Advertisement

ವಿದ್ಯುತ್‌ ನಿರ್ವಹಣೆ ಸವಾಲಿನಲ್ಲಿ ಮೆಸ್ಕಾಂ

02:20 AM Jun 13, 2018 | Team Udayavani |

ಪುತ್ತೂರು : ಮೇಲುಸ್ತುವಾರಿ ವಹಿಸಿ ಕೆಲಸ ಮಾಡಿಸಬೇಕಾದ ಕಾರ್ಯನಿರ್ವಾಹಕ ಎಂಜಿನಿಯರ್‌ ಗಳ ಕೊರತೆ, ಮಳೆಗಾಲದಲ್ಲಿ ನಿರಂತರ ಸಮಸ್ಯೆಗಳನ್ನು ಎದುರಿಸಬೇಕಾದ ಅನಿವಾರ್ಯತೆ. ಇದು ಪುತ್ತೂರು ಮೆಸ್ಕಾಂ ವಿಭಾಗದ ಕಥೆ. ಬೇಸಿಗೆ ಕಾಲದಲ್ಲಿ ವಿದ್ಯುತ್‌ ಆವಶ್ಯಕತೆಯ ಒತ್ತಡವನ್ನು ನಿಭಾಯಿಸುವ ಸವಾಲು ಮೆಸ್ಕಾಂಗಿದ್ದರೆ ಮಳೆಗಾಲದಲ್ಲಿ ಪ್ರಾಕೃತಿಕ ಹಾನಿಯಿಂದ ಉಂಟಾಗುವ ಸಮಸ್ಯೆಯನ್ನು ನಿಭಾಯಿಸುವುದು ಈ ಭಾಗದ ಮೆಸ್ಕಾಂಗೆ ಸವಾಲು. ಪುತ್ತೂರಿನಿಂದ 50 ಕಿ.ಮೀ. ದೂರದ ಸುಳ್ಯ ತಾಲೂಕಿನ ಕಾಡುಮೇಡಿನ ಹಳ್ಳಿಗಳಿಗೂ ಸಮರ್ಪಕ ವಿದ್ಯುತ್‌ ಪೂರೈಕೆ ಮಾಡಬೇಕಾದ ಅಗತ್ಯ ಪುತ್ತೂರು ವಿಭಾಗಕ್ಕಿದೆ. ನಿರಂತರ ಮರಗಳು ಉರುಳುವ ಆ ಭಾಗದಲ್ಲಿ ವಿದ್ಯುತ್‌ ತಂತಿಗಳನ್ನು ಜೋಡಿಸಿ ತ್ವರಿತ ಮರು ಜೋಡಣೆ ಅನಿವಾರ್ಯತೆ ಇದೆ.

Advertisement

ವಿಭಾಗಕ್ಕೆ ವಿದ್ಯುತ್‌ ಆವಶ್ಯಕತೆ
ಪುತ್ತೂರು ವಿಭಾಗ ವ್ಯಾಪ್ತಿಯ ಉಭಯ ತಾಲೂಕುಗಳಲ್ಲಿ ಮನೆ, ಉದ್ಯಮಗಳು, ಕೃಷಿ ಬಳಕೆಗೆ ಸೇರಿದಂತೆ 1.65 ಲಕ್ಷ ವಿದ್ಯುತ್‌ ಸಂಪರ್ಕವಿದೆ. ಈ ವಿದ್ಯುತ್‌ ಸಂಪರ್ಕಗಳಿಗೆ ಬೇಸಗೆಯಲ್ಲಿ 65 ಮೆಗಾ ವ್ಯಾಟ್‌ ವಿದ್ಯುತ್‌ ಬೇಕಿದೆ. ಮಳೆಗಾಲದಲ್ಲಿ ಕೃಷಿ ಪಂಪ್‌ ಗಳಿಗೆ ವಿದ್ಯುತ್‌ ಬಳಕೆಯಾಗದೇ ಇರುವುದರಿಂದ 35 ಮೆಗಾ ವ್ಯಾಟ್‌ ವಿದ್ಯುತ್‌ ಸಾಲುತ್ತದೆ. ಬೇಸಗೆಯಲ್ಲಿ ಒಂದಷ್ಟು ವಿದ್ಯುತ್‌ ಕೊರತೆ ಉಂಟಾಗಿ ಲೋಡ್‌ ಶೆಡ್ಡಿಂಗ್‌ ಅನಿವಾರ್ಯವಾದರೂ ಮಳೆಗಾಲದಲ್ಲಿ ವಿದ್ಯುತ್‌ ಪೂರೈಕೆಗೆ ಸಂಬಂಧಿಸಿದಂತೆ ಒತ್ತಡ ಇರುವುದಿಲ್ಲ. ಆದರೆ ಪ್ರಾಕೃತಿಕ ವಿಕೋಪದಿಂದ ವಿದ್ಯುತ್‌ ತಂತಿಗಳಿಗೆ ಹಾನಿಯಾದಾಗ ಮಾತ್ರ ವಿದ್ಯುತ್‌ ಕೈಕೊಡುತ್ತದೆ.

