Advertisement

ಮೆಸ್ಕಾಂನ ಮೀಟರ್‌ ಸುರಕ್ಷಾ ಸಾಧನವೇ ಅಪಾಯಕಾರಿ!

04:47 PM May 07, 2019 | Naveen |

ಸುಬ್ರಹ್ಮಣ್ಯ : ವಿದ್ಯುತ್‌ ದುರ್ಬ ಳಕೆ ತಡೆಯಲು ಮೆಸ್ಕಾಂ ಡಿಜಿಟಲ್‌ ಮೀಟರ್‌ ಅಳವಡಿಸುತ್ತಿದೆ. ಹಳೆಯ ಮೀಟರ್‌ಗಳನ್ನು ಬದಲಿಸುತ್ತಿದೆ. ಮೀಟರ್‌ಗಳ ಸುರಕ್ಷತೆಗೆ ಬಳಸುವ ಸುರಕ್ಷಾ ಬಾಕ್ಸ್‌ ಕಳಪೆಯಾಗಿದ್ದು, ಅಪಾಯಕಾರಿಯಾಗಿದೆ. ಗುಣಮಟ್ಟದ ನಿರ್ವಹಣೆ ತೋರದ ಕಾರಣ ಶಾರ್ಟ್‌ ಸರ್ಕ್ಯೂಟ್‌ನಂತಹ ಅವಘಡಗಳಿಗೆ ಅವಕಾಶ ಮಾಡಿಕೊಡುತ್ತಿವೆ.

Advertisement

ಸುಳ್ಯ ನಗರ ವ್ಯಾಪ್ತಿಯಲ್ಲಿ ಏಜೆನ್ಸಿ ಮೂಲಕ ವಿದ್ಯುತ್‌ ಸಂಪರ್ಕ ಹೊಂದಿರುವ ಮನೆಗಳಿಗೆ ಡಿಜಿಟಲ್‌ ಸ್ಟಾಟಿಕ್‌ ಮೀಟರ್‌ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಜತೆಗೆ ಹಳೆಯ ಸಂಪರ್ಕದ ಫೈಬರ್‌, ಕಬ್ಬಿಣ ಮಾದರಿಯ ಮೀಟರ್‌ಗಳನ್ನು ತೆಗೆದು ಬದಲಾಯಿಸುವ ಕಾರ್ಯವೂ ನಡೆಯುತ್ತಿದೆ. ಮೆಸ್ಕಾಂಗೆ ಮೀಟರ್‌ ರೀಡಿಂಗ್‌ ಪಡೆಯಲು ಇನ್ನಿತರ ಅನುಕೂಲತೆಗೆ, ಮನೆಯ ಒಳಗಡೆ ಇರುವ ಮೀಟರ್‌ ಅನ್ನು ಮನೆಯ ಹೊರ ಬದಿಯಲ್ಲಿ ಸೂಕ್ತ ಸ್ಥಳದಲ್ಲಿ ಅಳವಡಿಸಲಾಗುತ್ತಿದೆ. ನಗರದಲ್ಲಿ ಈಗ ಅಳವಡಿಕೆ ಪ್ರಕ್ರಿಯೆ ನಡೆಯುತ್ತಿದೆ. ಇದು ಗ್ರಾಮಾಂತರಕ್ಕೂ ವಿಸ್ತರಿಸಲಿದೆ.

ಬಾಕ್ಸ್‌ ಜೋಡಣೆ
ಡಿಜಿಟಲ್‌ ಮಾದರಿಯ ಮೀಟರ್‌ ಅಳವಡಿಕೆ ಮೊದಲು ಮಳೆ ಇನ್ನಿತರ ಸಂರಕ್ಷಣೆಯ ಕಾರಣಕ್ಕಾಗಿ ಸುರಕ್ಷಾ ಬಾಕ್ಸ್‌ ಜೋಡಿಸಲಾಗುತ್ತಿದೆ. ಅದರ ಅಳವಡಿಕೆ ಜವಾಬ್ದಾರಿಯನ್ನು ಏಜೆನ್ಸಿಗೆ ವಹಿಸಲಾಗಿದೆ. ಏಜೆನ್ಸಿಯ ಸಿಬಂದಿ ಜೋಡಿಸಿದ ಹೋದ ಬಳಿಕ ಮೀಟರ್‌ ಗೆ ಸಂಪರ್ಕ ನೀಡುವ ವೇಳೆ ಅಲ್ಲಲ್ಲಿ ಶಾರ್ಟ್‌ ಸರ್ಕ್ಯೂಟ್‌ ಪ್ರಕರಣಗಳು ನಡೆಯುತ್ತಿರುವುದು ಬೆಳಕಿಗೆ ಬರುತ್ತಿವೆ. ಗುಣಮಟ್ಟವಿಲ್ಲ.

