Advertisement

ಸಂಕಷ್ಟದ ಮಧ್ಯೆ ಮೆಸ್ಕಾಂ ಶಾಕ್‌

09:45 PM May 06, 2020 | Sriram |

ವಿಶೇಷ ವರದಿ- ಉಡುಪಿ: ಲಾಕ್‌ಡೌನ್‌ನಿಂದಾಗಿ ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಇದೀಗ ಮೆಸ್ಕಾಂ ಶಾಕ್‌ ನೀಡಿದ್ದು, ಎರಡು ತಿಂಗಳ ಬಿಲ್‌ ಅನ್ನು ಒಟ್ಟಿಗೆ ಕಳುಹಿಸುವ ಮೂಲಕ ಕಳೆದ ತಿಂಗಳ ಬಿಲ್‌ ಪಾವತಿಸಿದವರಿಗೂ ದುಪ್ಪಟ್ಟು ಶುಲ್ಕ ವಿಧಿಸಿದೆ.

Advertisement

ಎಪ್ರಿಲ್‌ನಲ್ಲಿ ಮಾಪಕ ಓದುವ ಸಿಬಂದಿ ಬಂದಿರಲಿಲ್ಲ. ಆದ್ದರಿಂದ ಎಪ್ರಿಲ್‌ನ ಬಿಲ್‌ ಅನ್ನು ಆನ್‌ಲೈನ್‌ ಮುಖಾಂತರ ಪಾವತಿಸಲು ಅವಕಾಶ ಗ್ರಾಹಕರಿಗೆ ಕಲ್ಪಿಸಲಾಗಿತ್ತು. ಆನ್‌ಲೈನ್‌ ಪಾವತಿ ಸಾಧ್ಯವಾಗದ ಗ್ರಾಹಕರು ಮೊತ್ತವನ್ನು ಬಾಕಿ ಇರಿಸಿಕೊಂಡಿದ್ದರು. ಇದೀಗ ಮೇಯಲ್ಲಿ ಮಾಪಕದ ರೀಡಿಂಗ್‌ ಆಧರಿಸಿ ಎಪ್ರಿಲ್‌ ಮತ್ತು ಮೇ ತಿಂಗಳ ಬಿಲ್ಲನ್ನು ಒಟ್ಟಿಗೆ ಮಾಡಲಾಗಿದೆ. ದುಪ್ಪಟ್ಟು ಬಿಲ್‌ ನೋಡಿ ಗ್ರಾಹಕರು ಕಂಗಾಲಾಗಿದ್ದಾರೆ. ಎರಡು ತಿಂಗಳ ಬಿಲ್‌ ನೀಡಿದ್ದರೂ ಅದರಲ್ಲಿ ಎರಡು ತಿಂಗಳಿಗೆ ಸರಾಸರಿ ಬಳಕೆಗಿಂತ ಹೆಚ್ಚುವರಿ ಶುಲ್ಕ ನಮೂದಾಗಿದೆ ಎಂದು ಕೆಲವು ಗ್ರಾಹಕರು “ಉದಯವಾಣಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ಮೆಸ್ಕಾಂ ಅಧಿಕಾರಿಗಳ ಪ್ರಕಾರ, ಗೃಹ ಬಳಕೆಯ ಜಕಾತಿಯಲ್ಲಿ ಸಾಮಾನ್ಯವಾಗಿ ಪ್ರತಿ ತಿಂಗಳಿನ ಮೊದಲ 30 ಯೂನಿಟ್‌ಗಳಿಗೆ 1 ಸ್ಲ್ಯಾಬ್ ದರ ಅನ್ವಯವಾದರೆ, ಮೇ ತಿಂಗಳಿನಲ್ಲಿ ನೀಡಲ್ಪಡುವ ಎರಡು ತಿಂಗಳ ಬಿಲ್‌ನಲ್ಲಿ 30 ಯೂನಿಟ್‌ಗಳ ಬದಲಾಗಿ ಒಟ್ಟು 2×30=60 ಯುನಿಟ್‌ಗಳಿಗೆ ಮೊದಲ ಸ್ಲ್ಯಾಬ್ ದರ ಅನ್ವಯವಾಗುತ್ತದೆ. ಅದರಂತೆಯೇ ಉಳಿದ ರೇಟ್‌ ಸ್ಲ್ಯಾಬ್ ಗಳೂ (2ನೇ ಸ್ಲ್ಯಾಬ್ 70 ಯೂನಿಟ್‌ ಬದಲಾಗಿ 140, 3ನೇ ಸ್ಲ್ಯಾಬ್ 100 ಯೂನಿಟ್‌ ಬದಲಾಗಿ 200) ಎರಡು ತಿಂಗಳಿನ ಲೆಕ್ಕದಲ್ಲಿಯೇ ಅನ್ವಯವಾಗುವುದರಿಂದ ಗ್ರಾಹಕರಿಗೆ ಯಾವುದೇ ತರಹದ ನಷ್ಟವಾಗುವುದಿಲ್ಲ. ಇದೇ ರೀತಿ ಇತರ ಜಕಾತಿಗಳಿಗೂ ಬಿಲ್ಲಿಂಗ್‌ ಮಾಡಲಾಗುತ್ತದೆ.

