Advertisement
ನಂದಿನಿ ಹಾಲಿನ ಪ್ಯಾಕೆಟ್ ಮತ್ತು ಬಸ್ ಟಿಕೆಟ್‌ಗಳು ಅತ್ಯಲ್ಪ ಅವಧಿಯಲ್ಲಿ ನಿತ್ಯ ಲಕ್ಷಾಂತರ ಮತದಾರರನ್ನು ತಲುಪುತ್ತಿವೆ. ಚುನಾವಣಾ ಆಯೋಗದ ಸೂಚನೆ ಮೇರೆಗೆ ನಂದಿನಿ ಹಾಲು ಹಾಗೂ ಮೊಸರಿನ ಪ್ಯಾಕೆಟ್‌ಗಳ ಮುಂಭಾಗದಲ್ಲಿ ಗ್ರಾಹಕರಿಗೆ ಎದ್ದುಕಾಣುವಂತೆ “ಮೇ-12 ತಪ್ಪದೆ ಮತ ಹಾಕಿ’ ಎಂದು ಮುದ್ರಿಸಲಾಗಿದೆ.
ಬಸ್ ಟಿಕೆಟ್‌ನಲ್ಲೂ ಜಾಗೃತಿ: ಅದೇ ರೀತಿ, ಕೆಎಸ್ ಆರ್‌ಟಿಸಿ 8,800 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದು, ಅದರಲ್ಲಿ 28 ಲಕ್ಷ ಜನ ಪ್ರಯಾಣಿಸುತ್ತಾರೆ. ಈ ಪೈಕಿ ಶೇ. 20ರಷ್ಟು ಇ-ಬುಕಿಂಗ್ ಮೂಲಕ ಟಿಕೆಟ್ ಕಾಯ್ದಿರಿಸಲಾಗುತ್ತದೆ. ಉಳಿದ 22 ಲಕ್ಷ ಪ್ರಯಾಣಿಕರು ನೇರವಾಗಿ ನಿರ್ವಾಹಕರಿಂದ ಟಿಕೆಟ್ ಪಡೆದು ಪ್ರಯಾಣಿಸುತ್ತಾರೆ. ಅವರೆಲ್ಲರಿಗೂ ಈ ಜಾಗೃತಿ ಸಂದೇಶ ಮುದ್ರಿತ ರೂಪದಲ್ಲಿ ತಲುಪಲಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಂಟಿಸಿ ಬಸ್‌ಗಳಲ್ಲಿ ಕೂಡ ಮತದಾನದ ಅರಿವು ಮೂಡಿಸಲಾಗುತ್ತಿದೆ. ಬಸ್‌ಗಳಲ್ಲಿರುವ ಡಿಜಿಟಲ್ ಫಲಕಗಳ ಮೇಲೆ ಮತದಾನ ಮಾಡುವ ಬಗ್ಗೆ ಸಂದೇಶ ಬಿತ್ತರಿಸುವ ಮೂಲಕ ಪ್ರಯಾಣಿಕರಿಗೆ ಮತದಾನ ಮಾಡುವಂತೆ ಮನವಿ ಮಾಡಲಾಗುತ್ತಿದೆ. ಬಸ್‌ಗಳಲ್ಲಿ ಮತದಾನದ ಮಹತ್ವ, ಚುನಾವಣೆ ದಿನ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸುವಂತೆ ಮನವಿ ಮಾಡುವ ಸಂದೇಶಗಳನ್ನು ನಿರಂತರವಾಗಿ ಬಿತ್ತರಿಸಲಾಗುತ್ತಿದೆ.