ಬೆಂಗಳೂರು : ಸಾಮಾನ್ಯವಾಗಿ ಪ್ರತಿ ಹೊಸ ವರ್ಷಾಚರಣೆಗೆ “ನಮ್ಮ ಮೆಟ್ರೋ’ ಹೆಚ್ಚುವರಿ ಸೇವೆಗಳನ್ನು ಒದಗಿಸುತ್ತದೆ. ಆದರೆ, ಈ ಬಾರಿ ಇರುವ ಸೇವೆಗಳಿಗೇ ಕತ್ತರಿ ಹಾಕುತ್ತಿದೆ!
ಇದಕ್ಕೆ ಕಾರಣ- ರಾತ್ರಿ ಕರ್ಫ್ಯೂ.
ಹೌದು, ಮಂಗಳವಾರದಿಂದ ನಿತ್ಯ ರಾತ್ರಿ 10ರ ನಂತರ ಮೆಟ್ರೋ ಸೇವೆಗಳು ಕಡಿಮೆ ಆಗಲಿವೆ. ಆದರೆ, ಕಾರ್ಯಾಚರಣೆ ಸಮಯದಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಎಂದಿನಂತೆ ರಾತ್ರಿ 11 ಗಂಟೆಗೆ ನಾಲ್ಕು ಟರ್ಮಿನಲ್‌ಗಳಿಂದ ಕೊನೆಯ ರೈಲುಗಳು ಹೊರಡಲಿದ್ದು, ಮೆಜೆಸ್ಟಿಕ್‌ನಿಂದ 11.30ಕ್ಕೆ ನಾಲ್ಕೂ ದಿಕ್ಕುಗಳ ಕಡೆಗೆ ರೈಲುಗಳು ನಿರ್ಗಮಿಸಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಸ್ಪಷ್ಟಪಡಿಸಿದೆ.
ರಾತ್ರಿ 10 ಗಂಟೆ ನಂತರ ಪ್ರತಿ 10ರಿಂದ 15 ನಿಮಿಷಕ್ಕೊಂದು ರೈಲು ಕಾರ್ಯಾಚರಣೆ ಮಾಡುತ್ತಿತ್ತು. ಆದರೆ, ರಾತ್ರಿ ಕರ್ಫ್ಯೂನಿಂದ ಜನ ಸಂಚಾರ ವಿರಳ ಇರಲಿದ್ದು, ಪ್ರತಿ 15-20 ನಿಮಿಷಗಳ ಅಂತರದಲ್ಲಿ ರೈಲು ಸೇವೆ ಲಭ್ಯವಾಗಲಿದೆ. ಫ್ರಿಕ್ವೆನ್ಸಿ ಕಡಿಮೆ ಮಾಡಲಿರುವುದರಿಂದ ಗಂಟೆಗೆ ಒಂದು ದಿಕ್ಕಿನಿಂದ ಆರು ರೈಲುಗಳ ಬದಲಿಗೆ 3-4 ರೈಲುಗಳು ಕಾರ್ಯಾಚರಣೆ ಮಾಡಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಕಾವೇರಿ ತಾಯಿ ಮುಂದೆ ನಿಂತು ನಾಟಕ: ಡಿಕೆಶಿ ವಿರುದ್ಧ ಹೆಚ್ ಡಿಕೆ ತೀವ್ರ ವಾಗ್ದಾಳಿ
ನಗರದಲ್ಲಿ ಒಮಿಕ್ರಾನ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ನಿಷೇಧಿಸಲಾಗಿದೆ. ಜತೆಗೆ ಮಂಗಳವಾರ (ಡಿ. 28)ದಿಂದ ಜ. 7ರವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಜತೆಗೆ ಡಿ. 30ರಿಂದ ಜ. 2ರವರೆಗೆ ಎಲ್ಲ ಕ್ಲಬ್, ಪಬ್, ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಆಸನ ಸಾಮರ್ಥ್ಯದ ಶೇ. 50ರಷ್ಟು ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲ ಕಾರಣಗಳಿಂದ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಲಿದ್ದು, ಅದಕ್ಕೆ ತಕ್ಕಂತೆ ಮೆಟ್ರೋ ಸೇವೆಗಳನ್ನೂ ಕಡಿಮೆ ಮಾಡಲು ನಿಗಮ ನಿರ್ಧರಿಸಿದೆ.