ಅಧಿಕಾರಿ ಹುದ್ದೆಗಳೇ ಖಾಲಿ
ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ಕಡಬ, ಸುಳ್ಯ, ಸುಬ್ರಹ್ಮಣ್ಯ ಹೀಗೆ 5 ಉಪವಿಭಾಗ ವ್ಯಾಪ್ತಿಯನ್ನು ಹೊಂದಿರುವ ಮೆಸ್ಕಾಂ ಪುತ್ತೂರು ವಿಭಾಗದಲ್ಲಿ ಪುತ್ತೂರು ಗ್ರಾಮಾಂತರ ಉಪವಿಭಾಗಕ್ಕೆ ಕಾರ್ಯನಿರ್ವಾಹಕ ಎಂಜಿನಿಯರ್‌ ಇದ್ದಾರೆ ಎಂಬುದನ್ನು ಬಿಟ್ಟರೆ ಕಡಬ, ಸುಳ್ಯ, ಸುಬ್ರಹ್ಮಣ್ಯ, ಪುತ್ತೂರು ಪುತ್ತೂರು ನಗರ ಉಪವಿಭಾಗಗಳಿಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹುದ್ದೆ ಖಾಲಿಯಾಗಿದೆ. ಪುತ್ತೂರು ಕಚೇರಿಯಲ್ಲಿ ಇರಬೇಕಾದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹುದ್ದೆಯೂ ಖಾಲಿಯಿದೆ. ಸುಳ್ಯದ ಸಹಾಯಕ ಎಂಜಿನಿಯರ್‌ ಗೆ ಸುಬ್ರಹ್ಮಣ್ಯದ ಜವಾಬ್ದಾರಿ ಸಹಿತ ಸೆಕ್ಷನ್‌ ಆಫೀಸರ ಜವಾಬ್ದಾರಿ ನೀಡಲಾಗಿದೆ.

ಮೆಸ್ಕಾಂ ಪುತ್ತೂರು ವಿಭಾಗಕ್ಕೆ ಸಂಬಂಧಿಸಿ ದಂತೆ ಉಭಯ ತಾಲೂಕುಗಳಲ್ಲಿ 19 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಸುಳ್ಯ ಉಪವಿಭಾಗದ ಬೆಳ್ಳಾರೆ ಹಾಗೂ ಅರಂತೋಡು ಶಾಖೆಗಳಲ್ಲಿ ಶಾಖಾಧಿಕಾರಿ ಇಲ್ಲ. ಕಡಬ, ಸುಳ್ಯ, ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹುದ್ದೆಯ ಜವಾಬ್ದಾರಿಯನ್ನು ಸಹಾಯಕ ಎಂಜಿನಿಯರ್‌ ಗಳೇ ನಿರ್ವಹಿಸುತ್ತಿದ್ದಾರೆ. ಸಹಾಯಕ ಎಂಜಿನಿಯರ್‌ ಹಾಗೂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎರಡೂ ಜವಾಬ್ದಾರಿಯನ್ನು ನಿಭಾಯಿಸಬೇಕಾದ ಅನಿವಾರ್ಯತೆ ಇದೆ. ಇದರ ಜತೆಗೆ 33 ಕೆ.ವಿ. ವಿದ್ಯುತ್‌ ತಂತಿ ನಿರ್ವಹಣೆಗೆ ಇರಬೇಕಾದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ದರ್ಜೆಯ ನೋಡಲ್‌ ಅಧಿಕಾರಿ ಹುದ್ದೆಯೂ ಖಾಲಿಯಿದೆ.