ಶುಲ್ಕ ಪಾವತಿಸಿದವರಿಗೂ ಹೆಚ್ಚು ಬಿಲ್‌
ಎಪ್ರಿಲ್‌ನಲ್ಲಿ ಬಿಲ್‌ ಪಾವತಿಸಿದವರಿಗೆ ಮೇ ತಿಂಗಳ ಬಿಲ್‌ ನೀಡುವಾಗ ಎಪ್ರಿಲ್‌ನ ಮೊತ್ತವನ್ನು ಕಡಿತಗೊಳಿಸಿ ನೀಡಲಾಗಿದೆ ಎನ್ನುತ್ತಾರೆ ಮೆಸ್ಕಾಂ ಅಧಿಕಾರಿಗಳು. ಆದರೆ ಎಪ್ರಿಲ್‌ನಲ್ಲಿ ಬಿಲ್‌ ಪಾವತಿಸಿದವರಿಗೂ ಮೇಯಲ್ಲಿ ದುಪ್ಪಟ್ಟು ಬಿಲ್‌ ಬಂದಿದೆ. ಈ ಬಗ್ಗೆ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿ, “ನಮ್ಮ ವಿದ್ಯುತ್‌ ಬಳಕೆ ಪ್ರತಿ ತಿಂಗಳಿನಂತೆಯೇ ಇತ್ತು. ಪ್ರತಿ ತಿಂಗಳು 1,800-2,000 ರೂ. ಬಿಲ್‌ ಬರುವ ನಮಗೆ ಈ ಬಾರಿ 7,000 ರೂ. ಬಂದಿದೆ.ಕಳೆದ ತಿಂಗಳು ಬಿಲ್‌ ಪಾವತಿಸಿದ್ದರೂ ಇಷ್ಟು ಬಿಲ್‌ ವಿಧಿಸಿರುವುದು ಯಾಕೆ ಎಂದು ತಿಳಿಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೊಂದಲ ಬೇಡ
ಲಾಕ್‌ಡೌನ್‌ ಕಾರಣ ಎಪ್ರಿಲ್‌ನಲ್ಲಿ ಮೆಸ್ಕಾಂ ಗ್ರಾಹಕರಿಗೆ ಸರಾಸರಿ ವಿದ್ಯುತ್‌ ಬಿಲ್ಲನ್ನು ನೀಡಲಾಗಿರುತ್ತದೆ. ಮೇಯಲ್ಲಿ ಮಾಪಕ ಓದುಗರು ಮನೆಮನೆಗೆ ತೆರಳಿ ಆ್ಯಕುcವಲ್‌ ರೀಡಿಂಗ್‌ ದಾಖಲಿಸಿ, ಎಪ್ರಿಲ್‌ ಮತ್ತು ಮೇ ಎರಡೂ ತಿಂಗಳಿಗೆ ಸೇರಿಸಿ ಒಂದೇ ಬಿಲ್‌ ಪ್ರತಿ ನೀಡುತ್ತಾರೆ. ಹಾಗೆ ಬಿಲ್‌ ನೀಡುವಾಗ ಪ್ರತಿ ತಿಂಗಳಿಗೆ ಅನ್ವಯವಾಗುವ ರೇಟ್‌ ಸ್ಲ್ಯಾಬ್ ಗಳನ್ನು ಗಣನೆಗೆ ತೆಗೆದುಕೊಂಡು ಎರಡೂ ತಿಂಗಳಿಗೆ ಅನ್ವಯಿಸಿ ಬಿಲ್ಲಿಂಗ್‌ ಮಾಡಲಾಗುತ್ತದೆ. ಗ್ರಾಹಕರಲ್ಲಿ ಯಾವುದೇ ಗೊಂದಲ ಬೇಡ.
– ಕೃಷ್ಣರಾಜ್‌, ಮೆಸ್ಕಾಂ ಅಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next