ಬೆಂಗಳೂರು: ಮೆಟ್ರೋ ರೈಲು ಯೋಜನೆಗಾಗಿ ನಗರದ ಹಲವೆಡೆ ಮರಗಳನ್ನು ಕತ್ತರಿಸುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಇದರ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಬನ್ನೇರುಘಟ್ಟ ರಸ್ತೆ ಸೇರಿದಂತೆ ಆರು ಕಡೆ ಸುಮಾರು 165 ಮರಗಳನ್ನು ಕತ್ತರಿಸಲು ಬಿಎಂಆರ್ ಸಿಎಲ್ ಉದ್ದೇಶಿಸಿದ್ದು, ಅವುಗಳಲ್ಲಿ ಕೆಲವು ಮರಗಳನ್ನು ಬುಧವಾರ ಕತ್ತರಿಸಲಾಗಿದೆ. ಉಳಿದ ಮರಗಳನ್ನು ಕತ್ತರಿಸದಂತೆ ನ್ಯಾಯಾಲಯ ಆದೇಶ ನೀಡಿದೆ.
ಹಾಗಾಗಿ, ಇದೀಗ ಮರ ಅಧಿಕಾರಿ (ಟ್ರೀ ಆಫೀಸರ್) ಮೇ 21ರಂದು 105 ಮರಗಳ ಸ್ಥಳಾಂತರಕ್ಕೆ ಮತ್ತು 165 ಮರಗಳನ್ನು ಕತ್ತರಿಸಲು ನೀಡಿದ್ದ ಅನುಮತಿ ಆದೇಶದ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ಆದೇಶಿಸಿದೆ.
2018ರಲ್ಲಿ ಮೆಟ್ರೋ ಯೋಜನೆಗಳಿಗೆ ಮರ ಕತ್ತರಿಸುವುದನ್ನು ಸ್ಥಗಿತಗೊಳಿಸಲು ನಿರ್ದೇಶನ ನೀಡಲು ಕೋರಿ ಬೆಂಗಳೂರು ಎನ್ವಿರಾನ್‌ಮೆಂಟ್ ಟ್ರಸ್ಟ್ ಮತ್ತು ದತ್ತಾತ್ರೇಯ ಟಿ.ದೇವರೆ ಸಲ್ಲಿಸಿದ್ದ ಪಿಐಎಲ್ ಆಲಿಸಿದ ಮುಖ್ಯ ನ್ಯಾ. ಎ.ಎಸ್ ಓಕಾ ಮತ್ತು ನ್ಯಾ.ಇ.ಎಸ್. ಇಂದಿರೇಶ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. 2020ರ ಮಾ.4ರ ನ್ಯಾಯಾ ಲಯದ ಆದೇಶದಂತೆ, ಮಾ.16ರಂದು ಹಾಗೂ ಏಪ್ರಿಲ್ 28ರಂದು ವಿಶೇಷ ಸಮಿತಿ ಸಭೆ ಸೇರಿ ಚರ್ಚೆ ನಡೆಸಿದೆ.
ಸಮಿತಿಯ ಸಭೆಯ ನಡಾವಳಿಗಳನ್ನು ಗಮನಿಸಿದರೆ ಸಮಿತಿ ಕಾಟಾಚಾರಕ್ಕೆ ತನ್ನ ಕೆಲಸ ಮಾಡಿದಂತೆ ಕಾಣುತ್ತಿದೆ. ಸಮಿತಿ ಮಾ.4ರಂದು ಕೋರ್ಟ್ ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನೂ ಸಹ ದಾಖಲಿಸಿಲ್ಲ ಎಂದು ನ್ಯಾಯಪೀಠ ಹೇಳಿದೆ.