Advertisement
ಕೇಂದ್ರ ಸರಕಾರದ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯ ಮೆಟ್ರೋಲೈಟ್ ಎಂಬ ಮಾದರಿಯಲ್ಲಿ ನಗರ ರೈಲು ಸಂಚಾರ ವ್ಯವಸ್ಥೆಯನ್ನು ಸಣ್ಣ ಹಾಗೂ ಮಧ್ಯಮ ಗಾತ್ರದ ನಗರಗಳಲ್ಲಿ ಅನುಷ್ಠಾನಗೊಳಿಸಲು ಮುಂದಾಗಿದೆ. ಮಹಾನಗರಗಳಲ್ಲಿ ಮೆಟ್ರೋ ರೈಲು ವ್ಯವಸ್ಥೆ ಸಂಚಾರ ದಟ್ಟಣೆ ನಿರ್ವಹಣೆಗೆ ಯಶಸ್ವಿ ಪರಿಹಾರವಾಗುತ್ತಿರುವ ಹಿನ್ನೆಲೆಯಲ್ಲಿ ಇದೇ ಮಾದರಿಯಲ್ಲೇ ರೂಪಿಸಿರುವ ಅಗ್ಗದ ಹಗುರ ನಗರ ರೈಲು ಸಂಚಾರ ವ್ಯವಸ್ಥೆ ಇದಾಗಿದೆ. ಪ್ರಸ್ತುತ ಕಾರ್ಯಾಚರಿಸುತ್ತಿರುವ ಮೆಟ್ರೊ ರೈಲು ಮಾದರಿಯಲ್ಲಿ ಮಂಗಳೂರು ನಗರದಲ್ಲಿ ಲಘು ರೈಲು ಸಂಚಾರ ಆರಂಭಿಸಬೇಕು ಎಂಬ ಬೇಡಿಕೆ ಹಲವಾರು ವರ್ಷಗಳಿಂದ ಇದೆ. ಈ ವರ್ಷ ಎಚ್.ಡಿ. ಕುಮಾರಸ್ವಾಮಿಯವರು ಮಂಡಿಸಿದ್ದ ಕರ್ನಾಟಕ ರಾಜ್ಯ ಸರಕಾರದ ಮುಂಗಡ ಪತ್ರದಲ್ಲೂ ಇದಕ್ಕೆ ಪೂರಕವಾಗಿ ಪ್ರಸ್ತಾವನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಸರಕಾರ ದೇಶದ ಮಧ್ಯಮ ಹಾಗೂ ಸಣ್ಣ ನಗರಗಳಲ್ಲಿ ಜಾರಿಗೆ ತರಲುದ್ದೇಶಿಸಿರುವ ಮೆಟ್ರೋಲೈಟ್ ರೈಲು ವ್ಯವಸ್ಥೆ ಮಂಗಳೂರಿಗೂ ಪೂರಕವಾಗಬಹುದು.
Related Articles
ಮೆಟ್ರೋಲೈಟ್ ವ್ಯವಸ್ಥೆ ಮಂಗಳೂರಿನಂತಹ ನಗರಗಳಿಗೆ ಸೂಕ್ತವಾಗಿದೆ. ಮಂಗಳೂರು ನಗರದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತಿವೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳೂರಿನ ತಲಪಾಡಿಯಿಂದ ಕುಂದಾಪುರದವರೆಗಿನ ರಸ್ತೆಯಲ್ಲಿ ಮಧ್ಯಭಾಗದಲ್ಲಿ ಇರುವ ವಿಭಾಜಕಗಳು ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದ್ದು ಯೋಜನೆಯ ಮಾನದಂಡದಂತೆ ರಸ್ತೆ ಮಧ್ಯದಲ್ಲಿ ಮಾರ್ಗ ನಿರ್ಮಾಣಕ್ಕೆ ಪೂರಕವಾಗಿವೆ. ಮಂಗಳೂರು ನಗರಕ್ಕೆ ಲಘು ರೈಲು ಸಂಚಾರ ಪ್ರಸ್ತಾವನೆ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ಆರಂಭದಲ್ಲಿ ಸ್ಕೈಬಸ್ ಪ್ರಸ್ತಾವನೆ ಕೇಳಿಬಂದಿತ್ತು. ಸ್ಕೈಬಸ್ ಯೋಜನೆ ಗೋವಾದಲ್ಲಿ ವಿಫಲವಾಗಿದೆ ಎಂಬ ಅಂಶಗಳ ಹಿನ್ನೆಲೆಯಲ್ಲಿ ಯೋಜನೆಯ ಗಟ್ಟಿತನದ ಬಗ್ಗೆ ಸಂದೇಹಗಳು ವ್ಯಕ್ತವಾಗಿದ್ದವು. ಆಬಳಿಕ ಪ್ರಸ್ತಾವನೆಯಾಗಿದ್ದು ಮೋನೋರೈಲು. 2008ರಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಬಜೆಟ್‌ನಲ್ಲಿ ಮೋನೋ ರೈಲು ಪ್ರಸ್ತಾವನೆಯನ್ನು ಮಾಡಲಾಗಿತ್ತು. ಸಾಧ್ಯತಾ ವರದಿ ತಯಾರಿಸಲು 1 ಕೋ.ರೂ. ಬಿಡುಗಡೆ ಮಾಡುವುದಾಗಿ ಅಶ್ವಾಸನೆ ದೊರೆತರೂ ಅದೂ ಕಾರ್ಯಗತಗೊಂಡಿಲ್ಲ . ಇವೆೆಲ್ಲದರ ನಡುವೆ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ , ಧಾರವಾಡಗಳಲ್ಲಿ ಮೋನೋರೈಲು ಯೋಜನೆಯನ್ನು ಕೈಗೆತ್ತಿಕೊಳ್ಳಲು ಮಲೇಶ್ಯದ ಸಂಸ್ಥೆಯೊಂದು ಆಸಕ್ತಿ ವಹಿಸಿತ್ತು. ಮಂಗಳೂರಿನಲ್ಲಿ 30 ಕಿ.ಮೀ.ವರೆಗೆ ಮೋನೋರೈಲು ಜಾಲ ಕಲ್ಪಿಸುವ ಬಗ್ಗೆ ಕಂಪೆನಿ ಪ್ರಸ್ತಾವನೆ ಮಾಡಿತ್ತು. ಈ ಬಗ್ಗೆ ಕರ್ನಾಟಕ ಸರಕಾರದೊಂದಿಗೆ ಮಾತುಕತೆ ನಡೆದಿದ್ದ ಬಗ್ಗೆಯೂ ವರದಿಯಾಗಿತ್ತು.