ಮಳೆಗಾಲ ಆರಂಭವಾದ ಬಳಿಕ ಮೆಸ್ಕಾಂ ಪುತ್ತೂರು ವಿಭಾಗ ವ್ಯಾಪ್ತಿಯಲ್ಲಿ 1.23 ಕೋಟಿ ರೂ. ನಷ್ಟ ಸಂಭವಿಸಿದೆ. ಸೋಮವಾರದ ತನಕ ಸುಮಾರು 1,234 ವಿದ್ಯುತ್‌ ಕಂಬಗಳ ನೆಲಕ್ಕುರಳಿದ್ದು, 103 ವಿದ್ಯುತ್‌ ಪರಿವರ್ತಕಗಳಿಗೆ ಹಾನಿಯಾಗಿದೆ. ಒಟ್ಟು 6.15 ಕಿ.ಮೀ. ವಿದ್ಯುತ್‌ ತಂತಿ ನಷ್ಟ ಉಂಟಾಗಿದೆ. ಜೂ. 8ರಿಂದ 10ರ ತನಕದ ಮೂರು ದಿನಗಳ ಅವಧಿಯಲ್ಲಿ 101 ವಿದ್ಯುತ್‌ ಕಂಬಗಳು ನೆಲಕ್ಕುರುಳಿದ್ದು, ಸುಮಾರು 16 ಲಕ್ಷ ರೂ. ನಷ್ಟ ಸಂಭವಿಸಿದೆ.

Advertisement

ಬರಲಿದೆ ಮಾನ್ಸೂನ್‌ ಗ್ಯಾಂಗಿಂಗ್‌
ಹಾಲಿ ಮೆಸ್ಕಾಂ ಸಿಬಂದಿ ಹಾಗೂ ಕಾರ್ಮಿಕರ ಜತೆಗೆ ಮಳೆಗಾಲದಲ್ಲಿ ಮಾತ್ರ ಕಾರ್ಯನಿರ್ವಹಿಸುವ ಮಾನ್ಸೂನ್‌ ಗ್ಯಾಂಗ್‌ ಗೆ 50 ಸಿಬಂದಿಯನ್ನು ನೇಮಕ ಮಾಡಿಕೊಳ್ಳಲು ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ತುರ್ತು ಸಂದರ್ಭದಲ್ಲಿ ವಿದ್ಯುತ್‌ ಲೈನ್‌ಗಳನ್ನು ಸರಿಪಡಿಸಲು ಸಿಬಂದಿ ತೆರಳಲು ಪೂರಕವಾಗುವಂತೆ 2 ಹೊಸ ಗಾಡಿಗಳನ್ನು ಖರೀದಿಸಲಾಗಿದೆ.

ಸಬ್‌ ಸ್ಟೇಷನ್‌ ಗಳು ಆಗಬೇಕು
ಎರಡು ದಶಕಗಳಿಂದ ಬೇಡಿಕೆಯಾಗಿಯೇ ಉಳಿದಿರುವ ಮಾಡಾವು 110/11 ಕೆ.ವಿ. ಸಬ್‌ಸ್ಟೇಷನ್‌ ಕೆಲಸಗಳು ಪೂರ್ಣಗೊಂಡು ಅಲ್ಲಿಂದ ವಿದ್ಯುತ್‌ ಪೂರೈಕೆ ಸಾಧ್ಯವಾದರೆ ಸುಳ್ಯ ಭಾಗದ ಬಹುತೇಕ ವಿದ್ಯುತ್‌ ಸಮಸ್ಯೆ ದೂರವಾಗಲಿದೆ. ಪುತ್ತೂರು ಭಾಗಕ್ಕೆ ಒತ್ತಡವೂ ಕಡಿಮೆಯಾಗಲಿದೆ. ಇದರ ಜತೆಗೆ ಉಪ್ಪಿನಂಗಡಿಯಲ್ಲಿ ಸಬ್‌ ಸ್ಟೇಷನ್‌ ನಿರ್ಮಾಣದ ಪ್ರಸ್ತಾವನೆಯೂ ಇದ್ದು, ಮಂಜೂರಾದರೆ ಆ ಭಾಗದ ಸಮಸ್ಯೆಗಳು ಸರಿಯಾಗಲಿವೆ ಎನ್ನುವುದು ಮೆಸ್ಕಾಂ ಅಧಿಕಾರಿಗಳ ಅಭಿಪ್ರಾಯ.

