Advertisement

ಮೆಟ್ರೋ-ಕ್ಯೂಆರ್‌ ಕೋಡ್‌ ಬಳಕೆದಾರರು ಹೆಚ್ಚಳ

02:57 PM May 27, 2023 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ದಲ್ಲಿ ಸ್ಮಾರ್ಟ್‌ ಕಾರ್ಡ್‌, ಟೋಕನ್‌ ಬಳಕೆದಾರರ ಸಂಖ್ಯೆ ಮಾತ್ರವಲ್ಲದೇ, ಚಾಟ್‌ಬಾಟ್‌ ಸೇರಿದಂತೆ ಕ್ಯುಆರ್‌ ಕೋಡ್‌ ತೋರಿಸಿ ಓಡಾಡುವ ಪ್ರಯಾಣಿಕರ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆ ಕಂಡುಬರುತ್ತಿದ್ದು, ಮಾಸಿಕ ಸರಾಸರಿ 7 ಲಕ್ಷಕ್ಕಿಂತ ಹೆಚ್ಚು ಜನ ಈ ತಂತ್ರಜ್ಞಾನ ಉಪಯೋಗಿಸುತ್ತಿದ್ದಾರೆ.

Advertisement

ನವೆಂಬರ್‌ನಲ್ಲಿ ಶುರುವಾದ ಈ ಕ್ಯುಆರ್‌ ಕೋಡ್‌ ವ್ಯವಸ್ಥೆ ಬಳಕೆದಾರರು ಕೇವಲ 2.17 ಲಕ್ಷ ಜನ ಇದ್ದರು. ಈಗ ಅದು ಕೇವಲ 4 ತಿಂಗಳಲ್ಲಿ ನಾಲ್ಕುಪಟ್ಟು ಅಂದರೆ 8.25 ಲಕ್ಷಕ್ಕೆ ಏರಿಕೆಯಾಗಿದೆ. ನವೆಂಬರ್‌ನಿಂದ ಏಪ್ರಿಲ್‌ ಅಂತ್ಯಕ್ಕೆ ಕ್ಯುಆರ್‌ ಕೋಡ್‌ ಮತ್ತು ವಾಟ್ಸ್‌ಆ್ಯಪ್‌ ಚಾಟ್‌ಬಾಟ್‌ ಮೂಲಕ ಪ್ರಯಾಣಿಸಿದವರ ಸಂಖ್ಯೆ 31.80 ಲಕ್ಷ ಆಗಿದೆ. ಇದರೊಂದಿಗೆ ಸರಾಸರಿ 25 ಸಾವಿರ ಜನ ಈ ಮಾದರಿಯನ್ನು ನಿಯಮಿತವಾಗಿ ಬಳಸುತ್ತಿದ್ದಾರೆ. ಇದು ಸುಧಾರಿತ ತಂತ್ರಜ್ಞಾನಕ್ಕೆ ಸಿಲಿಕಾನ್‌ ಸಿಟಿಯಲ್ಲಿ ದೊರೆಯುತ್ತಿರುವ ಸ್ಪಂದನೆಗೆ ಸಾಕ್ಷಿ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ ಸಿಎಲ್‌)ದ ಅಧಿಕಾರಿಗಳು ತಿಳಿಸುತ್ತಾರೆ.

ಈ ವ್ಯವಸ್ಥೆ ಪ್ರಾರಂಭವಾದ ಮೊದಲ ತಿಂಗಳು ಅಂದರೆ ನವೆಂಬರ್‌ನಲ್ಲಿ 2,17,708 ಜನ ಕ್ಯುಆರ್‌ ಕೋಡ್‌ ಬಳಸುತ್ತಿದ್ದು, ಡಿಸೆಂಬರ್‌ನಲ್ಲಿ 4,39,502ಕ್ಕೆ ಏರಿಕೆಯಾಯಿತು. ಅದೇ ರೀತಿ ಜನವರಿಯಲ್ಲಿ 5,21,320, ಫೆಬ್ರುವರಿ 5,21,320, ಮಾರ್ಚ್‌ 6,63,956 ಹಾಗೂ ಏಪ್ರಿಲ್‌ನಲ್ಲಿ 8,25,424 ಜನ ಕ್ಯುಆರ್‌ ಕೋಡ್‌ ಸ್ಕ್ಯಾನರ್‌ನ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ನಿಗಮದ ಸಾರ್ವಜನಿಕ ಸಂಪರ್ಕ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಟೋಕನ್‌ ತೆಗೆದುಕೊಳ್ಳುವಾಗ ಸರದಿ ನಿಲ್ಲುವುದು ಅಥವಾ ಚಿಲ್ಲರೆ ಸಮಸ್ಯೆ ಎದುರಿಸಬೇಕು. ಸ್ಮಾರ್ಟ್‌ಕಾರ್ಡ್‌ ಅಥವಾ ಪಾಸ್‌ಗಳು ಕೆಲವೊಮ್ಮೆ ಸ್ಥಳಾಂತರಗೊಂಡು ಕಾಣೆಯಾಗುತ್ತವೆ. ಈ ರೀತಿಯ ವಿವಿಧ ಸಮಸ್ಯೆಗಳಿಗೆ ಪರಿಹಾರವಾಗಿ ಬಿಎಂಆರ್‌ ಸಿಎಲ್‌ ಪ್ರಾರಂಭಿಸಿದ ಮೊಬೈಲ್‌ನಲ್ಲಿಯೇ ಟಿಕೆಟ್‌ ಪಡೆಯಬಹುದಾದ ನೂತನ ಮಾದರಿ ಕ್ಯುಆರ್‌ ಕೋಡ್‌ ಆಧಾರಿತ ಟಿಕೆಟ್‌ ಪಡೆದು ಪ್ರಯಾಣ. ಈಗ ನಿತ್ಯ ಸಾವಿರಾರು ಜನ ಇದನ್ನು ಬಳಸುತ್ತಿದ್ದಾರೆ.

