ಬಳ್ಳಾರಿ: ದೇಶಕ್ಕೆ ಅನ್ನ ನೀಡುವ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿಶ್ವ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಜನ್ಮದಿನವಾದ ಫೆ.13 ರಂದು ರಾಜ್ಯ ವಿಧಾನಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ (ನಂಜುಂಡಸ್ವಾಮಿ ಬಣ) ಸಂಘದ ರಾಜ್ಯಾಧ್ಯಕ್ಷ ಜೆ.ಎ.ಲಕ್ಷ್ಮೀನಾರಾಯಣ ಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಕೃಷಿಗೆ ಸಂಬಂಧಿಸಿದಂತೆ ಪಡೆದ ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಿ ರೈತರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಬೇಕು. ನಿರ್ಲಕ್ಷ್ಯ ವಹಿಸಿದರೆ ರಾಜ್ಯದ್ಯಂತ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ಮಹದಾಯಿ ನದಿಯ ಕಳಸಾ-ಬಂಡೂರಿ ಯೋಜನೆ ಅನುಷ್ಠಾನಗೊಳಿಸಬೇಕು. ಮಹದಾಯಿ ನ್ಯಾಯಾಧಿಕರಣ ಆದೇಶದಂತೆ ಕೂಡಲೇ 4 ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ಹರಿಸಲು ಕಾನೂನಾತ್ಮಕವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರಲ್ಲಿ ತೋಟಗಾರಿಕೆ ಬೆಳೆ ರೈತರು, ಕೃಷಿ ರೈತರು ಎಂದು ಭೇದಭಾವ ಮಾಡದೇ ಎಲ್ಲ ರೈತರನ್ನು ಸಮಾನವಾಗಿ ಕಂಡು ಎಲ್ಲರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಬರ ಹಿನ್ನೆಲೆಯಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಪರಿಹಾರವನ್ನು ನಿಯಮಾವಳಿಯಂತೆ ಕೂಡಲೇ ವಿತರಿಸಬೇಕು ಎಂದು ಕೋರಿದರು.
ಕೇಂದ್ರ ಸರ್ಕಾರದ ಫಸಲ್ ಬಿಮಾ ಯೋಜನೆಯಡಿ ಇರುವ ನ್ಯೂನ್ಯತೆಗಳನ್ನು ಸರಿಪಡಿಸಿ ರೈತರಿಗೆ ಯೋಜನೆ ನಿಯಮದಂತೆ ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು. ರೈತರ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು. ರೈತರು ಬೆಳೆದ ಎಲ್ಲ ಉತ್ಪನ್ನಗಳನ್ನು ಸರ್ಕಾರ ಖರೀದಿಸಲು ಮುಂದಾಗಬೇಕು. ಉದ್ಯೋಗ ಖಾತ್ರಿಯೋಜನೆಯಡಿ ಗ್ರಾಮೀಣ ಪ್ರದೇಶದ ಜೊತೆಗೆ ನವಲಗುಂದ, ಅಣ್ಣಿಗೇರಿ, ನರಗುಂದ, ರೋಣ, ಬಾದಾಮಿ, ಕುಂದಗೋಳ, ಕಲಘಟಗಿ, ಗಜೇಂದ್ರಗಡ, ಹುಬ್ಬಳ್ಳಿ, ಧಾರವಾಡ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಮುನವಳ್ಳಿ, ಯರಗಟ್ಟಿ, ಸುರೇಬಾನ್ ಸೇರಿದಂತೆ ವ್ಯಾಪ್ತಿಯ ನಾನಾ ಕಡೆಯ ಎಲ್ಲ ಕೃಷಿ ಕಾರ್ಮಿಕರಿಗೆ ಈ ಯೋಜನೆಯಡಿ ಕೂಲಿ ಕೆಲಸ ನೀಡಬೇಕು. ಇದರ ಜೊತೆಗೆ ನಿಗದಿತ ಅವಧಿಯಲ್ಲಿ ಕೂಲಿ ಹಣ ಪಾವತಿಸಬೇಕು. ನಿರ್ಲಕ್ಷ್ಯ ವಹಿಸಿದರೆ ರಾಜ್ಯಾದ್ಯಂತ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.
ರಾಜ್ಯ ಕಾರ್ಯಾಧ್ಯಕ್ಷ ಎಚ್.ಎಂ.ಮಹೇಶ್ವರಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಪುಟ್ಟಯ್ಯ, ರಾಜ್ಯ ಸಂಘಟನಾ ಕಾರ್ಯದರ್ಶಿ ಸೈಯದ್ ಖದೀರ್, ಜಿಲ್ಲಾ ಮುಖಂಡರಾದ ಗಂಗಾ ಧಾರವಾಡಕರ, ಜ್ಯೋತಿ ಕನಕಮ್ಮನವರ, ಶಾಹೀದಾ ಸೇರಿದಂತೆ ವಿವಿಧ ರೈತ ಮುಖಂಡರು ಇದ್ದರು.