ಬೆಂಗಳೂರು: ಇತ್ತೀಚೆಗೆ ಪರಿಚಯಿಸಿದ್ದ ಹೆಚ್ಚುವರಿ ಮೆಟ್ರೋ ಟ್ರಿಪ್‌ಗ್ಳ ಸೇವೆಯನ್ನು ಬಿಎಂಆರ್‌ಸಿ ಏಕಾಏಕಿ ಸ್ಥಗಿತಗೊಳಿಸಿದ್ದು, ಸದ್ಯಕ್ಕೆ ಈ ಹಿಂದಿನ ವೇಳಾಪಟ್ಟಿಯಂತೆಯೇ ಸೇವೆ ಮುಂದುವರಿಯಲಿದೆ.
ತಾತ್ಕಾಲಿಕವಾಗಿ ಹೆಚ್ಚುವರಿ ಟ್ರಿಪ್‌ಗ್ಳ ಸೇವೆಯನ್ನು ಮುಂದೂಡಿದ್ದು, ಈಗಿರುವ ವೇಳಾಪಟ್ಟಿಯನ್ನು ಪರಿಷ್ಕರಿಸಿ ಸೋಮವಾರದಿಂದ ಪುನರಾರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ನಿರ್ಧರಿಸಿದೆ.
ಬೈಯಪ್ಪನಹಳ್ಳಿ-ಮೈಸೂರು ರಸ್ತೆ (ನೇರಳೆ ಮಾರ್ಗ) 10 ಮತ್ತು ನಾಗಸಂದ್ರದಿಂದ ಯಲಚೇನಹಳ್ಳಿ (ಹಸಿರು ಮಾರ್ಗ) 3 ಸೇರಿ 13 ಹೆಚ್ಚುವರಿ ಟ್ರಿಪ್‌ಗ್ಳನ್ನು ಜ.2ರಿಂದ ಪರಿಚಯಿಸಲಾಗಿತ್ತು. ಇದರಿಂದ “ಪೀಕ್ ಅವರ್’ನಲ್ಲಿ ಪ್ರತಿ 3.5 ನಿಮಿಷಕ್ಕೊಂದು ರೈಲು ಸೇವೆ ಕಲ್ಪಿಸಲಾಗಿತ್ತು. ಈ ಮೂಲಕ ಪ್ರಯಾಣಿಕರಿಗೆ ನಿಗಮವು ಹೊಸ ವರ್ಷದ ಕೊಡುಗೆ ನೀಡಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಇದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ರದ್ದುಗೊಳಿಸಿಲ್ಲ; ಮುಂದೂಡಲಾಗಿದೆ: ಆದರೆ, ಈ ವಾದವನ್ನು ನಿಗಮ ತಳ್ಳಿಹಾಕಿದೆ. ಹೆಚ್ಚುವರಿ ಟ್ರಿಪ್‌ಗ್ಳನ್ನು ರದ್ದುಪಡಿಸಿಲ್ಲ. ಮೂರ್‍ನಾಲ್ಕು ದಿನಗಳ ಮಟ್ಟಿಗೆ ಮುಂದೂಡಲಾಗಿದೆ. ಅಷ್ಟಕ್ಕೂ ವಿದ್ಯುತ್ ಸಮಸ್ಯೆ ಹಿನ್ನೆಲೆಯಲ್ಲಿ ರದ್ದುಗೊಳಿಸಿಲ್ಲ. ವೇಳಾಪಟ್ಟಿಯನ್ನು ಪರಿಷ್ಕರಿಸಿ, ಸೋಮವಾರದಿಂದ ಪುನರಾರಂಭಿಸಲಾಗುವುದು ಎಂದು ಬಿಎಂಆರ್‌ಸಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ. ವಸಂತರಾವ್ ಸ್ಪಷ್ಟಪಡಿಸಿದ್ದಾರೆ.
ಪ್ರಯಾಣಿಕರ ದಟ್ಟಣೆ ಇರುವುದನ್ನು ನೋಡಿಕೊಂಡು, ನಿರ್ದಿಷ್ಟವಾಗಿ ಆ ಅವಧಿಯಲ್ಲೇ ಈ ಹೆಚ್ಚುವರಿ ಟ್ರಿಪ್‌ಗ್ಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಈ ಹೆಚ್ಚುವರಿ ಟ್ರಿಪ್‌ಗ್ಳನ್ನು ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣ, ಬೈಯಪ್ಪನಹಳ್ಳಿಯಿಂದ ಪರಿಚಯಿಸಲು ಯೋಜಿಸಲಾಗಿದೆ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಹೆಚ್ಚುವರಿ ಟ್ರಿಪ್‌ಗ್ಳನ್ನು ಪರಿಚಯಿಸಿದ ದಿನವೇ ಬಿಎಂಆರ್‌ಸಿಗೆ ವಿಘ್ನ ಎದುರಾಯಿತು. ಜ. 2ರಂದು ಬೆಳಗ್ಗೆ 10.02ರಿಂದ 10.28ರವರೆಗೆ ಹಾಗೂ ಸಂಜೆ 6.15ರ ಸುಮಾರಿಗೆ 4-5 ನಿಮಿಷ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದ ಸಾವಿರಾರು ಪ್ರಯಾಣಿಕರು ಆತಂಕಗೊಂಡಿದ್ದರು. ಪ್ರಸ್ತುತ ಹಳೆಯ ವೇಳಾಪಟ್ಟಿಯಂತೆ ರೈಲು ಸಂಚಾರ ನಡೆಯಲಿದೆ. ನೇರಳೆ ಮಾರ್ಗದಲ್ಲಿ 157 ಟ್ರಿಪ್ ಹಾಗೂ ಹಸಿರು ಮಾರ್ಗದಲ್ಲಿ 120 ಟ್ರಿಪ್‌ಗ್ಳ ಸೇವೆ ಇರಲಿದೆ.
ವಿದ್ಯುತ್ ಸಮಸ್ಯೆ ಕಾರಣ?: ಹೆಚ್ಚುವರಿ ಸೇವೆ ಪರಿಚಯಿಸಿದ ದಿನವೇ ವಿದ್ಯುತ್ ಪೂರೈಕೆಯಲ್ಲಿನ ದೋಷದಿಂದ ಎರಡು ಬಾರಿ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. 20ಕ್ಕೂ ಹೆಚ್ಚು ರೈಲು ಏಕಕಾಲದಲ್ಲಿ ಸ್ಥಗಿತಗೊಂಡಿದ್ದವು. ಈಗ ಹೆಚ್ಚುವರಿ ಟ್ರಿಪ್‌ಗ್ಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲು ವಿದ್ಯುತ್ ಪೂರೈಕೆ ಸಮಸ್ಯೆಯೇ ಕಾರಣ ಎಂದು ಹೇಳಲಾಗಿದೆ.