Advertisement
ಬೆಂಗಳೂರಿನಲ್ಲಿ 6 ವಿತರಣಾ ಕೇಂದ್ರಗಳನ್ನು ವಿಸ್ತರಿಸುವ ಮೂಲಕ ಪ್ರಸಿದ್ಧಿ ಪಡೆದಿರುವ ಮೆಟ್ರೊ ದ್ವಿತೀಯ ಸ್ತರದೆಡೆಗೆ ಮುಖ ಮಾಡಿದ್ದು, ಹುಬ್ಬಳ್ಳಿಯಲ್ಲಿ ತನ್ನ ಕೇಂದ್ರ ಮಾಡಲು ಮುಂದಾಗಿದೆ. ಇದು ಉತ್ತರ ಕರ್ನಾಟಕದಲ್ಲಿ ಮೊದಲ ಮೆಟ್ರೊ ಕೇಂದ್ರವಾಗಲಿದೆ. ಇಲ್ಲಿನ ಅಮರಗೋಳದ ಬಸ್ ನಿಲ್ದಾಣ ಹಿಂಭಾಗದಲ್ಲಿ ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿಪಡಿಸಿದ ಬಡಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ರಸ್ತೆ ಪಕ್ಕದಲ್ಲಿ ಮೆಟ್ರೊ ಕ್ಯಾಶ್ ಆ್ಯಂಡ್ ಕ್ಯಾರಿ ತಲೆ ಎತ್ತುತ್ತಿದೆ. ಹುಬ್ಬಳ್ಳಿಯ ಖುಷಿ ರಿಯಲ್ ಎಸ್ಟೇಟ್ ಕಂಪನಿ ಕಟ್ಟಡ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದುಕೊಂಡಿದ್ದು, ಕಾಮಗಾರಿ ಕಾರ್ಯ ಭರದಿಂದ ಸಾಗಿದೆ.
Related Articles
Advertisement
ಏನೇನು ಸಿಗುತ್ತದೆ?: ಟ್ರೇಡರ್ಸ್, ಹೋಟೆಲ್‌ಗಳು, ರೆಸ್ಟೋರೆಂಟ್, ರಿಸೆಲರ್, ಕ್ಯಾಟರರ್ಸ್, ಸಣ್ಣ ಉದ್ಯಮಿಗಳು ಇಲ್ಲಿ ಸಾಮಗ್ರಿಗಳನ್ನು ಖರೀದಿಸಬಹುದಾಗಿದೆ. ಸಂಸ್ಥೆ ರಿಯಾಯಿತಿ ದರದಲ್ಲಿ ಪೂರೈಕೆ ಮಾಡುತ್ತದೆ. ದಿನಬಳಕೆ ಸಾಮಗ್ರಿ, ಆಮದು ಸಾಮಗ್ರಿಗಳು, ಇಲೆಕ್ಟ್ರಾನಿಕ್ಸ್, ಹೋಮ್ ಅಪ್ಲಾಯನ್ಸಸ್, ಹೆಲ್ತ್‌ಕೇರ್,ಫಿಟ್ನೆಸ್, ಆಫೀಸ್ ಸಲ್ಯುಶನ್ಸ್, ಕ್ಲಾಥಿಂಗ್ ಅಸೆಸರಿಸ್, ಹಣ್ಣುಗಳು, ತರಕಾರಿಗಳು, ಫ್ರಾಜನ್ ಹಾಗೂ ಡೇರಿ ಉತ್ಪನ್ನಗಳು ಸೇರಿದಂತೆ ವಿವಿಧ ವಿಶ್ವದರ್ಜೆಯ ಸಾಮಗ್ರಿಗಳು ಇಲ್ಲಿ ಸಿಗಲಿವೆ. ಮೀನು, ಮಾಂಸ, ಕಾನೆಕ್ಷನರಿ, ಡಿಟರ್ಜಂಟ್, ಸೌಂದರ್ಯವರ್ಧಕಗಳು ಒಂದೇ ಸೂರಿನಡಿ ದೊರೆಯಲಿವೆ. ಅಲ್ಲದೇ ಮೆಟ್ರೊದ ಸ್ವಂತ ಬ್ರಾಂಡ್‌ಗಳಾದ ಆರೊ, ಫೈನ್‌ಲೈಫ್, ರಿಯೊಬಾ, ಮೆಟ್ರೊ ಶೆಫ್, ಮೆಟ್ರೊ ಪ್ರೊಫೆಶನಲ್, ಸಿಗ್ಮಾ, ಟ್ಯಾರಿಂಗ್ಟನ್ ಹೌಸ್, ಟೇಲರ್ ಆ್ಯಂಡ್ ಸನ್, ಫೇರ್‌ಲೈನ್, ಆಥೆಂಟಿಕ್, ಲಂಬರ್ಟಜಿ ಬ್ರಾಂಡ್‌ಗಳ ಉತ್ಪನ್ನಗಳು ಕೂಡ ಇಲ್ಲಿ ಸಿಗಲಿವೆ.
