ಬನಹಟ್ಟಿ: ಅವಳಿ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ನೀರಿನ ಸಮಸ್ಯೆ ನೀಗಿಸುವಲ್ಲಿ ಶತಾಯ-ಗತಾಯ ಪ್ರಯತ್ನ ಮಾಡಲಾಗುತ್ತಿದೆ. ನೀರು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಈಗಾಗಲೇ ಬರಗಾಲ ಕಾಮಗಾರಿಗೆ ಸಂಬಂಧ 20 ಹಾಗು 25 ಲಕ್ಷ ರೂ. ಎರಡು ಹಂತಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಮೂರನೆಯ ಹಂತವಾಗಿ 22 ಲಕ್ಷ ರೂ.ಗಳ ಅಲ್ಪಾವಧಿ ಟೆಂಡರ್ ಕರೆಯಲಾಗಿದ್ದು, ಅವಶ್ಯವಿದ್ದ ಪ್ರದೇಶದಲ್ಲಿ ಅಲ್ಲದೆ ಕೊಳವೆ ಬಾವಿಯಲ್ಲಿ ನೀರಿಲ್ಲದ ಪ್ರದೇಶಗಳಲ್ಲಿ ಮತ್ತೂಂದು ಕೊಳವೆ ಬಾವಿ ಕೊರೆಸುವ ಮೂಲಕ ನೀರಿನ ಸಮಸ್ಯೆ ನೀಗಿಸುವುದಾಗಿ ಸವದಿ ಸ್ಪಷ್ಟಪಡಿಸಿದರು.
ನೀರಿಗೆ ತಾರತಮ್ಯ ಬೇಡ: ನೀರನ್ನು ಯಾರೇ ಬಳಕೆ ಮಾಡಲಿ ಯಾರಿಗೂ ಬೇಡವೆನ್ನಬಾರದು. ಅಲ್ಲದೆ ಕೆಲವರು ಮನೆಯೊಳಗೆ ಪೈಪ್‌ಲೈನ್ ಅಳವಡಿಸಿಕೊಂಡಿದ್ದು, ಅಂಥವುಗಳನ್ನು ಕಡಿತ ಮಾಡಲಾಗಿದೆ ಎಂದರು.
Advertisement
ಬನಹಟ್ಟಿಯಾದ್ಯಂತ ಕೆಲ ವಾರ್ಡ್ ಗಳಲ್ಲಿನ ನೀರಿನ ಸಮಸ್ಯೆ ಖುದ್ದು ಪರಿಶೀಲನೆ ನಡೆಸಿದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕೆಲ ಗುಡ್ಡದ ಪ್ರದೇಶಗಳಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಅಂಥಹ ಪ್ರದೇಶಗಳಲ್ಲಿ ನೀರಿನ ಟ್ಯಾಂಕರ್ ರವಾನೆ ಮಾಡುವ ಮೂಲಕ ನೀರು ಒದಗಿಸಲಾಗುತ್ತಿದೆ. ಅಲ್ಲದೆ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಸೇರಿದಂತೆ ಖಾಸಗಿ ವ್ಯಕ್ತಿಗಳಿಂದಲೂ ನೀರಿನ ಟ್ಯಾಂಕರ್ ಒದಗಿಸಿದ್ದು, ಅವುಗಳಿಂದಲೂ ನೀರು ಒದಗಿಸುವಲ್ಲಿ ಸ್ಥಳೀಯ ನಗರಸಭೆ ನಿರತವಾಗಿದೆ ಎಂದರು.