Advertisement

ವಿಧಾನ-ಕದನ 2023: ಚುನಾವಣ ಕಣದಲ್ಲಿ 85 ಪಕ್ಷಗಳು!

11:58 PM Apr 25, 2023 | Team Udayavani |

ಬೆಂಗಳೂರು: ಚುನಾವಣೆ ಬಂತೆಂದರೆ ಹೊಸ ರಾಜಕೀಯ ಪಕ್ಷಗಳ ಹುಟ್ಟಿಗೆ ಸುಗ್ಗಿಯ ಕಾಲ. ಚುನಾವಣ ಕಣ ರಂಗೇರುತ್ತಿರುವಂತೆ, ರಾಜಕೀಯ ನೆಲೆ ಕಂಡುಕೊಳ್ಳಲು ಪ್ರಮುಖ ರಾಷ್ಟ್ರೀಯ ಪಕ್ಷಗಳೊಂದಿಗೆ ಪೈಪೋಟಿಗೆ ಇಳಿದು ಇನ್ನೂ ಮಾನ್ಯತೆ ಹೊಂದಿಲ್ಲದ ಅನೇಕ ಪಕ್ಷಗಳು ಮತ್ತು ಕೆಲವು “ನವಜಾತ’ ಪಕ್ಷಗಳು ಚುನಾವಣ ಕಣದಲ್ಲಿ ಅದೃಷ್ಟ ಪರೀಕ್ಷೆಗಳಿದಿವೆ.

Advertisement

ಅದರಂತೆ ಈ ಬಾರಿ 75ಕ್ಕೂ ಹೆಚ್ಚು ಮಾನ್ಯತೆ ಹೊಂದಿಲ್ಲದ ನೋಂದಾಯಿತ ರಾಜಕೀಯ ಪಕ್ಷಗಳು ಅಂತಿಮ ಚುನಾವಣ ಕಣದಲ್ಲಿವೆ. ಇದರ ಜತೆಗೆ ಐದು ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌, ಆಪ್‌, ಬಿಎಸ್‌ಪಿ, ಸಿಪಿಐಎಂ ಮತ್ತು ರಾಜ್ಯದ ಪಕ್ಷವಾದ ಜೆಡಿಎಸ್‌, ಬೇರೆ ರಾಜ್ಯದ ಪಕ್ಷಗಳಾದ ಜೆಡಿಯು ಮತ್ತು ನ್ಯಾಶನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ಪಕ್ಷಗಳು ಸ್ಪರ್ಧೆಯಲ್ಲಿವೆ. ಈ  ಪ್ರಕಾರ 2023ರ ವಿಧಾನಸಭಾ ಚುನಾವಣೆಗೆ ಕಣದಲ್ಲಿರುವ ಪಕ್ಷಗಳ ಸಂಖ್ಯೆ 85 ದಾಟಲಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ 70 ನೊಂದಾಯಿತ ಮಾನ್ಯತೆ ಹೊಂದಿಲ್ಲದ 70 ಪಕ್ಷಗಳು ಸೇರಿ ಒಟ್ಟು 83 ಪಕ್ಷಗಳು ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಸದ್ಯ ರಾಜ್ಯದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪಕ್ಷಗಳನ್ನು ಹೊರತುಪಡಿಸಿ ನೊಂದಾಯಿತ ಮಾನ್ಯತೆ ಹೊಂದಿಲ್ಲದ 82 ಪಕ್ಷಗಳು ಅಸ್ತಿತ್ವದಲ್ಲಿದ್ದು, ಈ ನಡುವೆ 2018ರಿಂದ ಈವರೆಗೆ ರಾಜ್ಯದಲ್ಲಿ 15ರಿಂದ 20 ಹೊಸ ರಾಜಕೀಯ ಪಕ್ಷಗಳು ಹುಟ್ಟಿಕೊಂಡಿವೆ. ಈ ಮಧ್ಯೆ ರಾಜ್ಯದಲ್ಲಿ 9 ನೊಂದಾಯಿತ ಮಾನ್ಯತೆ ಇಲ್ಲದ ಪಕ್ಷಗಳನ್ನು ನಿಷ್ಕ್ರಿಯವೆಂದು ಚುನಾವಣ ಆಯೋಗ ಘೋಷಿಸಿದೆ. ಆ ಪ್ರಕಾರ ರಾಜ್ಯದಲ್ಲಿರುವ ರಾಜಕೀಯ ಪಕ್ಷಗಳ ಸಂಖ್ಯೆ 100ರ ಅಸುಪಾಸಿನಲ್ಲಿರಲಿದೆ.

