Advertisement

ಸಿಗ್ನಲ್‌ ಸಮಸ್ಯೆಯಿಂದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ

12:30 AM Sep 23, 2019 | Lakshmi GovindaRaju |

ಬೆಂಗಳೂರು: ಸಿಗ್ನಲ್‌ನಲ್ಲಿ ಕಂಡುಬಂದ ಸಮಸ್ಯೆಯಿಂದಾಗಿ “ನಮ್ಮ ಮೆಟ್ರೋ’ ಸೇವೆಯಲ್ಲಿ ಭಾನುವಾರ ಸುಮಾರು ಎರಡು ತಾಸು ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡಿದರು. ಯಲಚೇನಹಳ್ಳಿ-ನಾಗಸಂದ್ರ ಮಾರ್ಗದಲ್ಲಿ ತಾಂತ್ರಿಕ ದೋಷ ಕಂಡುಬಂದ ಪರಿಣಾಮ ಮಧ್ಯಾಹ್ನ 12.06ರಿಂದ 1.52ರವರೆಗೆ ಯಲಚೇನಹಳ್ಳಿ-ಆರ್‌.ವಿ.ರಸ್ತೆ ನಡುವೆ ಸೇವೆ ಸ್ಥಗಿತಗೊಂಡು ನೂರಾರು ಪ್ರಯಾಣಿಕರಿಗೆ ಅದರ ಬಿಸಿ ತಟ್ಟಿತು.

Advertisement

ಏಕಾಏಕಿ ಕಾಣಿಸಿಕೊಂಡ ಸಮಸ್ಯೆಯಿಂದ ಜನ ಮೆಟ್ರೋ ನಿಲ್ದಾಣಗಳಿಗೆ ಬಂದು ಬೇಸರದಿಂದ ಹಿಂತಿರುಗುತ್ತಿರುವುದು ಕಂಡುಬಂತು. ಈ ವೇಳೆ ಆರ್‌.ವಿ.ರಸ್ತೆ, ಬನಶಂಕರಿ, ಜೆ.ಪಿ. ನಗರ ಮತ್ತು ಯಲಚೇನಹಳ್ಳಿ ನಿಲ್ದಾಣಗಳಲ್ಲಿ ಮೆಟ್ರೋ ಸೇವೆ ವ್ಯತ್ಯಯ ಉಂಟಾಗಿ, ಆರ್‌.ವಿ. ರಸ್ತೆಯಿಂದ ನಾಗಸಂದ್ರವರೆಗೆ ಮಾತ್ರ ಮೆಟ್ರೋ ಸೇವೆ ಲಭ್ಯವಿತ್ತು.

“ಸಿಗ್ನಲ್‌ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಆಯಿತು. ದೋಷ ಪರಿಹರಿಸಿದ್ದು, ಮಧ್ಯಾಹ್ನ 1.52ರ ಸುಮಾರಿಗೆ ಸೇವೆ ಯಥಾಸ್ಥಿತಿಗೆ ಮರಳಿದೆ’ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಏನಿದು ಸಿಗ್ನಲಿಂಗ್‌ ಸಮಸ್ಯೆ?: ಒಂದೇ ಹಳಿಯಲ್ಲಿ ಯಾವ ರೈಲು ಎಲ್ಲಿದೆ ಎಂಬುದನ್ನು ಸಿಗ್ನಲಿಂಗ್‌ ವ್ಯವಸ್ಥೆ ತಿಳಿಸುತ್ತದೆ. ಇಂತಹ ಸಂವಹನ ಸಮರ್ಪಕವಾಗಿ ನಡೆಯದಿದ್ದರೆ, ಇದನ್ನು ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ ಆ ಹಳಿಯಲ್ಲಿನ ಉಳಿದ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ.

ಸಾಮಾನ್ಯವಾಗಿ ಒಂದೇ ಹಳಿಯಲ್ಲಿ ಎರಡು ರೈಲುಗಳು ಸಂಚರಿಸುವ ವೇಳೆ ನಡುವೆ ಒಂದು ನಿಲ್ದಾಣದ ಅಂತರವಿರುತ್ತದೆ. ದಟ್ಟಣೆಯ ಅವಧಿಯಲ್ಲಿ ಪ್ರತಿ ರೈಲಿನ ಸಂಚಾರದ ನಡುವೆ 3ರಿಂದ 5 ನಿಮಿಷದ ಅಂತರವಿರುತ್ತದೆ. ಸಿಗ್ನಲಿಂಗ್‌ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಎರಡರ ನಡುವೆ ಸಂವಹನ ಸ್ಥಗಿತಗೊಳ್ಳುತ್ತದೆ. ಭಾನುವಾರ ಕಂಡುಬಂದಿದ್ದೂ ಇದೇ ಸಮಸ್ಯೆ ಎಂದು ನಿಗಮದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next