ಹೊಸ ಮೀಟರ್‌ ಬೋರ್ಡ್‌ ಅಳವಡಿಸುವ ಹೊರಕವಚದ ಪೆಟ್ಟಿಗೆ ಅಷ್ಟು ಗುಣಮಟ್ಟ ಹೊಂದಿಲ್ಲ ಎನ್ನುವ ಅಪಾದನೆಗಳೂ ಇವೆ. ಅವುಗಳು ತೆಳ್ಳಗಿದ್ದು, ಬಾಗುತ್ತಿವೆ. ನೀರು ಅವುಗಳ ಒಳಕ್ಕೆ ಪ್ರವೇಶಿಸಲು ಅನುಕೂಲಕರವಾಗಿದೆ. ಮಳೆಗಾಲದ ಅವಧಿಯಲ್ಲಿ ಗಾಳಿ ಮಳೆಯಿಂದ ರಕ್ಷಣೆ ಅಸಾಧ್ಯ ಎನ್ನುತ್ತಾರೆ ಬಳಕೆದಾರರು.

ಏಜೆನ್ಸಿಯಿಂದ ನೇಮಕವಾದ ಸಿಬಂದಿ ವೃತ್ತಿ ಕೌಶಲ ಹೊಂದಿಲ್ಲ. ಅವರಲ್ಲಿ ಅನುಭವದ ಕೊರತೆ ಕಂಡುಬರುತ್ತಿದೆ. ಹೀಗಾಗಿ ಸುರಕ್ಷತೆ ಪೆಟ್ಟಿಗೆ ಆಳವಡಿಸುವ ವೇಳೆ ಎಚ್ಚರಿಕೆ ವಹಿಸುತ್ತಿಲ್ಲ. ಮೀಟರ್‌ ಅಳವಡಿಸುವಾಗ ಇದ್ದ ವೈರನ್ನೇ ಎಳೆದು ಬಳಸುತ್ತಿದ್ದಾರೆ. ಇದ್ದಿದ್ದನ್ನೆ ಅಲ್ಲಿಗೆ ಎಳೆದು ಸಂಪರ್ಕ ನೀಡುತ್ತಾರೆ. ಈ ವೇಳೆ ಅವುಗಳ ಮೇಲ್ಪದರ ಕಿತ್ತು ಹೋಗಿ ಹಾನಿಗೊಂಡು ದೋಷಗಳು ಕಾಣಿಸಿಕೊಳ್ಳುತ್ತಿವೆ.

Advertisement

ಶಾರ್ಟ್‌ ಸರ್ಕ್ಯೂಟ್‌
ಮೆಸ್ಕಾಂ ಇಲಾಖೆ ವಿದ್ಯುತ್‌ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಹೊಸ ಡಿಜಿಟಲ್‌ ವ್ಯವಸ್ಥೆಯನ್ನು ಇತ್ತೀಚೆಗೆ ಜಾರಿಗೆ ತಂದಿತ್ತು. ವಿದ್ಯುತ್‌ ಬಳಕೆದಾರರಿಗೆ ಹೊಸ ಡಿಜಿಟಲ್‌ ಮೀಟರ್‌ ಉಪಕರಣ ಉಚಿತವಾಗಿ ವಿತರಿಸಲಾಗುತ್ತಿದೆ. ಏಜೆನ್ಸಿ ಪಡೆದ ಸಂಸ್ಥೆಯ ಸಿಬಂದಿ ಇದನ್ನು ಮನೆಗೆ ಬಂದು ಅಳವಡಿಸಿ ತೆರಳುತ್ತಾರೆ. ಸುರಕ್ಷತೆ ಪೆಟ್ಟಿಗೆ ಅಳವಡಿಸಿ ಬಳಿಕ ಮೀಟರ್‌ಗೆ ಸಂಪರ್ಕ ಕಲ್ಪಿಸುವ ಹೊತ್ತಲ್ಲಿ ಶಾರ್ಟ್‌ ಸರ್ಕ್ಯೂಟ್‌ ಉಂಟಾಗಿ ಬೆಂಕಿ ಕಾಣಿಸಿಕೊಳುತ್ತಿದೆ. ಅಡ್ಕಾರ್‌ ಭಾಗದಲ್ಲಿ ಇಂತಹ ಘಟನೆಗಳು ನಡೆದಿವೆ. ಆ ಭಾಗದಲ್ಲಿ ಮನೆಯ ವೈರಿಂಗ್‌ ಇತ್ಯಾದಿಗಳಿಗೆ ಹಾನಿಯಾಗಿವೆ. ವೈರಿಂಗ್‌, ಗೃಹಬಳಕೆಯ ಉಪಕರಣಗಳು ಸುಟ್ಟಿವೆ. ಇನ್ನೂ ಹಲವು ಕಡೆಗಳಲ್ಲಿ ಈ ರೀತಿ ಘಟನೆಗಳು ನಡೆದಿರುವ ಕುರಿತು ದೂರುಗಳು ಬಂದಿವೆ.

