ನವದೆಹಲಿ: ಫೇಸ್ ಬುಕ್, ಇನ್ಸ್ಟಾಗ್ರಾಮ್ ಮತ್ತು ವಾಟ್ಸಪ್ ನ ಮಾತೃ ಸಂಸ್ಥೆಯಾದ ಮೆಟಾ (Meta) ಪ್ರಸಕ್ತ ಸಾಲಿನಲ್ಲಿ 3,600 ಉದ್ಯೋಗಿಗಳನ್ನು ವಜಾಗೊಳಿಸುವ ಸಿದ್ಧತೆಯಲ್ಲಿರುವುದಾಗಿ ಬ್ಲೂಮ್ ಬರ್ಗ್ ವರದಿ ತಿಳಿಸಿದೆ.
ಕಾರ್ಯಕ್ಷಮತೆಯಲ್ಲಿ ಸಂಸ್ಥೆಯ ನಿರೀಕ್ಷೆಗಿಂತ ಕಳಪೆ ಸಾಧನೆಗೈದ ಉದ್ಯೋಗಿಗಳನ್ನು ವಜಾಗೊಳಿಸಲು ಮೆಟಾ ಸಂಸ್ಥಾಪಕ , ಸಿಇಒ ಮಾರ್ಕ್ ಜುಗರ್ ಬರ್ಗ್ (Mark Zuckerberg) ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿ ಹೇಳಿದೆ.
ಟೆಕ್ ದೈತ್ಯ ಮೆಟಾ ಸಂಸ್ಥೆಯಲ್ಲಿ ಸುಮಾರು 72,400 ಉದ್ಯೋಗಿಗಳಿದ್ದಾರೆ. ಇದೀಗ ವಜಾಗೊಳ್ಳಲಿರುವ ಉದ್ಯೋಗಿಗಳ ಹುದ್ದೆಗೆ ಹೊಸ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು ಎಂದು ಮೆಟಾ ತಿಳಿಸಿದೆ.
ಕರ್ತವ್ಯ ನಿರ್ವಹಣೆಯಲ್ಲಿನ ಕಳಪೆ ಸಾಧನೆ ಮಾನದಂಡದ ಆಧಾರದ ಮೇಲೆ ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಿಇಒ ಮಾರ್ಕ್ ಜುಗರ್ ಬರ್ಗ್ ಅವರು ನೀಡಿರುವ ಮೆಮೋದಲ್ಲಿ ವಿವರಣೆ ನೀಡಲಾಗಿದೆ ಎಂದು ವರದಿ ವಿವರಿಸಿದೆ.
ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಅಮೆರಿಕದ ಪ್ರಮುಖ ಕಾರ್ಪೋರೇಟ್ ಸಂಸ್ಥೆಗಳಲ್ಲಿ ಸಹಜ ಕ್ರಿಯೆಯಾಗಿದೆ. ಕಳೆದ ವಾರ ಮೈಕ್ರೋಸಾಫ್ಟ್ ಕೂಡಾ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು.