ಸುಬ್ರಹ್ಮಣ್ಯ : ವಿದ್ಯುತ್ ದುರ್ಬಳಕೆ ತಡೆಗೆ ಮೆಸ್ಕಾಂ ಅಳವಡಿಸುತ್ತಿರುವ ಮೀಟರ್‌ಗಳ ಸುರಕ್ಷಾ ಬಾಕ್ಸ್ ಕಳಪೆ ಆಗಿರುವ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಪಂಜ ಸಮೀಪದ ಐವತ್ತೂಕ್ಲು ಚಂದ್ರ ಶೇಖರ ಅವರ ಮನೆಯಲ್ಲಿ ಸುರಕ್ಷಾ ಬಾಕ್ಸ್ ಅಳವಡಿಕೆ ಬಳಿಕ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ.
ಸಾಧನದ ಕಳಪೆ ಗುಣಮಟ್ಟ ಅಥವಾ ಸಿಬಂದಿ ಅನುಭವ ಕೊರತೆಯಿಂದ ಶಾರ್ಟ್ ಸರ್ಕ್ಯೂಟ್ ಆಗಿರುವ ಸಾಧ್ಯತೆ ಇದೆ. ಏಜೆನ್ಸಿ ಸಿಬಂದಿ ಜೋಡಣೆ ವೇಳೆ ಸರಿಯಾದ ವಿಧಾನ ಅನುಸರಿಸಿಲ್ಲ ಎನಿಸುತ್ತಿದೆ. ಶಾರ್ಟ್ ಸರ್ಕ್ಯೂಟ್ ವೇಳೆ ಬೆಂಕಿ ಕಾಣಿಸಿಕೊಂಡು, ದೊಡ್ಡ ಶಬ್ದವೂ ಕೇಳಿಸಿದೆ. ಹೆಚ್ಚಿನ ಹಾನಿ ಸಂಭವಿಸಿಲ್ಲ. ಮಳೆಗಾಲದಲ್ಲಿ ಹೆಚ್ಚು ಅಪಾಯಗಳಾಗುವ ಸಾಧ್ಯತೆ ಇರುತ್ತದೆ ಎಂದು ಚಂದ್ರಶೇಖರ್ ‘ಉದಯವಾಣಿ’ ಸುದಿನಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಗಂಭೀರವಾಗಿ ಪರಿಗಣನೆ
ಮೀಟರ್ ಸುರಕ್ಷಾ ಸಾಧನ ಕಳಪೆಯಾಗಿರುವ ಕುರಿತ ವರದಿ ಬಳಿಕ ಮೆಸ್ಕಾಂ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಾಧನ ಅಳವಡಿಸಿದ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಇತ್ತೀಚೆಗೆ ಅಡ್ಕಾರು ಬಳಿ ಶಾರ್ಟ್ ಸರ್ಕ್ನೂಟ್ ಆದ ಮನೆಗೆ ಮೆಸ್ಕಾಂ ಸುಳ್ಯ ವಿಭಾಗದ ಎಇ ಹರೀಶ್ ನಾಯ್ಕ ತಂಡ ಬುಧವಾರ ಭೇಟಿ ನೀಡಿ ಪರಿಶೀಲಿಸಿದ್ದು, ನಿರ್ಲಕ್ಷ್ಯ ಕಂಡುಬಂದರೆ ಕ್ರಮದ ಕುರಿತು ಏಜೆನ್ಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ.