Advertisement

ವಿಧಾನ-ಕದನ 2023: ನೀತಿ ಸಂಹಿತೆ ಉಲ್ಲಂಘನೆ ಪತ್ತೆಗೆ ಗುಪ್ತ ಕಾರ್ಯಾಚರಣೆ

11:29 PM Apr 04, 2023 | Team Udayavani |

ಚುನಾವಣ ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ಅಧಿಕಾರಿಗಳೆಲ್ಲವೂ ಎಚ್ಚೆತ್ತುಕೊಂಡಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಸಣ್ಣ ಪುಟ್ಟ ಕಾರ್ಯಕ್ರಮಗಳ ಮೇಲೂ ನಿಗಾ ಇರಿಸಿದ್ದಾರೆ. ಪ್ರಸ್ತುತ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಚುನಾವಣೆಯ ಮೇಲೆ ನಿಗಾ ಇಡುವ ಸಮಿತಿಯ ಅನುಮತಿ ಕಡ್ಡಾಯವಾಗಿದೆ. ಆದುದರಿಂದ ಕಾರ್ಯಕ್ರಮ ಆಯೋಜಕರು ಕೂಡ ಇದನ್ನು ತಿಳಿದಿರುವುದು ಅಗತ್ಯವಾಗಿದೆ.

Advertisement

ಮಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಲು ಹೆಚ್ಚು ಕಟ್ಟುನಿಟ್ಟಿನ ಕ್ರಮ ವಹಿಸಲು ಅಧಿಕಾರಿಗಳು ಮುಂದಾಗಿದ್ದು, ಈಗಾಗಲೇ ಎಲ್ಲೆಡೆ ನಿಗಾ ವಹಿಸುತ್ತಿದ್ದಾರೆ. ನೇರವಾಗಿ ಮಾತ್ರವಲ್ಲದೇ ಗುಪ್ತವಾಗಿಯೂ ಯಾರ ಗಮನಕ್ಕೂ ಬಾರದೆ, ಅಧಿಕಾರಿಗಳು ಕಾರ್ಯಾಚರಣೆ ಮಾಡುತ್ತಿದ್ದು, ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದರೆ ಕೇಸು ಬೀಳುವುದು ಖಚಿತ.

ಚುನಾವಣಾಧಿಕಾರಿಗಳ ಅನುಮತಿ ಪಡೆದು ಆಯೋಜಿಸಲಾಗುವ ಕಾರ್ಯಕ್ರಮಗಳಿಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ, ಸಾರ್ವಜನಿಕರ ಸೋಗಿನಲ್ಲೇ ಭೇಟಿ ನೀಡುವುದರಿಂದ ಯಾರೂ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ. ಫೋಟೊ ತೆಗೆದು, ವೀಡಿಯೋ ಚಿತ್ರೀಕರಿಸಿ ದಾಖಲೀಕರಣ ಮಾಡುತ್ತಿದ್ದಾರೆ. ಇಷ್ಟು ಮಾತ್ರವಲ್ಲ, ರಾತ್ರಿ ವೇಳೆ ನಡೆಯುವ ಕೋಲ, ನೇಮ, ಯಕ್ಷಗಾನದಂತಹ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಲ್ಲಿಯೂ ಅಧಿಕಾರಿಗಳು ದಿಢೀರ್‌ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿರುವುದು ಈಗಾಗಲೇ ಕಂಡು ಬಂದಿದೆ.

