Advertisement

ಮಧ್ಯರಾತ್ರಿವರೆಗೂ ಮೆಟ್ರೋ ಸೇವೆ

11:34 AM Dec 28, 2018 | Team Udayavani |

ಬೆಂಗಳೂರು: ಎಂ.ಜಿ.ರಸ್ತೆ-ಇಂದಿರಾನಗರ ನಡುವಿನ “ನಮ್ಮ ಮೆಟ್ರೋ’ ಸೇವೆ ಶುಕ್ರವಾರದಿಂದ ಮೂರು ದಿನಗಳ ಕಾಲ ಸ್ತಬ್ದಗೊಳ್ಳಲಿದ್ದು, ಹೊಸ ವರ್ಷಾಚರಣೆಗೆ ಮತ್ತೆ ಎಂದಿನಂತೆ ಪ್ರಯಾಣಿಕರ ಅನುಕೂಲಕ್ಕಾಗಿ ಸಂಚಾರಕ್ಕೆ ಸಜ್ಜುಗೊಳ್ಳಲಿದೆ.

Advertisement

ಹೊಸ ವರ್ಷಾಚರಣೆಯಂದು ಅಂದರೆ, ಡಿ.31ರ ರಾತ್ರಿ 11ರಿಂದ 2019ರ ಜ.1ರ ಬೆಳಗಿನಜಾವ 1.30ರವರೆಗೆ ಮೆಟ್ರೋ ಸೇವೆ ಇರಲಿದೆ. ಈ ಹೆಚ್ಚುವರಿ ಸೇವೆಯ ಅವಧಿಯಲ್ಲಿ ಪ್ರತಿ 15 ನಿಮಿಷಕ್ಕೊಂದು ರೈಲು ಕಾರ್ಯಾಚರಣೆ ಮಾಡಲಿದ್ದು, ಕೊನೆಯ ರೈಲುಗಳು ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣದಿಂದ ಬೆಳಗಿನಜಾವ 2 ಗಂಟೆಗೆ ಏಕಕಾಲಕ್ಕೆ ನಾಲ್ಕು ದಿಕ್ಕುಗಳಿಗೂ ಹೊರಡಲಿವೆ.

ಅಂದು ಎಂ.ಜಿ. ರಸ್ತೆ, ಟ್ರಿನಿಟಿ ನಿಲ್ದಾಣ, ಕಬ್ಬನ್‌ ಉದ್ಯಾನ ನಿಲ್ದಾಣಗಳಿಂದ ಇತರೆ ಯಾವುದೇ ಮೆಟ್ರೋ ನಿಲ್ದಾಣಗಳಿಗೆ ಪ್ರಯಾಣಿಸಿದರೂ ದರ 50 ರೂ. ನಿಗದಿಪಡಿಸಲಾಗಿದೆ. ಈ ಸಂಬಂಧ ಪ್ರಯಾಣಿಕರಿಗೆ ಕಾಗದದ ಟಿಕೆಟ್‌ಗಳನ್ನು ವಿತರಿಸಲಿದ್ದು, ಟೋಕನ್‌ ನೀಡುವುದಿಲ್ಲ. ಸ್ಮಾರ್ಟ್‌ ಕಾರ್ಡ್‌ ಹೊಂದಿದವರಿಗೆ ಎಂದಿನಂತೆ ರಿಯಾಯ್ತಿಯ ಪ್ರಯಾಣ ದರ ಅನ್ವಯ ಆಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಸ್ಪಷ್ಟಪಡಿಸಿದೆ.

ವಿಸ್ತರಿಸಿದ ಅವಧಿಯಲ್ಲಿ ಟ್ರಿನಿಟಿ, ಎಂ.ಜಿ.ರಸ್ತೆ ಮತ್ತು ಕಬ್ಬನ್‌ ಉದ್ಯಾನವನ ನಿಲ್ದಾಣಗಳಿಂದ ಪ್ರಯಾಣಿಸಲು ಅನುಕೂಲ ಆಗುವಂತೆ ರಾತ್ರಿ 8 ಗಂಟೆಯಿಂದಲೇ ಎಲ್ಲ ನಿಲ್ದಾಣಗಳಲ್ಲಿ ಮುಂಚಿತವಾಗಿ ಕಾಗದದ ಟಿಕೆಟ್‌ಗಳ ಖರೀದಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ನಿಗಮವು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. 

ಇಂದಿನಿಂದ 3 ದಿನ ಸೇವೆ ಇರಲ್ಲ: ಈ ಮಧ್ಯೆ ಟ್ರಿನಿಟಿ ನಿಲ್ದಾಣದ ಬಳಿ ಶಿಥಿಲಗೊಂಡ ಕಾಂಕ್ರೀಟ್‌ ದುರಸ್ತಿ ಕಾರ್ಯ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ 8ರಿಂದ ಮೂರು ದಿನಗಳ ಕಾಲ ಎಂ.ಜಿ.ರಸ್ತೆ-ಇಂದಿರಾನಗರ ನಿಲ್ದಾಣದ ನಡುವೆ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ. 31ರ ಬೆಳಗ್ಗೆ 5 ಗಂಟೆಯಿಂದ ಮೆಟ್ರೋ ಸೇವೆ ಪುನರಾರಂಭಗೊಳ್ಳಲಿದೆ. ಈ ಮಧ್ಯೆ ಉಳಿದ ಮಾರ್ಗಗಳಲ್ಲಿ ಮೆಟ್ರೋ ಕಾರ್ಯಾಚರಣೆ ಎಂದಿನಂತೆ ಇರಲಿದೆ.

Advertisement

ಪ್ರಯಾಣಿಕರ ಅನುಕೂಲಕ್ಕಾಗಿ ಕಬ್ಬನ್‌ ಉದ್ಯಾನದಿಂದ ಬೈಯಪ್ಪನಹಳ್ಳಿವರೆಗೆ ಬರುವ ಮತ್ತು ಹೋಗುವ ಸೇರಿದಂತೆ ಎರಡೂ ಮಾರ್ಗಗಳಲ್ಲಿ ಬಿಎಂಆರ್‌ಸಿಎಲ್‌ ವತಿಯಿಂದ ಉಚಿತ ಬಸ್‌ ಸೇವೆ ಕಲ್ಪಿಸಲಾಗಿದೆ. ಶುಕ್ರವಾರ ರಾತ್ರಿ 8ರಿಂದ 11ರವರೆಗೆ ಬಸ್‌ ಸೇವೆ ಇರಲಿದೆ.

ಇನ್ನು ಉತ್ತರ-ದಕ್ಷಿಣದ ಮೆಟ್ರೋ ಪ್ರಯಾಣಿಕರಿಗೆ ಎಂ.ಜಿ.ರಸ್ತೆ ದಾಟಿ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಶುಕ್ರವಾರ ಸಂಜೆ 6.45ಕ್ಕೆ ಕೊನೆಯ ರೈಲು. ಎಂ.ಜಿ.ರಸ್ತೆ-ಇಂದಿರಾನಗರ ನಡುವೆ ಸೇವೆ ಸ್ಥಗಿತಗೊಂಡ ಸಂದರ್ಭದಲ್ಲಿ ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ಎರಡೂ ಬದಿಯಿಂದ ಕನಿಷ್ಠ 6ರಿಂದ ಗರಿಷ್ಠ 15 ನಿಮಿಷಗಳ ಅಂತರದಲ್ಲಿ ರೈಲು ಕಾರ್ಯಾಚರಣೆ ಮಾಡಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next