Advertisement
ಸಹಕಾರ ಇಲಾಖೆಯ ಅಧಿಕಾರಿಗಳು ಅಥವಾ ನೊಂದವರು ಬಂದು ದೂರು ನೀಡದ ಹೊರತು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವಂತಿಲ್ಲ ಮರು ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಡ್ಡಿ, ಮೀಟರ್ ಬಡ್ಡಿ, ಫೈನಾನ್ಸ್ ವ್ಯವಹಾರದ ನೆಪದಲ್ಲಿ ರೈತರು, ಅಮಾಯಕ ಸಾರ್ವಜನಿಕರ ಮೇಲೆ ದಬ್ಟಾಳಿಕೆ ನಡೆಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದಿದ್ದರು.
Related Articles
Advertisement
ದಂಧೆಕೋರರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದ ಬೆನ್ನಲ್ಲೇ ಕೇಂದ್ರ ಅಪರಾಧ ವಿಭಾಗದ ಪೊಲೀಸರು, ಬಡ್ಡಿ, ಮೀಟರ್ ಬಡ್ಡಿ ಹೆಸರಿನಲ್ಲಿ ಅಮಾಯಕ ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗುತ್ತಿದ್ದ ನಗರದ ಸುಮಾರು 10ಕ್ಕೂ ಹೆಚ್ಚು ಮಂದಿ ಮೇಲೆ ದಾಳಿ ನಡೆಸಿ 65 ಲಕ್ಷಕ್ಕೂ ಹೆಚ್ಚು ನಗದು, ಕರಾರು ಪತ್ರಗಳು ಸೇರಿ ಕೆಲ ದಾಖಲೆಗಳನ್ನು ವಶಕ್ಕೆ ಪಡೆದು, ಆರೋಪಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು.
ಎಚ್ಚರಿಕೆ ನೀಡಿದ್ದ ಸಿಎಂ: ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸೆ.29ರಂದು ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸರ್ಕಾರದ ಸೂಚನೆ ಮೀರಿ ಬ್ಯಾಂಕ್‌ಗಳು ಸಾಲಗಾರ ರೈತರಿಗೆ ನೋಟಿಸ್ ನೀಡಿದರೆ, ಅಂತಹ ಬ್ಯಾಂಕ್ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಅಲ್ಲದೆ, ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಅಧಿಕ ಬಡ್ಡಿಗೆ ಸಾಲ ನೀಡುವುದು, ಸಾಲ ಹಿಂಪಡೆಯಲು ಕಿರುಕುಳ ನೀಡುವಂತಹ ಘಟನೆಗಳನ್ನು ತಪ್ಪಿಸಲು ಸರ್ಕಾರ ಋಣಭಾರ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಪೊಲೀಸರಿಗೂ ಸೂಚಿಸಲಾಗುವುದು ಎಂದು ಹೇಳಿದ್ದರು.
ಸಿಎಂ ಹೇಳಿಕೆ ಬೆನ್ನಲ್ಲೇ ಅ.3ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು, ಕರ್ನಾಟಕ ಋಣಭಾರ ಕಾಯ್ದೆ-2018ರ ಜಾರಿ ಪೂರ್ವದಲ್ಲಿ ಪೊಲೀಸ್ ಇಲಾಖೆಯಿಂದ 8 ಕ್ರಮಗಳ ಪೈಕಿ 3ನೇ ಅಂಶದಲ್ಲಿ ಬಡ್ಡಿ, ಮೀಟರ್ ಬಡ್ಡಿ ಹೆಸರಿನಲ್ಲಿ ಸಾರ್ವಜನಿಕರ ಮೇಲೆ ದೌರ್ಜನ್ಯವೆಸಗುವ ವ್ಯಕ್ತಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡು ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು.
ಇದೇ ಸುತ್ತೋಲೆಯನ್ನು ಅ.3ರಂದೇ ಮಾರ್ಪಾಡು ಮಾಡಿ, ಸಂಬಂಧಿತ ಇಲಾಖೆ ಅಧಿಕಾರಿಗಳು ಅಥವಾ ನೊಂದವರು ಬಂದು ದೂರು ನೀಡಿದರೆ ಮಾತ್ರ ಕ್ರಮಕೈಗೊಳ್ಳಬೇಕು. ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಳ್ಳಬಾರದು ಎಂದು ಆದೇಶಿಸಿದ್ದಾರೆ.
ಎಸ್‌ಎಂಕೆ ಅವಧಿಯಲ್ಲೇ ಜಾರಿಯಾಗಿದ್ದ ಕಾಯ್ದೆ: ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಲೇವಾದೇವಿ ಕಾಯ್ದೆ ಜಾರಿಗೆ ಬಂದರೂ ಈ ಕುರಿತು ಬೆಂಗಳೂರು ನಗರದಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿರಲಿಲ್ಲ. ಆದರೆ, 2008-2011ರ ಅವಧಿಯಲ್ಲಿ ಬಡ್ಡಿ, ಮೀಟರ್ ಬಡ್ಡಿ ಹೆಸರಿನಲ್ಲಿ ಕಿರುಕುಳ ನೀಡುತ್ತಿರುವ ಬಗ್ಗೆ ದೂರುಗಳು ಬಂದ
ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಶಂಕರ ಬಿದರಿ (ಪೊಲೀಸ್ ಆಯುಕ್ತರಾಗಿದ್ದ ಸಂದರ್ಭದಲ್ಲಿ ಬಡ್ಡಿ ದಂಧೆ ನಿಗ್ರಹಿಸಲು ಕಾನೂನು ರಚಿಸಲು ಶ್ರಮ ವಹಿಸಿದವರು) ಅವರು, ಲೇವಾದೇವಿ ಕಾಯ್ದೆ ಅಡಿಯಲ್ಲಿ ಅಧಿಕ ಬಡ್ಡಿ, ಮೀಟರ್ ಬಡ್ಡಿ ನಡೆಸುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆದೇಶ ಹೊರಡಿಸಿದ್ದರು.
ಕರ್ನಾಟಕ ಋಣಮುಕ್ತ ಕಾಯ್ದೆ-2018 ಜಾರಿ ಆಗಲೇಬೇಕು. ಇದರೊಂದಿಗೆ ಮಾಸಿಕ ಒಂದೂವರೆ ರೂಪಾಯಿಗಿಂತಲೂ ಕಡಿಮೆ ಬಡ್ಡಿ ದರದಲ್ಲಿ ರೈತರು ಹಾಗೂ ಇತರೆ ಸಾರ್ವಜನಿಕರಿಗೆ ಸಾಲ ಕೊಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸಹಕಾರ ಇಲಾಖೆಯ ಒತ್ತಡದಿಂದ ಈ ಹೊಸ ಆದೇಶ ಹೊರಡಿಸಿರಬಹುದು.-ಶಂಕರ್ ಮಹಾದೇವ ಬಿದರಿ, ನಿವೃತ್ತ ಪೊಲೀಸ್ ಮಹಾನಿರ್ದೇಶಕರು