ರಾಜಕೀಯ ಜೀವಂತಿಕೆಗಾಗಿ ನವೀಕರಣ?: ರಾಜ್ಯದ ನೊಂದಾಯಿತ ಮಾನ್ಯತೆ ಹೊಂದಿಲ್ಲದ ರಾಜಕೀಯ ಪಕ್ಷಗಳ ಪೈಕಿ ಬಹುತೇಕ ಪಕ್ಷಗಳು ಚುನಾವಣೆ ಬಂದಾಗ ಮಾತ್ರ ಮೈಕೊಡವಿ ಎದ್ದು ನಿಲ್ಲುತ್ತವೆ. ಇದು ಆ ಪಕ್ಷಗಳು ಪ್ರತೀ ಐದು ವರ್ಷಗಳಿಗೊಮ್ಮೆ ತಮ್ಮ ರಾಜಕೀಯ ಜೀವಂತಿಕೆಯ “ನವೀಕರಣ’ ಮಾಡಿಸಿಕೊಳ್ಳುವಂತಿ ರುತ್ತದೆ. ಚುನಾವಣೆಯಲ್ಲಿ ಈ ಪಕ್ಷಗಳ ಸಾಧನೆ ಅಷ್ಟಕ್ಕಷ್ಟೆ ಆಗಿರುತ್ತದೆ. ಚುನಾವಣೆ ಮುಗಿದ ಬಳಿಕ ಈ ಪಕ್ಷಗಳು ಮತ್ತೆ ಕಳೆದು ಹೋಗುತ್ತವೆ. ಈ ಬಾರಿಯ ಚುನಾವಣೆಯಲ್ಲಿ ಗಣಿಧಣಿ ಜನಾರ್ದನ ರೆಡ್ಡಿ ಸ್ಥಾಪಿತ “ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ’ (ಕೆಕೆಪಿಪಿ) ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಉಳಿದಂತೆ ಕರ್ನಾಟಕ ರಾಷ್ಟ್ರ ಸಮಿತಿ, ಉತ್ತಮ ಪ್ರಜಾಕೀಯ ಪಕ್ಷ ಹೆಚ್ಚು ಕಡೆ ಅಭ್ಯರ್ಥಿ ಹಾಕಿದೆ. ಎಸ್‌ಡಿಪಿಐ ಕೆಲವು ಕ್ಷೇತ್ರಗಳಲ್ಲಿ ಪೈಪೋಟಿ ನೀಡುತ್ತಿದೆ. ಹಿಂದೂ ಮಹಾಸಭಾ ಕೆಲವು ಕಡೆ ಸ್ಪರ್ಧೆಗಿಳಿದಿದೆ. ಉಳಿದಂತೆ ಬಾಕಿ ನೋಂದಾ ಯಿತ ಮಾನ್ಯತೆ ಹೊಂದಿಲ್ಲದ ಪಕ್ಷಗಳ ಸ್ಪರ್ಧೆ “ನಗಣ್ಯ” ವಾಗಿರುತ್ತದೆ.

ಹಿಂದೆ 2008ರಲ್ಲಿ 31 ಪಕ್ಷಗಳು ಸ್ಪರ್ಧಿಸಿದ್ದವು ಆರು ರಾಷ್ಟ್ರೀಯ, 1 ರಾಜ್ಯ 6 ಬೇರೆ ರಾಜ್ಯದ ರಾಜ್ಯ ಪಕ್ಷಗಳು ಹಾಗೂ ಕರ್ನಾಟಕದ ನೋಂದಾಯಿತ ಮತ್ತು ಬೇರೆ ರಾಜ್ಯಗಳಲ್ಲಿ ನೋಂದಾಯಿತ ಸುಮಾರು 46 ಪಕ್ಷಗಳು ಸೇರಿದಂತೆ 2013ರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 59 ಪಕ್ಷಗಳು ಸ್ಪರ್ಧಿಸಿದ್ದವು. 2013ರ ಚುನಾವಣೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಸ್ಥಾಪಿತ ಕೆಜೆಪಿ ಮತ್ತು ಬಿ. ಶ್ರೀರಾಮುಲು ಸ್ಥಾಪಿತ ಬಿಎಸ್‌ಆರ್‌ ಕಾಂಗ್ರೆಸ್‌ ಕಣದ ಚಿತ್ರಣವೇ ಬದಲಿಸಿದ್ದವು. 2018ರಲ್ಲಿ 83 ಪಕ್ಷಗಳು ಕಣದಲ್ಲಿದ್ದವು. ಈ ಬಾರಿಯ 80ರಿಂದ 85 ಆಗಲಿದೆ. ಈ ರೀತಿ ಕಳೆದ ಮೂರು ಚುನಾವಣೆಗಳಲ್ಲಿ ಅಭ್ಯರ್ಥಿಗಳ ಸಂಖ್ಯೆ ಕ್ರಮೇಣ ಹೆಚ್ಚಾಗಿದೆ. ಈ ಬಾರಿಯೂ ಅದು ಮುಂದುವರಿದಿದೆ.

Advertisement

2004ರ ಅನಂತರ ಪಕ್ಷಗಳ ಹುಟ್ಟಿಗೆ ಪರ್ವ ಕಾಲ: ಮೈಸೂರು ವಿಧಾನಸಭೆ ಹೆಸರಲ್ಲಿ 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 6 ಪಕ್ಷಗಳು ಸ್ಪರ್ಧಿಸಿದ್ದವು. ಅನಂತರ 1985ರವರೆಗೆ ಅಂದರೆ ಏಳು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಪಕ್ಷಗಳ ಸಂಖ್ಯೆ ಎರಡಂಕಿ ದಾಟಿರಲಿಲ್ಲ. ತೊಂಬತ್ತರ ದಶಕದಿಂದ ಪಕ್ಷಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತ ಬಂದಿತು.

ರಾಷ್ಟ್ರೀಯ, ಪ್ರಾದೇಶಿಕ, ರಾಜ್ಯದ, ಹೊರ ರಾಜ್ಯದ ಹಾಗೂ ನೊಂದಾಯಿತ ಪಕ್ಷಗಳ ಸಹಿತ 1989ರಲ್ಲಿ 20, 94 ಮತ್ತು 99ರಲ್ಲಿ 22, 2004ರಲ್ಲಿ 32, 2008ರಲ್ಲಿ 31 ಹಾಗೂ 2013ರಲ್ಲಿ ಒಟ್ಟು 59 ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. 2004ರಿಂದ 2008ರವರೆಗೆ ಮತ್ತು ಅನಂತರದಲ್ಲಿ ನಡೆದ ರಾಜಕೀಯ ಕ್ಷಿಪ್ರ ಬೆಳವಣಿಗೆಗಳು ಹೊಸ ಪಕ್ಷಗಳ ಹುಟ್ಟಿಗೆ ಭೂಮಿಕೆಯಾಯಿತು.

~ ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next