Advertisement

ಬಜೆಟ್‌ ಪ್ರಸ್ತಾವದಲ್ಲೇ ಬಾಕಿಯಾದ ಮೆಟ್ರೋ ರೈಲು !

11:23 PM Feb 18, 2020 | mahesh |

ಮಹಾನಗರ: ಕಳೆದ ವರ್ಷ ಫೆಬ್ರವರಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮಂಡಿಸಿದ್ದ ಬಜೆಟ್‌ನಲ್ಲಿ ನಗರಕ್ಕೆ ಮೆಟ್ರೋ ರೈಲು ಪರಿಚಯಿಸುವ ಪ್ರಸ್ತಾವ ಇದೀಗ ಮೂಲೆ ಗುಂಪಾಗಿದೆ. ಬಜೆಟ್‌ ಮಂಡಿಸಿ ವರ್ಷ ಕಳೆದರೂ ಸಾಧ್ಯಾ-ಸಾಧ್ಯತೆಯ ವರ ದಿಯು ರಾಜ್ಯ ಸರಕಾರಕ್ಕೆ ಇನ್ನೂ ಸಲ್ಲಿಕೆಯಾಗಿಲ್ಲ.

Advertisement

ಇನ್ನೇನು ಕೆಲ ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಬಜೆಟ್‌ ಮಂಡನೆಯಾಗಲಿದ್ದು, ವರ್ಷ ಕಳೆದರೂ, ಕರಾವಳಿಗರ ಮೆಟ್ರೋ ರೈಲು ನಿರೀಕ್ಷೆ ಈಡೇರಲಿಲ್ಲ ಎನ್ನುವುದು ವಾಸ್ತವ. ಮಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ- ಧಾರವಾಡ ನಗರಗಳಲ್ಲಿ ಮೆಟ್ರೋ ರೈಲು ಯೋಜನೆಯ ಬಗ್ಗೆ ಪೂರ್ವ ಕಾರ್ಯ ಸಾಧ್ಯತೆ ವರದಿ ತಯಾರಿಕೆ ಪರಿಶೀಲಿಸಲು ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ ಅವರು ತಮ್ಮ ಬಜೆಟ್‌ನಲ್ಲಿ ಪ್ರಸ್ತಾವಿಸಿದ್ದರು. ಆದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ವಿಚಾರದ ವರದಿಗಳಿನ್ನೂ ರಾಜ್ಯ ಸರಕಾರದ ಕೈ ಸೇರಿಲ್ಲ.

ಹೆಚ್ಚಿದ ಬೇಡಿಕೆ
ಬಂದರು, ವಿಮಾನ ನಿಲ್ದಾಣ, ರೈಲು, ಮೂರು ಹೆದ್ದಾರಿಗಳನ್ನು ಒಳಗೊಂಡಿರುವ ದೇಶದ ಕೆಲವೇ ನಗರಗಳಲ್ಲಿ ಮಂಗಳೂರು ಕೂಡ ಒಂದು. ನಗರ ವಿಸ್ತಾರಗೊಳ್ಳುತ್ತಿದ್ದು, ಆಡಳಿತಾತ್ಮಕವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೀಮಿತವಾದರೂ ವ್ಯವಹಾರಾತ್ಮಕವಾಗಿ ಇದರಾಚೆಗೆ ನಗರ ವ್ಯಾಪಿಸುತ್ತಿದೆ. ಬಿ.ಸಿ. ರೋಡ್‌ವರೆಗೆ, ಮುಡಿಪು, ತಲಪಾಡಿ, ಮೂಲ್ಕಿಯವರೆಗೆ ನಗರವ್ಯಾಪ್ತಿ ವ್ಯಾವಹಾರಿಕವಾಗಿ ವಿಸ್ತರಿಸಿದೆ. ಇನ್ನು, ಮಂಗಳೂರು ಸ್ಮಾರ್ಟ್‌ಸಿಟಿಯಾಗಿ ಬೆಳೆಯಲಿದ್ದು, ಹೀಗಿರುವಾಗ ಮೆಟ್ರೋ ರೈಲು ಮಂಗಳೂರಿಗೆ ಪೂರಕ ಎಂಬ ಬೇಡಿಕೆ ಕೇಳಿಬರುತ್ತಿದೆ.

