Advertisement
ಲಕ್ಷಾಂತರ ರೂ. ಕಳ್ಳರ ಪಾಲುಉಳ್ಳಾಲದ ಚೆಂಬುಗುಡ್ಡೆಯಲ್ಲಿರುವ ಮೆಸ್ಕಾಂ ಉಪ ವಿಭಾಗ ಕಚೇರಿಯ ಎಪಿಟಿಯಿಂದ 77 ಸಾವಿರ ರೂ. ಮತ್ತು ಅಲ್ಲಿಂದ 4 ಕಿ.ಮೀ. ದೂರದಲ್ಲಿರುವ ಕೋಟೆಕಾರ್ ಮೆಸ್ಕಾಂ ಕಚೇರಿಯ ಎಟಿಪಿ ಕೇಂದ್ರದಿಂದ 60 ಸಾವಿರ ರೂ. ನಗದು ಕಳವಾಗಿದೆ. ಕೋಟೆಕಾರ್ ಎಟಿಪಿ ಯಂತ್ರದಿಂದ 9 ತಿಂಗಳ ಹಿಂದೆ, 2019ರ ಎ. 8ರ ರಾತ್ರಿ 1.93 ಲಕ್ಷ ರೂ. ಕಳವು ಮಾಡಲಾಗಿತ್ತು. ಈ ಮೂರೂ ಕೃತ್ಯಗಳನ್ನು ಒಂದೇ ತಂಡ ನಡೆಸಿರಬಹುದೆಂದು ಉಳ್ಳಾಲ ಪೊಲೀಸರು ಶಂಕಿಸಿದ್ದಾರೆ.
ಈ ಎರಡೂ ಎಟಿಪಿ ಕೇಂದ್ರಗಳಲ್ಲಿ ಸಿಸಿ ಕೆಮರಾಗಳಿಲ್ಲ. ಯಂತ್ರ ಇರುವ ಕೊಠಡಿಯ ಶಟರ್ ಬೀಗ ಮುರಿದು ಒಳನುಗ್ಗಿ ನಗದು ಅಪಹರಿಸಿದ್ದಾರೆ. ಜ.10ರ ಸಂಜೆ ಈ ಎರಡೂ ಎಟಿಪಿಗಳಲ್ಲಿದ್ದ ನಗದನ್ನು ಸಿಬಂದಿ ತೆಗೆದಿದ್ದರು, ಆ ಬಳಿಕ ಜಮೆಯಾದ ಹಣ ಕಳ್ಳರ ಪಾಲಾಗಿದೆ. 9 ತಿಂಗಳ ಹಿಂದೆ ಕೋಟೆಕಾರ್ ಕೇಂದ್ರದಲ್ಲಿ ಕಳವು ನಡೆದ ಬಳಿಕ ತನ್ನ ಎಲ್ಲ ಎಟಿಪಿ ಕೌಂಟರ್‌ಗಳಿಗೆ ಸಿಸಿ ಕೆಮರಾ ಅಳವಡಿಸುವಂತೆ ಮೆಸ್ಕಾಂ ನೋಟಿಸ್ ನೀಡಿತ್ತು. ಉಳ್ಳಾಲ ಮೆಸ್ಕಾಂ ಕಚೇರಿಯ ಎಟಿಪಿ ಕೌಂಟರ್‌ಗೆ ಸಿಸಿ ಕೆಮರಾ ಜೋಡಿಸುವ ಕಾರ್ಯ ಅಂತಿಮ ಹಂತದಲ್ಲಿತ್ತು. ಅದಾಗುವ ಮುನ್ನವೇ ಕಳ್ಳರು ಕೈಚಳಕ ಪ್ರದರ್ಶಿಸಿದ್ದಾರೆ. ಕೋಟೆಕಾರ್ ಮೆಸ್ಕಾಂ ಕಚೇರಿ ಮತ್ತು ಎಟಿಪಿ ಕೌಂಟರ್ ಬಾಡಿಗೆ ಕಟ್ಟಡದಲ್ಲಿದ್ದು, ಸಿಸಿ ಕೆಮರಾ ಅಳವಡಿಸಿಲ್ಲ. ಅಲ್ಲಿ ಅಲರಾಂ, ಸೆಕ್ಯುರಿಟಿ ಗಾರ್ಡ್ ಇಲ್ಲ.
