ಪ್ಯಾರಿಸ್: ಪ್ರತಿಷ್ಠಿತ “ಲಾರೆಸ್ ಸ್ಪೋರ್ಟ್ಸ್ ಮ್ಯಾನ್’ ವಾರ್ಷಿಕ ಪ್ರಶಸ್ತಿಗೆ ಫುಟ್‌ಬಾಲ್ ಹೀರೋ ಲಿಯೋನೆಲ್ ಮೆಸ್ಸಿ, ಟೆನಿಸ್ ತಾರೆ ರಫೆಲ್ ನಡಾಲ್ ಹೆಸರನ್ನು ಸೂಚಿಸಲಾಗಿದೆ.
2023ನೇ ಸಾಲಿನ ಈ ಪ್ರಶಸ್ತಿಗೆ ಹೆಸರು ಸೂಚಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ರಫೆಲ್ ನಡಾಲ್, “ಈ ಪ್ರಶಸ್ತಿಗೆ ನನಗಿಂತ ಲಿಯೋನೆಲ್ ಮೆಸ್ಸಿ ಅವರೇ ಅರ್ಹರು. ಅವರಿಗೇ ಇದು ಒಲಿಯಲಿ’ ಎಂದು ಹೇಳಿ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ.
ಕಳೆದ 12 ತಿಂಗಳ ಸಾಧನೆ ಯನ್ನು ಗಮನಿಸಿ ಕ್ರೀಡಾಪಟುಗಳ ಹೆಸರನ್ನು ಲಾರೆಸ್ ಪ್ರಶಸ್ತಿಗೆ ಸೂಚಿಸಲಾಗುತ್ತದೆ. ಪುರುಷರ ವಿಭಾಗದ ಹೆಸರುಗಳೆಂದರೆ, ಲಿಯೋನೆಲ್ ಮೆಸ್ಸಿ (ಫುಟ್‌ಬಾಲ್, ಆರ್ಜೆಂಟೀನಾ), ಕೈಲಿಯನ್ ಎಂಬಪೆ (ಫುಟ್‌ಬಾಲ್, ಫ್ರಾನ್ಸ್), ರಫೆಲ್ ನಡಾಲ್ (ಟೆನಿಸ್, ಸ್ಪೇನ್), ಮ್ಯಾಕ್ಸ್ ವಸ್ಟಾìಪನ್ (ಮೋಟಾರ್ ರೇಸಿಂಗ್, ನೆದರ್ಲೆಂಡ್ಸ್), ಮೊಂಡೊ ಡುಪ್ಲಾಂಟಿಸ್ (ಆ್ಯತ್ಲೆಟಿಕ್ಸ್, ಸ್ವೀಡನ್) ಮತ್ತು ಸ್ಟೆಪ್ ಕರ್ (ಬಾಸ್ಕೆಟ್‌ಬಾಲ್, ಯುಎಸ್‌ಎ).
ವನಿತಾ ವಿಭಾಗದಿಂದ ಐಗಾ ಸ್ವಿಯಾಟೆಕ್ (ಟೆನಿಸ್, ಪೋಲೆಂಡ್), ಅಲೆಕ್ಸಿಯಾ ಪುಟೆಲ್ಲಾಸ್ (ಫುಟ್‌ಬಾಲ್. ಸ್ಪೇನ್), ಕ್ಯಾಟಿ ಲೆಡೆಕಿ (ಸ್ವಿಮ್ಮಿಂಗ್, ಯುಎಸ್‌ಎ), ಮೈಕಲ್ ಶಿಫ್ರಿನ್ (ಸ್ಕೀಯಿಂಗ್, ಯುಎಸ್‌ಎ), ಸಿಡ್ನಿ ಮೆಕ್‌ಲವಿನ್ (ಆ್ಯತ್ಲೆಟಿಕ್ಸ್, ಯುಎಸ್‌ಎ), ಶೆಲ್ಲಿ ಆ್ಯನ್ ಫ್ರೇಸರ್ ಪ್ರೈಸ್ (ಆ್ಯತ್ಲೆಟಿಕ್ಸ್, ಜಮೈಕಾ) ಹೆಸರನ್ನು ಪ್ರಶಸ್ತಿಗಾಗಿ ಸೂಚಿಸಲಾಗಿದೆ.