ಕೇಂದ್ರ ಸರಕಾರದ ಐಪಿಡಿಎಸ್‌ ಹಾಗೂ ದೀನ್‌ ದಯಾಳ್‌ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆಯಂತೆ ಡಿಜಿ ಟಲ್‌ ರೀಡಿಂಗ್‌ ಹೊಂದಿರುವ ಮೀಟರ್‌ ರೀಡಿಂಗ್‌ ಮೆಷಿನ್‌ ಅಳವಡಿಸಲಾಗುತ್ತಿದೆ. ಜತೆಗೆ ಇತರ ಯೋಜನೆಗಳಲ್ಲಿ ಸಂಪರ್ಕದ ಮೀಟರ್‌ ಅಳವಡಿಕೆ, ಬದಲಾವಣೆ ನಡೆಯುತ್ತಿವೆ. ರಾಜಸ್ಥಾನದ ವ್ಯಕ್ತಿಗಳು ಮೀಟರ್‌ ಮತ್ತು ಸುರಕ್ಷೆ ಪೆಟ್ಟಿಗೆ ಅಳವಡಿಸುವ ಗುತ್ತಿಗೆ ವಹಿಸಿಕೊಂಡಿದ್ದು, ಅವರಿಂದ ಕುಂದಾಪುರದ ಏಜೆನ್ಸಿಯವರು ತುಂಡು ಗುತ್ತಿಗೆ ಪಡೆದು ಕೆಲಸ ನಿರ್ವಹಿಸುತ್ತಿದ್ದಾರೆ. ಮನೆಗೆ ಬಂದ ವ್ಯಕ್ತಿಗಳ ಪರಿಚಯವೂ ಸ್ಥಳೀಯರಿಗೆ ಇರುವುದಿಲ್ಲ.

ದೂರು ಬಂದಲ್ಲಿ ಪರಿಶೀಲನೆ
ಮೆಸ್ಕಾಂ ಡಿಜಿಟಲ್‌ ಮೀಟರ್‌ ಮತ್ತು ಸುರಕ್ಷತೆ ಪೆಟ್ಟಿಗೆ ಅಳವಡಿಸಲು ಗುತ್ತಿಗೆ ನೀಡಿದೆ. ಅಳವಡಿಕೆ ವೇಳೆ ನಿಯಮಗಳನ್ನು ಪಾಲಿಸಬೇಕಿದೆ. ಇದನ್ನು ಉಲ್ಲಂಘಿಸಿರುವುದು ಕಂಡುಬಂದರೆ ಕ್ರಮ ಜರಗಿಸಬೇಕಾಗುತ್ತದೆ. ಶಾರ್ಟ್‌ ಸರ್ಕ್ಯೂಟ್‌ ಪ್ರಕರಣ ನಡೆದ ಕುರಿತು ದೂರುಗಳು ಬಂದಲ್ಲಿ ಪರಿಶೀಲಿಸುತ್ತೇವೆ.
– ನರಸಿಂಹ
ಇಇ, ಮೆಸ್ಕಾಂ ಪುತ್ತೂರು ವಿಭಾಗ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next