ಸಾರ್ವಜನಿಕ ದೂರು
ಹಿಂದೆ ಅಳವಡಿಸಿದ ವಿದ್ಯುತ್‌ ಕಂಬಗಳು ಇನ್ನೂ ಗಟ್ಟಿಯಾಗಿವೆ. ಆದರೆ ಈಗ ಯಂತ್ರಗಳನ್ನು ಬಳಸಿ ಸಾಮಾನ್ಯ ಹೊಂಡ ನಿರ್ಮಿಸಿ ಕಂಬಗಳನ್ನು ನೆಡಲಾಗುತ್ತಿದೆ. ಈ ಕಂಬಗಳು ಗಟ್ಟಿಯಾಗಿ ನಿಲ್ಲದ ಕಾರಣ ಬೇಗನೇ ನೆಲಕ್ಕುರುಳುತ್ತವೆ. ಈ ಕುರಿತು ಮೆಸ್ಕಾಂ ಅಧಿಕಾರಿಗಳು ಗಮನಹರಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

ರಾತ್ರಿ ಪಾಳಿಯೇ ಇಲ್ಲ!
ಮೆಸ್ಕಾಂ ಸಿಬಂದಿಗೆ ಹಗಲು ಸಮಯದಲ್ಲಿ ಮಾತ್ರ ಕಾರ್ಯನಿರ್ವಹಿಸಬೇಕೆಂಬ ನಿಯಮವಿದೆ. ಸಿಬಂದಿಗೆ ರಾತ್ರಿ ಪಾಳಿಯ ಕೆಲಸಕ್ಕೆ ಮೆಸ್ಕಾಂ ನಿಯಮದಲ್ಲಿ ಅವಕಾಶವೇ ಇಲ್ಲ. ಆದರೆ ಮೆಸ್ಕಾಂ ಅಧಿಕಾರಿಗಳು ತಾವೇ ಜವಾಬ್ದಾರಿ ತೆಗೆದುಕೊಂಡು, ರಕ್ಷಣಾ ಪರಿಕರಗಳನ್ನು ಬಳಸಿಕೊಂಡು ಸಿಬಂದಿಯನ್ನು ರಾತ್ರಿ ಪಾಳಿಗೆ ನೇಮಕ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಸಮಸ್ಯೆ ಜಾಸ್ತಿ
ಗಾಳಿ ಮಳೆ ನಿರಂತರವಾಗಿದ್ದು, ವಿದ್ಯುತ್‌ ಪೂರೈಕೆ ಸಮಸ್ಯೆ ಹೆಚ್ಚಾಗಿದೆ. ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಉಪ್ಪಿನಂಗಡಿ ಹಾಗೂ ಸುಳ್ಯ ತಾಲೂಕಿನ ಗ್ರಾಮಾಂತರ ಭಾಗಗಳಲ್ಲಿ ಸಮಸ್ಯೆಗಳಿದ್ದು, ಗರಿಷ್ಠ ಪ್ರಯತ್ನದಿಂದ ಸರಿಪಡಿಸಲಾಗುತ್ತಿದೆ. ಮುಖ್ಯವಾಗಿ ಸಮಸ್ಯೆಗಳು ಉಂಟಾದ ಸಂದರ್ಭದಲ್ಲಿ ಸಾರ್ವಜನಿಕ ಗ್ರಾಹಕರಿಗೆ ಸ್ಪಂದಿಸಲು ಅಧಿಕಾರಿಗಳು, ಸಿಬಂದಿಗೆ ಸೂಚನೆ ನೀಡಲಾಗಿದೆ. 
– ನರಸಿಂಹ, ಕಾ.ನಿ. ಎಂಜಿನಿಯರ್‌, ಮೆಸ್ಕಾಂ ಪುತ್ತೂರು ವಿಭಾಗ

— ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next