Related Articles
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಮೆಸ್ಕಾಂ ವಿದ್ಯುತ್ ಬಿಲ್ ಮೊತ್ತ ಸಂಗ್ರಹಿಸಲು ಒಟ್ಟು 60 ಎಟಿಪಿ ಕೌಂಟರ್‌ಗಳನ್ನು ಹೊಂದಿದೆ. ಎಟಿಪಿ ಯಂತ್ರ ಅಳವಡಿಸಿ ಬಿಲ್ ಮೊತ್ತ ಸಂಗ್ರಹಿಸಿ ಮೆಸ್ಕಾಂಗೆ ತಲುಪಿಸುವ ಟೆಂಡರನ್ನು ಐಡಿಯಾ ಇನ್‌ಫಿನಿಟಿ ಐಟಿ ಸೊಲ್ಯೂಶನ್ಸ್ ವಹಿಸಿಕೊಂಡಿದೆ.
Advertisement
ಎಟಿಪಿ ಕೇಂದ್ರದ ನಿರ್ವಹಣೆಯ ಜವಾಬ್ದಾರಿ ಈ ಖಾಸಗಿ ಸಂಸ್ಥೆಯದ್ದು. ಭದ್ರತೆಯನ್ನು ಕೂಡ ಅದೇ ನಿರ್ವಹಿಸಬೇಕು. ಪ್ರತಿ ದಿನ ಸಂಗ್ರಹವಾಗುವ ಮೊತ್ತವನ್ನು ಸಂಜೆ ಮೆಸ್ಕಾಂ ಕಚೇರಿಗೆ ತಲುಪಿಸಬೇಕಾಗುತ್ತದೆ. ಕಳವು ನಡೆದರೆ ಅದರ ಹೊಣೆಯೂ ಗುತ್ತಿಗೆದಾರ ಸಂಸ್ಥೆಯದೇ.
ಸಿಸಿ ಕೆಮರಾ ಮತ್ತು ಅಲರಾಂ ಸಿಸ್ಟಮ್ ನಿರ್ಮಾಣ ಹಂತದಲ್ಲಿಯೇ ಜೋಡಿಸಿದ (ಇನ್‌ಬಿಲ್ಟ್) ಆಧುನಿಕ ಎಟಿಪಿ ಯಂತ್ರಗಳು ಇತ್ತೀಚೆಗೆ ಮಾರುಕಟ್ಟೆಗೆ ಬಂದಿದ್ದು, ಅವನ್ನು ಅಳವಡಿಸುವಂತೆ ಸೂಚಿಸಲಾಗಿದೆ. ಎಲ್ಲೆಲ್ಲಿ ಅಳವಡಿಸಲಾಗಿದೆ ಎನ್ನುವ ಮಾಹಿತಿ ಇಲ್ಲ ಎಂದು ಮೆಸ್ಕಾಂ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಮೆಸ್ಕಾಂ ಎಟಿಪಿಗಳಿಂದ ಹಣ ಕಳವು ಆಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಸಿಸಿ ಕೆಮರಾ ಮತ್ತು ಅಲಾರಂ ಸಿಸ್ಟಂ ಅಳವಡಿಸುವಂತೆ ಈಗಾಗಲೇ ಗುತ್ತಿಗೆದಾರ ಸಂಸ್ಥೆಗೆ ಸೂಚಿಸಲಾಗಿದೆ. ಈಗ ಮತ್ತೆ ಈ ಬಗ್ಗೆ ನೋಟಿಸ್ ನೀಡಲಾಗುವುದು.– ಮಂಜಪ್ಪ, ಸೂಪರಿಂಟೆಂಡೆಂಟ್ ಎಂಜಿನಿಯರ್, ಮೆಸ್ಕಾಂ – ಹಿಲರಿ ಕ್ರಾಸ್ತಾ