ಬೆಂಗಳೂರಿನಲ್ಲಿ 2011ರಲ್ಲಿ ಬಿಎಂಆರ್‌ ಸಿಎಲ್‌ನಿಂದ ಮೆಟ್ರೋ ರೈಲು ಕಾರ್ಯಾಚರಣೆ ನಡೆಸಿತ್ತು. ಸದ್ಯ ನೇರಳೆ ಮತ್ತು ಹಸುರು ಎಂಬ ಎರಡು ಬಣ್ಣಗಳಲ್ಲಿ ಪ್ರಸ್ತುತ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ (18.2 ಕಿ.ಮೀ., 17 ನಿಲ್ದಾಣ), ನಾಗಸಂದ್ರದಿಂದ ಯಲಚೇನಹಳ್ಳಿ (24.2 ಕಿ.ಮೀ., 24 ನಿಲ್ದಾಣ)ವರೆಗೆ ಮೆಟ್ರೋ ರೈಲು ಸಂಚರಿಸುತ್ತಿದೆ. ಪ್ರತೀ ದಿನ ಸುಮಾರು 4 ಲಕ್ಷದಷ್ಟು ಪ್ರಯಾಣಿಕರು ಮೆಟ್ರೋ ದಲ್ಲಿ ಸಂಚರಿಸುತ್ತಿದ್ದಾರೆ. ಇದರಿಂದಾಗಿ ಟ್ರಾಫಿಕ್‌ ಸಮಸ್ಯೆ ತುಸು ಕಡಿಮೆಯಾಗಿದೆ ಎಂದು ಹೇಳಬಹುದು.

ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು ಉದಯವಾಣಿಗೆ ಪ್ರತಿಕ್ರಿಯಿಸಿ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ಬಜೆಟ್‌ ನಲ್ಲಿ ಮಂಗಳೂರು ನಗರಕ್ಕೆ ಮೆಟ್ರೋ ರೈಲಿಗೆ ಸಂಬಂಧಿಸಿದ ಪ್ರಸ್ತಾವ ಮುಂದಿಟ್ಟಿದ್ದು ತಿಳಿದಿದೆ. ಅನಂತರ ಅವರ ನೇತೃತ್ವದ ಸರಕಾರ ಯಾವ ನಿರ್ಧಾರ ಕೈಗೊಂಡಿದೆ ಎಂಬ ಬಗ್ಗೆ ಮಾಹಿತಿ ನೀಡಲಿಲ್ಲ. ಈ ವರದಿ ತಿಳಿಸಿದ್ದರೆ ರಾಜ್ಯ ಸರಕಾರಕ್ಕೆ ಪ್ರಸ್ತಾವ ಮಾಡುತ್ತಿದ್ದೆ ಎಂದಿದ್ದಾರೆ.

Advertisement

2006ರಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಮಂಗಳೂರಿಗೆ ಆಗಮಿಸಿದ್ದ ಸಂದರ್ಭ ಸ್ಕೈಬಸ್‌ ಪ್ರಸ್ತಾವನೆಯನ್ನು ಮುಂದಿಟ್ಟಿ ದ್ದರು. ಆಗ ಶಾಸಕರಾಗಿದ್ದ ಎನ್‌. ಯೋಗೀಶ್‌ ಭಟ್‌, ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಪ್ರತಿನಿಧಿಗಳು ಪ್ರಾತ್ಯ ಕ್ಷಿಕೆ ಯೊಂದಿಗೆ ವಿವರಿಸಿದ್ದರು. ಈ ಬಗ್ಗೆ ಆಸಕ್ತಿ ತೋರಿಸಿದ್ದ ಅವರು ಬಿಲ್ಡ್‌ ಆಪರೇಟ್‌ ಆ್ಯಂಡ್‌ ಟ್ರಾನ್ಸ್‌ಫಾರ್‌ (ಬಿಒಟಿ) ಆಧಾರದಲ್ಲಿ ಸಾಕಾರಗೊಳಿಸುವ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. ಸಾಧ್ಯತಾ ವರದಿ ಸಿದ್ಧಪಡಿಸಲು ಒಂದು ಕೋ.ರೂ. ಒದಗಿಸುವ ಆಶ್ವಾಸನೆ ಕೂಡ ನೀಡಿದ್ದರು. ಆದರೆ ಸ್ಕೈ ಬಸ್‌ ಯೋಜನೆ ಗೋವಾದಲ್ಲಿ ವಿಫಲ ವಾಗಿದೆ ಎಂಬ ಅಂಶಗಳ ಹಿನ್ನೆಲೆ ಯಲ್ಲಿ ಯೋಜನೆಯ ಗಟ್ಟಿತನದ ಬಗ್ಗೆ ಸಂದೇಹಗಳು ವ್ಯಕ್ತವಾಗಿ ಕೈಬಿಡಲಾಗಿತ್ತು.