Advertisement
ಮಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯ ಸಮಸ್ಯೆ ಈಗಾಗಲೇ ತೀವ್ರ ಸ್ವರೂಪ ಪಡೆಯುತ್ತಿದೆ. ಸೀಮಿತ ಸಂಖ್ಯೆಯ ಸಂಚಾರ ಸಾಧನಗಳಲ್ಲಿ ಗರಿಷ್ಟ ಪ್ರಯಾಣಿಕರನ್ನು ಒಯ್ಯುವ ಸಂಚಾರ ಸೌಲಭ್ಯಗಳಿಗೆ ಮೊರೆ ಹೋಗುವ ಮೂಲಕ ಸಾರ್ವಜನಿಕ ಸಂಚಾರ ವಾಹನಗಳ ಸಂಖ್ಯೆಯ ಹೆಚ್ಚಳವನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ. ಮಂಗಳೂರು ನಗರದ ಬೆಳವಣಿಗೆಗಳನ್ನು ಊಹಿಸಿಕೊಂಡು ಈಗಿನ ಮತ್ತು ಭವಿಷ್ಯದ ಆವಶ್ಯಕತೆಗಳನ್ನು ಪರಿಗಣಿಸಿ ಒಂದಷ್ಟು ಯೋಜನೆಗಳು ರೂಪಿತವಾಗುವುದು ಮತ್ತು ಅನುಷ್ಠಾನದ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದು ಅವಶ್ಯವೆನಿಸುತ್ತದೆ. ಈ ನಿಟ್ಟಿನಲ್ಲಿ ಮಂಗಳೂರಿಗೆ ಮೆಟ್ರೋಲೈಟ್ ಸಂಚಾರ ಯೋಜನೆಯ ಬಗ್ಗೆ ಈಗಿಂದಲೇ ಚಿಂತನೆ ನಡೆಸುವುದು ಪೂರಕವಾಗಬಹುದು.
ಹೇಗಿರುತ್ತೆ ವ್ಯವಸ್ಥೆದೊಡ್ಡ ನಗರಗಳಲ್ಲಿ ಮೆಟ್ರೋ ಯೋಜನೆ ಜಾರಿಯಾಗುತ್ತಿದೆ. ಆದರೆ ಸಣ್ಣ ನಗರ ಹಾಗೂ ಪಟ್ಟಣಗಳಲ್ಲಿ ಸ್ಥಳಾವಕಾಶ ಪಿಸಿಬಿಲಿಟಿ, ಆರ್ಥಿಕ ಸಂಪನ್ಮೂಲದ ಕೊರತೆ ಮುಂತಾದ ಸಮಸ್ಯೆಗಳಿಂದಾಗಿ ಮೆಟ್ರೋ ರೈಲು ಅನುಷ್ಠಾನ ಕಷ್ಟ ಸಾಧ್ಯವಾಗುತ್ತಿದೆ. ದಿನದಿಂದ ದಿನಕ್ಕೆ ವಾಹನ ದಟ್ಟಣೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸುವ ಅನಿವಾರ್ಯ ಹೆಚ್ಚುತ್ತಿದೆ. ಈ ದಿಶೆಯಲ್ಲಿ ರೈಲು ಆಧಾರಿತ ಸಮೂಹ ಸಾರಿಗೆ ವ್ಯವಸ್ಥೆಯನ್ನು ನಗರದೊಳಗೆ ಅಳವಡಿಸುವುದು ಅನಿವಾರ್ಯವಾಗಿ ಪರಿಣಮಿಸುತ್ತಿದೆ. ಇದಕ್ಕೆ ಬೇಡಿಕೆಯೂ ಹೆಚ್ಚುತ್ತಿದೆ. ಇದಕ್ಕೆ ಪೂರಕವಾಗಿ ಸಣ್ಣ ನಗರ, ಪಟ್ಟಣಗಳಲ್ಲಿ ಮೆಟ್ರೋಲೈಟ್ ರೈಲು ವ್ಯವಸ್ಥೆಯನ್ನು ಅಳವಡಿಸುವುದು ಸರಕಾರದ ಉದ್ದೇಶ.
ಕೇಶವ ಕುಂದರ್