ಬೆಂಗಳೂರು: “ನಮ್ಮ ಮೆಟ್ರೋ’ ಕಾರ್ಯಾಚರಣೆಯಲ್ಲಿ ಶುಕ್ರವಾರ ಹಿಂದಿನ ಎಲ್ಲ ದಾಖಲೆಗಳನ್ನು ಸರಿಗಟ್ಟಿದ್ದು, ಒಂದೇ ದಿನದಲ್ಲಿ 4.83 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಇದರಿಂದ 1.12 ಕೋಟಿ ರೂ. ಆದಾಯ ಹರಿದು ಬಂದಿದೆ. ಇದು ಬೆಳಕಿನ ಹಬ್ಬ ದೀಪಾವಳಿಯ ಎಫೆಕ್ಟ್. ಹಬ್ಬ ಮತ್ತು ವಾರಾಂತ್ಯದ ಹಿನ್ನೆಲೆಯಲ್ಲಿ ಸರಣಿ ರಜೆ ಇದೆ.
ಆದ್ದರಿಂದ ನಗರದಿಂದ ಜನ ಬೇರೆ ಬೇರೆ ಊರುಗಳಿಗೆ ತೆರಳಲು ಮೆಟ್ರೋಗೆ ಮುಗಿಬಿದ್ದರು. ಇಡೀ ದಿನದಲ್ಲಿ ನೇರಳೆ ಮಾರ್ಗದಲ್ಲಿ 2,63,327 ಹಾಗೂ ಹಸಿರು ಮಾರ್ಗದಲ್ಲಿ 2,19,776 ಜನ ಪ್ರಯಾಣಿಸಿದ್ದಾರೆ. ಪರಿಣಾಮ ಕ್ರಮವಾಗಿ 54,29,289 ರೂ. ಹಾಗೂ 55,81,892 ರೂ. ಹರಿದು ಬಂದಿದೆ. ಸಾಮಾನ್ಯ ದಿನಗಳಲ್ಲಿ 4.20ರಿಂದ 4.30 ಲಕ್ಷ ಜನ ಪ್ರಯಾಣಿಸುತ್ತಾರೆ.
ಶುಕ್ರವಾರ 274 ಟ್ರಿಪ್‌ಗ್ಳು ಕಾರ್ಯಾಚರಣೆ ಮಾಡಿದ್ದು, ಪ್ರತಿ ಟ್ರಿಪ್‌ನಲ್ಲಿ ಸರಾಸರಿ 1,764 ಜನ ಪ್ರಯಾಣಿಸಿದ್ದಾರೆ. ಆರು ಬೋಗಿಗಳ ರೈಲಿನ ಸಾಮರ್ಥ್ಯ 1,800ರಿಂದ 1900. ಹೆಚ್ಚಾಗಿ ಮೆಜೆಸ್ಟಿಕ್ ಮತ್ತು ಯಶವಂತಪುರಕ್ಕೆ ಪ್ರಯಾಣಿಕರು ಇಳಿದಿದ್ದಾರೆ. ಅದರಲ್ಲೂ ಸಂಜೆ 6ರಿಂದ 10ರ ಅವಧಿಯಲ್ಲಿ ಎಲ್ಲ ರೈಲುಗಳು ತುಂಬಿ ತುಳುಕುತ್ತಿದ್ದವು. ಹಸಿರು ಮಾರ್ಗದಲ್ಲಿ ಬಹುತೇಕ ಎಲ್ಲವೂ ಮೂರು ಬೋಗಿಗಳಿದ್ದುದರಿಂದ ಜನದಟ್ಟಣೆ ಎಂದಿಗಿಂತ ಹೆಚ್ಚಿತ್ತು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದರು.
ದಸರಾ ಹಬ್ಬದ ಸಂದರ್ಭದಲ್ಲಿ ಒಂದೇ ದಿನದಲ್ಲಿ 4.64 ಲಕ್ಷ ಜನ ಪ್ರಯಾಣಿಸಿದ್ದರು. ಇದರಿಂದ 1.20 ಕೋಟಿ ಆದಾಯ ಹರಿದು ಬಂದಿತ್ತು. ಇದು ಈವರೆಗಿನ ದಾಖಲೆ ಆಗಿತ್ತು. ಅದಕ್ಕೂ ಮುನ್ನ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಅಂದರೆ ಆಗಸ್ಟ್ 31ರಂದು 4.58 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು, ಪರಿಣಾಮ 1.09 ಕೋಟಿ ರೂ. ಆದಾಯ ಹರಿದು ಬಂದಿತ್ತು. ಇದಕ್ಕೂ ಮುನ್ನ ಆಗಸ್ಟ್ 14ರಂದು 4.53 ಲಕ್ಷ ಜನ ಪ್ರಯಾಣಿಸಿದ್ದರು.
ಅಲ್ಲದೆ, ಏಪ್ರಿಲ್ 4ರಂದು 4.52 ಲಕ್ಷ ಜನ ಸಂಚರಿಸಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಶುಕ್ರವಾರದ ಅಂಕಿ-ಸಂಖ್ಯೆಯು ಆ ಎಲ್ಲ ದಾಖಲೆಗಳನ್ನು ಸರಿಗಟ್ಟಿದೆ. ಅಂದ ಹಾಗೆ, ಸಾಮಾನ್ಯವಾಗಿ ಈ ಎರಡೂ ಮಾರ್ಗಗಳಲ್ಲಿ ನಿತ್ಯ ಸರಾಸರಿ 4.20ರಿಂದ 4.30 ಲಕ್ಷ ಜನ ಪ್ರಯಾಣಿಸುತ್ತಾರೆ. ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 50ರಿಂದ 60 ಸಾವಿರ ಪ್ರಯಾಣಿಸಿದ್ದಾರೆ. ಶನಿವಾರ ಕೂಡ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು.
ಅ. 28ರಂದು ಹಸಿರು ಮಾರ್ಗದಲ್ಲಿ ಎರಡು ಮೆಟ್ರೋ ರೈಲುಗಳು ಮೂರರಿಂದ ಬೋಗಿಗಳಾಗಿ ಪರಿವರ್ತನೆ ಆಗಲಿವೆ. ಪ್ರಸ್ತುತ ಈ ಮಾರ್ಗದಲ್ಲಿ ಆರು ಬೋಗಿಗಳಿರು ಎರಡು ಮೆಟ್ರೋ ರೈಲುಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.