ಕನಸಾಗೇ ಉಳಿದ ಮೋನೋ ರೈಲು, ಸ್ಕೈ ಬಸ್‌
ನಗರವು ವರ್ಷದಿಂದ ವರ್ಷಕ್ಕೆ ಬೆಳವಣಿಗೆಯಾಗುತ್ತಿದ್ದು, ಇದಕ್ಕೆ ಪೂರಕವಾಗುವಂತೆ ಮೋನೋ ರೈಲು, ಸ್ಕೈಬಸ್‌ ಸೇವೆಯನ್ನು ಸರಕಾರವು ಈ ಹಿಂದೆ ಪ್ರಸ್ತಾಪ ಮಾಡಿತ್ತು. ಆದರೆ, ಈ ಯೋಜನೆಗಳು ಇನ್ನೂ ಅನುಷ್ಠಾನಗೊಂಡಿಲ್ಲ. ಕಳೆದ ವರ್ಷ ಮೆಟ್ರೋ ರೈಲು ಪ್ರಸ್ತಾವ ಮಾಡಲಾಗಿತ್ತಾದರೂ, ಇದು ಕೂಡ ಈವ ರೆಗೆ ಕನಸಾಗಿಯೇ ಉಳಿದಿದೆ.

ವರದಿ ನೀಡಲು ಏಜೆನ್ಸಿಯೊಂದಕ್ಕೆ ತಿಳಿಸಲಾಗಿತ್ತು
ಕಳೆದ ಬಾರಿಯ ಬಜೆಟ್‌ನಲ್ಲಿ ಮಂಗಳೂರು ನಗರಕ್ಕೆ ಮೆಟ್ರೋ ರೈಲಿನ ಸಾಧ್ಯಾಸಾಧ್ಯತೆಗಳ ಬಗ್ಗೆ ತಿಳಿಯುವ ನಿಟ್ಟಿನಲ್ಲಿ ಪ್ರಸ್ತಾಪ ಆಗಿತ್ತು. ಬಜೆಟ್‌ ಬಳಿಕ ಈ ವಿಚಾರಕ್ಕೆ ಸಂಬಂಧಪಟ್ಟಂತೆ ವರದಿ ನೀಡಲು ಏಜೆನ್ಸಿಯೊಂದಕ್ಕೆ ತಿಳಿಸಲಾಗಿತ್ತು. ಇದಾದ ಬಳಿಕ ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದಿದ್ದು, ಅವರು ಆ ಬಗ್ಗೆ ಆಸಕ್ತಿ ತೋರಬೇಕಿತ್ತು.
– ಯು.ಟಿ. ಖಾದರ್‌, ಶಾಸಕ

ಕಡತ ಪರಿಶೀಲನೆ
ಹಿಂದಿನ ಬಜೆಟ್‌ನಲ್ಲಿ ಮಂಡಿಸಲಾದ ಅನೇಕ ಕಾರ್ಯಕ್ರಮಗಳು ನನೆಗುದಿಗೆ ಬಿದಿವೆ. ಮೆಟ್ರೋ ರೈಲು ಪ್ರಸ್ತಾಪದ ಕುರಿತು ಕಡತ ಯಾವ ಹಂತದಲ್ಲಿದೆ ಎಂಬ ಬಗ್ಗೆ ಪರಿಶೀಲಿಸುತ್ತೇನೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next