Advertisement

ಭ್ರೂಣ ಹತ್ಯೆ ಸುತ್ತ

09:30 PM Jun 20, 2019 | mahesh |

ಹೆಣ್ಣು ಭ್ರೂಣ ಹತ್ಯೆ ತಡೆಗೆ ಸರ್ಕಾರ ಹತ್ತಾರು ಯೋಜನೆಗಳನ್ನು ರೂಪಿಸಿದೆ. ಸರ್ಕಾರದ ಜೊತೆಗೆ ಕೈ ಜೋಡಿಸಿರುವ ಸಂಘ-ಸಂಸ್ಥೆಗಳು ಕೂಡ ಈ ಕುರಿತು ವಿವಿಧ ಜನಜಾಗೃತಿ ಕಾರ್ಯಕ್ರಮ­ಗಳನ್ನು ಆಗಾಗ್ಗೆ ಆಯೋಜಿಸುತ್ತ ಬರುತ್ತಿವೆ. ಈಗ ಇಲ್ಲೊಂದು ಉತ್ಸಾಹಿ ಯುವಕರ ತಂಡ, “ನವ ಇತಿಹಾಸ’ ಎನ್ನುವ ಸಿನಿಮಾದ ಮೂಲಕ ಹೆಣ್ಣು ಭ್ರೂಣ ಹತ್ಯೆ ತಡೆಯುವ ಬಗ್ಗೆ ಹೇಳಲು ಹೊರಟಿದೆ.

Advertisement

ಅಂದಹಾಗೆ, “ನವ ಇತಿಹಾಸ’ ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ ಚಿತ್ರ. ಚಿತ್ರದ ಟೈಟಲ್‌ನಲ್ಲಿ “ಹುಡ್ಗಿರೆ ಸಿಕ್ತಿಲ್ಲ’ ಎನ್ನುವ ಟ್ಯಾಗ್‌ಲೈನ್‌ ಇದ್ದು, “ಹೆಣ್ಣು ಭ್ರೂಣ ಹತ್ಯೆ’ಯ ವಿಷಯವನ್ನೇ ಕೇಂದ್ರಿಕರಿಸಿ ಚಿತ್ರದ ಕಥೆಯನ್ನು ಹಣೆಯಲಾಗಿದೆಯಂತೆ. ಇನ್ನು “ನವ ಇತಿಹಾಸ’ ಚಿತ್ರದಲ್ಲಿ ನವ ಪ್ರತಿಭೆ ವಿಕ್ರಂ ನಾಯಕನಾಗಿ ಮತ್ತು ಅಮೃತಾ ರಾಜ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿ ಅಮೃತಾ ಅವರ ತಂದೆ ವಸಂತ ರಾಜ್‌ ತಮ್ಮ ಮಗಳ ಆಸೆಯಂತೆ ಈ ಸಾಮಾಜಿಕ ಸಂದೇಶವಿರುವ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಸಮರ್ಥ್ ಎಂ. ಮತ್ತು ಶ್ರೀರಜಿನಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

“ನವ ಇತಿಹಾಸ’ ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ಚಿತ್ರತಂಡ, ಮೊದಲೆಲ್ಲ ಒಬ್ಬ ಪುರುಷ ಎರಡು-ಮೂರು ಮದುವೆಯಾದ ಉದಾಹರಣೆಗಳನ್ನು ಕೇಳುತ್ತಿದ್ದೆವು. ಆದರೆ ಇಂದು ಒಬ್ಬ ಪುರುಷನಿಗೆ ಒಂದು ಹೆಣ್ಣು ಸಿಕ್ಕು ಮದುವೆಯಾಗುವುದೇ ದುಸ್ತರವಾಗಿದೆ. ಇದರ ಹಿಂದಿರುವ ಮೂಲ ಕಾರಣ ಮಹಿಳೆಯರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿರುವುದು. ಇದೇ ಸಂಗತಿಯನ್ನ ಇಟ್ಟುಕೊಂಡು “ನವ ಇತಿಹಾಸ’ ಚಿತ್ರ ಮಾಡಿದ್ದೇವೆ ಎನ್ನುತ್ತದೆ. “ನವ ಇತಿಹಾಸ’ ಚಿತ್ರದ ಹಾಡುಗಳಿಗೆ ವಿನು ಮನಸ್ಸು ಸಂಗೀತ ಸಂಯೋಜಿಸಿದ್ದು, ಇತ್ತೀಚೆಗೆ ಈ ಚಿತ್ರದ ಆಡಿಯೋ ಮತ್ತು ಟ್ರೇಲರ್‌ ಬಿಡುಗಡೆಯಾಗಿದೆ.

ಸದ್ಯ ತೆರೆಗೆ ಬರಲು ಸಿದ್ಧತೆ ನಡೆಸುತ್ತಿರುವ “ನವ ಇತಿಹಾಸ’ ಚಿತ್ರತಂಡ ಜುಲೈ ಕೊನೆಯೊಳಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಆಲೋಚನೆಯಲ್ಲಿದೆ. ಮನರಂಜನೆಯ ಜೊತೆಗೆ ಮೆಸೇಜ್‌ ಹೇಳಲು ಹೊರಟಿರುವ “ನವ ಇತಿಹಾಸ’ ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಚಿತ್ರ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next