ರಾಜಕೀಯ ವ್ಯಕ್ತಿ, ಪಕ್ಷಗಳಿಗೆ ಸಂಬಂಧಿಸಿದ ಬ್ಯಾನರ್‌, ಪೋಸ್ಟರ್‌ಗಳು ಕಾರ್ಯಕ್ರಮದಲ್ಲಿ ಕಂಡು ಬಂದರೆ ಆಯೋಜಕರ ಮೇಲೆಯೇ ಪ್ರಕರಣ ದಾಖಲಾಗುತ್ತದೆ. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿ, ಜನರನ್ನು ಉದ್ದೇಶಿಸಿ ಮಾತನಾಡಿದರಂತೂ ಮುಗಿಯಿತು. ಅರಿವಿಲ್ಲದೆ ಆದಲ್ಲಿ ಅಥವಾ ಅಧಿಕೃತವಾಗಿ ಮತದಾರರಿಗೆ ಆಮಿಷವೊಡ್ಡಿದರೂ ಅಷ್ಟೇ. ಇದರ ದಾಖಲೆಗಳು ಸಿಕ್ಕಲ್ಲಿ ಆಯೋಜಕರ ಮೇಲೆ ಪ್ರಕರಣ, ಕಾರ್ಯಕ್ರಮದ ವೆಚ್ಚ ಮಾತನಾಡಿದ ವ್ಯಕ್ತಿ ಅಥವಾ ಪಕ್ಷದ ಚುನಾವಣ ವೆಚ್ಚಕ್ಕೆ ಸೇರ್ಪಡೆಯಾಗುತ್ತದೆ. ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣವೂ ದಾಖಲಾಗುತ್ತದೆ.

ಅನುಮತಿ ಬೇಕು
ಕಾರ್ಯಕ್ರಮಗಳನ್ನು ಆಯೋಜಿಸುವವರು ಎಲ್ಲ ವಿವರಗಳನ್ನು ನೀಡಿ ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕಾಗುತ್ತದೆ. ಏನು ಕಾರ್ಯಕ್ರಮ, ಎಷ್ಟು ಹೊತ್ತು ನಡೆಯುತ್ತದೆ, ಎಷ್ಟು ಮಂದಿ ಭಾಗವಹಿಸುತ್ತಾರೆ, ಯಾರೆಲ್ಲ ಮುಖ್ಯ ಅತಿಥಿಗಳು, ಅಭ್ಯರ್ಥಿಗಳು, ಟಿಕೆಟ್‌ ಆಕಾಂಕ್ಷಿಗಳು, ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸುತ್ತಾರೆಯೇ… ಈ ಮೊದಲಾದ ವಿವರಗಳನ್ನು ನೀಡಬೇಕು. ಒಂದು ವೇಳೆ ಕಾರ್ಯಕ್ರಮದಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾದರೆ ಕ್ರಮ ವಹಿಸುವ ಬಗ್ಗೆಯೂ ಎಚ್ಚರಿಕೆ ನೀಡಲಾಗುತ್ತದೆ.

Advertisement

ಸಭಾಭವನಗಳ ಮೇಲೂ ನಿಗಾ
ಕಾರ್ಯಕ್ರಮಗಳು ಆಯೋಜನೆಗೊಳ್ಳುವ ಸಭಾಭವನಗಳ ಮೇಲೆ ನಿಗಾ ವಹಿಸಲು ಜಿಲ್ಲಾ ಚುನಾವಣಾಧಿಕಾರಿಗಳು ಈಗಾಗಲೇ ಸಂಬಂಧ ಪಟ್ಟ ವ್ಯಾಪ್ತಿಯ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಒಂದು ವೇಳೆ ರಾಜಕೀಯ ಪಕ್ಷಗಳ ಮುಖಂಡರೇ ಸಭೆ ನಡೆಸುವುದಿದ್ದರೂ, ಚುನಾವಣಾಧಿಕಾರಿಯ ಅನುಮತಿ ಪಡೆಯಬೇಕು. ಅಂತಹ ಸಭೆಗೆ ಫ್ಲೈಯಿಂಗ್‌ ಸ್ಕ್ವಾಡ್‌ವರು ಭೇಟಿ ನೀಡಲಿದ್ದು, ವೀಡಿಯೋ ವಿಂಗ್‌ನವರು ಸಂಪೂರ್ಣ ಕಾರ್ಯಕ್ರಮದ ಚಿತ್ರೀಕರಣ ನಡೆಸಲಿದ್ದಾರೆ. ಅಕ್ರಮ ಹಣ, ಮದ್ಯ, ಕುಕ್ಕರ್‌, ಸೀರೆ, ಉಡುಗೊರೆ ಮೊದಲಾದವುಗಳನ್ನು ಶೇಖರಣೆ ಮಾಡಲು ಅವಕಾಶವಿಲ್ಲ. ಒಂದು ವೇಳೆ ಕಂಡು ಬಂದರೆ ಸಭಾಂಗಣದ ಪರವಾನಿಗೆ ರದ್ದು ಮಾಡಲೂ ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next