ಸಾಗಾಣಿಕೆ ವೆಚ್ಚ ಉಳಿತಾಯ : ನವನಗರದಲ್ಲಿ ಮೆಟ್ರೊ ಆರಂಭಿಸುತ್ತಿರುವುದು ನಮಗೆಲ್ಲ ಖುಷಿ ತಂದಿದೆ. ರಿಟೇಲ್ ಮಾರಾಟಗಾರರಿಗೆ ಇದರಿಂದ ಅನುಕೂಲವಾಗಲಿದೆ. ರಿಲಾಯನ್ಸ್ ಮಾರ್ಕೆಟ್‌ಗೆ ಹೋಗಿ ಸಾಮಗ್ರಿ ತರುವುದು ದುಸ್ತರವಾಗುತ್ತಿತ್ತು. ಇಲ್ಲಿಯೇ ಸಾಮಗ್ರಿ ಸಿಗುವುದರಿಂದ ಸಾಗಾಣಿಕೆ ವೆಚ್ಚ ಉಳಿತಾಯವಾಗಲಿದೆ. ಬೆಂಗಳೂರಿನಲ್ಲಿ ಮೆಟ್ರೊದಿಂದ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಅನುಕೂಲವಾಗಿದೆ. ಇಲ್ಲಿ ಕೂಡ ಕಿರಾಣಿ, ದಿನಸಿ ಅಂಗಡಿಗಳ ವ್ಯಾಪಾರಿಗಳು ಮೆಟ್ರೊ ಕಸ್ಟಮರ್ ಕಾರ್ಡ್ ಮಾಡಿಸಿಕೊಂಡು ಕಡಿಮೆ ದರದಲ್ಲಿ ಉತ್ಪನ್ನಗಳನ್ನು ಖರೀದಿ ಮಾಡಿ ಮಾರಬಹುದಾಗಿದೆ ಎಂದು ವ್ಯಾಪಾರಿ ಶರಣಪ್ಪ ಹೇಳುತ್ತಾರೆ.
ಏನಿದು ಮೆಟ್ರೊ?: ಬ್ಯುಸಿನೆಸ್ ಟು ಬ್ಯುಸಿನೆಸ್‌ನಲ್ಲಿ ಅಂತಾರಾಷ್ಟ್ರೀಯ ಲೀಡರ್ ಸಂಸ್ಥೆ ಇದಾಗಿದೆ. ಜಗತ್ತಿನ 35 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೆಟ್ರೊ ತನ್ನ ವಿತರಣಾ ಕೇಂದ್ರಗಳಲ್ಲಿ ಸುಮಾರು 18,000 ವಿವಿಧ ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಮೆಟ್ರೊ ಸಂಸ್ಥೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ 1,50,000 ಜನರಿಗೆ ಉದ್ಯೋಗ ನೀಡಿದೆ. 2016-17ನೇ ಸಾಲಿನಲ್ಲಿ ಸಂಸ್ಥೆ ಜಾಗತಿಕವಾಗಿ 37 ಬಿಲಿಯನ್ ಪೌಂಡ್ ವಹಿವಾಟು ನಡೆಸಿದೆ. 2003ರಲ್ಲಿ ಭಾರತದಲ್ಲಿ ಮೊದಲ ವಿತರಣಾ ಕೇಂದ್ರ ಆರಂಭಿಸಿದ್ದು, ಸದ್ಯ 27 ಕೇಂದ್ರಗಳನ್ನು ಹೊಂದಿದೆ. ಬೆಂಗಳೂರಿನಲ್ಲಿ 6 ವಿತರಣಾ ಕೇಂದ್ರಗಳಿವೆ.
ಮಳೆಯಿಂದಾಗಿ ಇನ್ನೊಂದು ಕೇಂದ್ರ ವಿಳಂಬ: ಮೆಟ್ರೊ ಸಂಸ್ಥೆಯ ಇನ್ನೊಂದು ಕ್ಯಾಶ್ ಆ್ಯಂಡ್ ಕ್ಯಾರಿ ವಿತರಣಾ ಕೇಂದ್ರದ ಕಾಮಗಾರಿ ನಡೆದಿದೆ. ಮಳೆಯ ಕಾರಣದಿಂದಾಗಿ 3 ತಿಂಗಳು ವಿಳಂಬವಾಗಿ ಕಾಮಗಾರಿ ಆರಂಭವಾಗುತ್ತಿದೆ.ತೆಗ್ಗಿನಲ್ಲಿ ನೀರು ನಿಂತಿದ್ದರಿಂದ ನೀರನ್ನು ತೆರವುಗೊಳಿಸಬೇ ಕಿದ್ದ ಕಾರಣ ವಿಳಂಬವಾಯಿತು. ಇನ್ನು 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸೇವೆ ಆರಂಭಗೊಳ್ಳಬಹುದಾಗಿದೆ. 5 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಲಾಗಿದೆ ಎಂದು ಕಾಮಗಾರಿ ನಿರ್ವಹಣೆ ಸಿಬ್ಬಂದಿ ಅಭಿಪ್ರಾಯಪಡುತ್ತಾರೆ.
-ವಿಶ್ವನಾಥ ಕೋಟಿ