುದ್ದ ಬಿಜೆಪಿ 26, 648 ಮತಗಳ ಭಾರಿ ಅಂತರದ ಜಯ ಸಾಧಿಸಿತ್ತು. ಇದಲ್ಲದೆ ಎರಡೂ ಪಕ್ಷಗಳ ಲೆಕ್ಕಚಾರ ಹಾಗೂ ರಾಜಕೀಯ ಪಂಡಿತರ ವಿಶ್ಲೇಷಣೆಗಳು ಬುಡಮೇಲುಗೊಂಡು ಜಿಲ್ಲೆಯ 8 ವಿಧಾನಸಭಾ ಸ್ಥಾನಗಳ ಪೈಕಿ 7ರಲ್ಲಿ ಜಯ ಸಾಧಿಸಿ ಬಿಜೆಪಿ ಮಹತ್ತರ ಸಾಧನೆ ದಾಖಲಿಸಿತ್ತು.

Advertisement

2019 ಎಪ್ರಿಲ್‌ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ಹಾಗೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನ ಸಾಧನೆಯನ್ನು ವಿಧಾನಸಭಾ ಚುನಾವಣೆಗಿಂತ ಇನ್ನಷ್ಟು ಉತ್ತಮಗೊಳಿಸಿತ್ತು. ಜಿಲ್ಲೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರ ಬಿಜೆಪಿಗೆ ಅಧಿಕ ಲೀಡ್‌ ನೀಡಿದ ಎರಡನೇ ಕ್ಷೇತ್ರವಾಗಿದ್ದು ಕಾಂಗ್ರೆಸ್‌ಗಿಂತ 46,088 ಅಧಿಕ ಮತಗಳು ದೊರಕಿತ್ತು. ಮಂಗಳೂರು ದಕ್ಷಿಣದಲ್ಲಿ 32,835 ಮತಗಳ ಮುನ್ನಡೆಯನ್ನು ಬಿಜೆಪಿಗೆ ಒದಗಿಸಿಕೊಟ್ಟಿತ್ತು.

ಅನಿವಾರ್ಯ
ಬಿಜೆಪಿಗೆ ಒಂದೆಡೆ ಮಹಾನಗರ ಪಾಲಿಕೆಯಲ್ಲಿ ಮರಳಿ ಅಧಿಕಾರವನ್ನು ಗಳಿಸುವುದರ ಜತೆಗೆ ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಗಳಿಸಿರುವ ಬಹುಮತವನ್ನು ಉಳಿಸಿಕೊಳ್ಳುವ ಅನಿವಾರ್ಯಯೂ ಇದೆ. ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದು ರಾಜಕೀಯವಾಗಿಯೂ ಆ ಪಕ್ಷಕ್ಕೆ ಮಹತ್ವದ ಚುನಾವಣೆಯಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಪಾಲಿಗೆ ಪಾಲಿಕೆ ಚುನಾವಣೆ ಪ್ರತಿಷೆ§ಯ ಕಣವೂ ಆಗಿದೆ.

ಫಲಿತಾಂಶದಲ್ಲಿ ತಿರುವು-ಮುರುವು
2008ರಲ್ಲಿ ಮನಪಾದ 60 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 35 ಕಾಂಗ್ರೆಸ್‌ 21 ಹಾಗೂ ಓರ್ವ ಜೆಡಿಎಸ್‌, ಓರ್ವ ಸಿಪಿಎಂ ಹಾಗೂ ಇಬ್ಬರು ಪಕ್ಷೇತರ ಸದಸ್ಯರನ್ನು ಹೊಂದಿತ್ತು. 2013ರಲ್ಲಿ ನಡೆದ ಚುನಾವಣೆಯಲ್ಲಿ ಈ ಫಲಿತಾಂಶ ಸಂಪೂರ್ಣ ತಿರುಗು ಮುರುಗು ಗೊಂಡಿತು. ಕಾಂಗ್ರೆಸ್‌-35 , ಬಿಜೆಪಿ-20 ಸ್ಥಾನವನ್ನು ಪಡೆಯಿತು. ಜೆಡಿಎಸ್‌ ತನ್ನ ಬಲವನ್ನು ಕ್ಕೇರಿಸಿಕೊಂಡರೆ 1 ಸ್ಥಾನವನ್ನು ಪಡೆದುಕೊಂಡ ಎಸ್‌ಡಿಪಿಐ ಮಹಾನಗರಪಾಲಿಕೆಗೆ ಪ್ರವೇಶಿತ್ತು. ಸಿಪಿಎಂ ತನ್ನ 1 ಸ್ಥಾನವನ್ನು ಉಳಿಸಿಕೊಂಡರೆ, ಪಕ್ಷೇತರ ಸದಸ್ಯರ ಸಂಖ್ಯೆ 2 ರಿಂದ 1ಕ್ಕೆ ಇಳಿಯಿತು.

- ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next