ಅಭಿವೃದ್ಧಿಗೆ ಅನುದಾನ ಬೇಕು. ಅಭ್ಯರ್ಥಿ ಗೆಲ್ಲುವುದಕ್ಕೆ ಮತಗಳು ಬೇಕು. ಅದಕ್ಕೇ ಹಾಲಿ ಶಾಸಕರು, ಪಕ್ಷ ಸ್ಥಳೀಯ ಸಂಸ್ಥೆಯ ಸದಸ್ಯರಿಗೆ ಗುರಿ ನಿಗದಿಪಡಿಸಿದ್ದಾರೆ.
ಉಡುಪಿ: ವಿಧಾನಸಭಾ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಈವರೆಗೂ ಒಂದು ರೀತಿಯ ತಂತ್ರಗಾರಿಕೆಯಲ್ಲಿದ್ದ ರಾಜ ಕೀಯ ಪಕ್ಷಗಳು, ಈಗ ಗೆಲ್ಲಲು ವಿಭಿನ್ನ ತಂತ್ರ ರೂಪಿಸುತ್ತಿವೆ.
ವಿಪಕ್ಷದಲ್ಲೂ ಕಾರ್ಯನಿರ್ವಹಣೆಯ ತಂತ್ರ ಗಾರಿಕೆ ಕಡಿಮೆ ಇರದು. ಎಲ್ಲ ಪಕ್ಷಗಳ ಅಂತಿಮ ಅಜೆಂಡಾ ಗೆಲುವು. ಅದಕ್ಕಾಗಿ ಹತ್ತಾರು ಬಗೆಯ ಕಾರ್ಯ ಯೋಜನೆಗಳನ್ನು ಸಿದ್ಧಪಡಿಸಿಟ್ಟಿವೆ. ಸನ್ನಿವೇಶ ಹಾಗೂ ಸಂದರ್ಭಕ್ಕೆ ತಕ್ಕಂತೆ ಅದನ್ನು ಬಳಸುತ್ತಾರೆ. ಈಗ ಪಕ್ಷಗಳ ಬತ್ತಳಿಕೆಯಿಂದ ಬಳಕೆಯಾಗುತ್ತಿರುವ ಬಾಣ “ಅನುದಾನ ಕೊಟ್ಟಿದ್ದೇವೆ, ಮತಗಳನ್ನು ಕೊಡಿಸಿ” ಎಂಬುದು.
ಇಂಥದೊಂದು ಗುರಿಯನ್ನು ಪಕ್ಷಗಳುಹಾಗೂ ಹಾಲಿ ಜನಪ್ರತಿನಿಧಿಗಳು ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ನಿಗದಿ ಗೊಳಿಸಿದ್ದಾರೆ. ರಾಜ್ಯ, ಕೇಂದ್ರ ಸರಕಾರದ ಯೋಜನೆಗಳ ಫಲಾನುಭವಿಗಳು ಎಲ್ಲ ಕ್ಷೇತ್ರದಲ್ಲೂ ಇದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಗ್ರಾ.ಪಂ.ಗಳ ಮತಗಟ್ಟೆವಾರು ಮಾಹಿತಿಯನ್ನು ಕ್ರೋಡೀಕರಿಸಲಾಗಿದೆ. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ಗಳಿಗೂ ಇದೇ ಮಾದರಿಯನ್ನು ಅನ್ವಯಿಸಲಾಗಿದೆ.
ನೀತಿ ಸಂಹಿತೆ ಜಾರಿಗೂ ಮೊದಲೇ ಸರ ಕಾರದಿಂದ ಎಲ್ಲ ಜಿಲ್ಲೆಗಳಲ್ಲೂ ಫಲಾನುಭವಿಗಳ ಸಮಾವೇಶ ನಡೆಸಲಾಗಿದೆ.
ದ.ಕ.ದಲ್ಲಿ ನಡೆದ ಸಮಾವೇಶಕ್ಕೆ ಖುದ್ದು ಮುಖ್ಯಮಂತ್ರಿಯವರು ಆಗಮಿಸಿದ್ದರು. ಉಡುಪಿಯಲ್ಲೂ ದೊಡ್ಡ ಸಂಖ್ಯೆಯಲ್ಲೇ ಸಮಾವೇಶ ಸಂಪನ್ನಗೊಂಡಿತ್ತು. ಸಮಾವೇಶದ ಬಳಿಕ ಸರಕಾರ ಅಥವಾ ಇಲಾಖೆಯಿಂದ ಫಲಾನುಭವಿಗಳನ್ನು ನಿರ್ವಹಿಸುವುದು ಕಷ್ಟ. ನಿರಂತರ ಸಂಪರ್ಕ ಇಟ್ಟುಕೊಂಡು ಮತದಾನದ ದಿನದಂದು ತಮ್ಮ ಪಕ್ಷದ ಪರವಾಗಿ ಮತಗಳನ್ನಾಗಿಸುವ ಹೊಣೆಯನ್ನು ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ, ಪಕ್ಷದ ಪ್ರತಿನಿಧಿಗಳ ಹೆಗಲಿಗೆ ವಹಿಸಲಾಗಿದೆ.
ಪಕ್ಷ ಅಧಿಕಾರದಲ್ಲಿದ್ದಾಗ ಅನುದಾನ ನೀಡಿದ್ದೇವೆ, ಬಳಸಿಕೊಂಡಿದ್ದೀರಿ, ಚುನಾವಣೆ ದಿನಾಂಕ ನಿಗದಿಯಾಗಿದೆ ಮತ್ತೂಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಇದಕ್ಕಾಗಿ ಮತದಾರರನ್ನು ನಿರಂತರ ಭೇಟಿ ಮಾಡಿ, ನಾವು ಗೆದ್ದರೆ ಮಾತ್ರ ಅನುದಾನ ಪುನರ್ ಕೇಳಲು ಸಾಧ್ಯ. ಹೀಗಾಗಿ ಮತ ತನ್ನಿ, ಅಭ್ಯರ್ಥಿ ಗೆಲ್ಲಿಸಿ, ಪುನರ್ ಅನುದಾನ ಕೇಳಿ ಎಂದು ಹೇಳಲಾಗುತ್ತಿದೆ.
ಹಾಗಾಗಿ ಸ್ಥಳೀಯ ಸಂಸ್ಥೆಗಳ ಸದಸ್ಯರೂ ತಮ್ಮ ಪ್ರದೇಶದ ಮತದಾರರ ಮತಗಳನ್ನು ಪಕ್ಷದ ಅಭ್ಯರ್ಥಿಗೆ ಕೊಡಿಸಲು ಶ್ರಮಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅದರಲ್ಲೂ ಮುಖ್ಯವಾಗಿ ಎಲ್ಲ ಪಕ್ಷಗಳೂ ಸ್ಥಳೀಯ ಸಭೆ, ಸಮಾರಂಭಕ್ಕಿಂತ ಮನೆ ಮನೆ ಭೇಟಿಗೆ ಆದ್ಯತೆ ನೀಡಿವೆ. ಆದ ಕಾರಣ ಸ್ಥಳೀಯವಾಗಿ ಪಕ್ಷದ ಪರ ಅಲೆ ರೂಪಿಸುವ ಹೊಣೆಗಾರಿಕೆಯೂ ಸ್ಥಳೀಯ ಸದಸ್ಯರ ಮೇಲಿದೆ.