ರಿಯಾಯ್ತಿಯೂ ಲಭ್ಯ: ಈ ವ್ಯವಸ್ಥೆಯೂ ನಮ್ಮ ಮೆಟ್ರೋ, ಪೇಟಿಎಂ ಹಾಗೂ ಯಾತ್ರಾ ಅಪ್ಲಿಕೇಷನ್‌ಗಳಲ್ಲಿ ಹಣ ಪಾವತಿಸಿ ಡೌನ್‌ಲೋಡ್‌ ಮಾಡಿಕೊಂಡಿರುವ ಟಿಕೆಟ್‌ನ ಕ್ಯುಆರ್‌ ಕೋಡ್‌ ಅನ್ನು ಆಗಮನ ಹಾಗೂ ನಿರ್ಗಮನಗಳಲ್ಲಿ ಅಳವಡಿಸಿರುವ ಸ್ಕ್ಯಾನರ್‌ಗೆ ತೋರಿಸಿದರೆ ಗೇಟ್‌ ತೆರೆಯುತ್ತದೆ. ಇದರಿಂದ ಸ್ಮಾರ್ಟ್‌ಕಾರ್ಡ್‌ನಲ್ಲಿರುವ ರಿಯಾಯಿತಿಯಂತೆ ಇಲ್ಲಿಯೂ ಶೇ. 5ರಷ್ಟು ರಿಯಾಯಿತಿ ಪಡೆಯಬಹುದು. ಜತೆಗೆ ಈ ವ್ಯವಸ್ಥೆಯೂ ಅವರಸದ ಸಮಯದಲ್ಲಿ ಹೆಚ್ಚು ಉಪಯೋಗವಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಜನ ಬಳಸುತ್ತಾರೆ ಎಂಬ ನಿರೀಕ್ಷೆಯಿದೆ ಎಂದು ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಕಳೆದ ಮೂರು ತಿಂಗಳಲ್ಲಿ ನಡೆದ ಚುನಾವಣಾ ಅಬ್ಬರ, ಅದಕ್ಕೆ ಪೂರಕವಾದ ಸಮಾವೇಶಗಳು, ಐಪಿಎಲ್‌ ಟಿ-20 ಪಂದ್ಯಾವಳಿಗಳಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಸಹಜವಾಗಿ ಆದಾಯದಲ್ಲೂ ಏರಿಕೆ ಕಂಡಿದೆ.

Advertisement

ಕಳೆದ ಫೆಬ್ರುವರಿಯಲ್ಲಿ 1.46 ಕೋಟಿ ಜನ ಸಂಚರಿಸಿದ್ದು, 34.89 ಕೋಟಿ ಆದಾಯ ಗಳಿಸಿದೆ. ಅದೇ ರೀತಿ ಮಾರ್ಚ್‌ನಲ್ಲಿ 1.60 ಕೋಟಿ ಜನ ಪ್ರಯಾಣಿಸಿದ್ದು, 123.76 ಕೋಟಿ ರೂ. ಹಾಗೂ ಏಪ್ರಿಲ್‌ನಲ್ಲಿ 1.71 ಕೋಟಿ ಮಂದಿ ಓಡಾಡಿದ್ದು, 136.87 ಕೋಟಿ ರೂ. ಸಂಗ್ರಹವಾಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳುತ್ತಾರೆ.

-ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next