Advertisement

ಕನಿಷ್ಠ ಸಿಬಂದಿಯಿಂದ ಮಳೆಗಾಲದ ಸಿದ್ಧತೆಗೆ ಮುಂದಾದ ಮೆಸ್ಕಾಂ

12:28 AM Apr 18, 2020 | Sriram |

 ವಿಶೇಷ ವರದಿ-ಮಂಗಳೂರು: ಲಾಕ್‌ಡೌನ್‌ ನಡುವೆ ಮೆಸ್ಕಾಂ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನಿರಂತರ ನಿಗಾ ವಹಿಸುತ್ತಿದೆ. ಜತೆಗೆ ಮಳೆಗಾಲ ಪೂರ್ವದ ಸಿದ್ಧತಾ ಕಾರ್ಯಗಳನ್ನು ಕನಿಷ್ಠ ಸಂಖ್ಯೆಯ ಸಿಬಂದಿಯಿಂದಲೇ ನಡೆಸಲು ಮುಂದಾಗಿದೆ.

Advertisement

ಲಾಕ್‌ಡೌನ್‌ ಅನಂತರ ವಾಣಿಜ್ಯ ಮತ್ತು ಕೈಗಾರಿಕೆಗಳ ವಿದ್ಯುತ್‌ ಬಳಕೆ ಶೇ. 50ರಿಂದ 60ರಷ್ಟು ಕುಸಿದಿದೆ.

ಆದರೆ ಗೃಹ ಮತ್ತು ಕೃಷಿ ಉದ್ದೇಶದ ಬಳಕೆ ಹೆಚ್ಚಾಗಿದೆ. ಪ್ರಸ್ತುತ ಮೆಸ್ಕಾಂನ ಕೆಲವು ಕಚೇರಿಗಳಲ್ಲಿ ಶೇ.50ರಷ್ಟು ಸಿಬಂದಿಯ ಸೇವೆಯನ್ನಷ್ಟೇ ಪಡೆಯಲಾಗುತ್ತಿದೆ. ಅದೂ ಪಾಳಿಯ ಆಧಾರದಲ್ಲಿ. ಆದರೆ ಲೈನ್‌ಮನ್‌ಗಳು ಶೇ. 90ರಷ್ಟು ಕರ್ತವ್ಯದಲ್ಲಿದ್ದಾರೆ. ಸರಬರಾಜಿನಲ್ಲಿ ವ್ಯತ್ಯಯ ಉಂಟಾದರೆ ಮನೆಗಳಲ್ಲಿ, ಮುಖ್ಯವಾಗಿ ಆಸ್ಪತ್ರೆಗಳಿಗೆ ತೀವ್ರ ತೊಂದರೆಯಾಗುವುದರಿಂದ ನಿರಂತರ ವಿದ್ಯುತ್‌ ಪೂರೈಕೆಗೆ ಆದ್ಯತೆ ನೀಡಲಾಗುತ್ತಿದೆ.

ಗ್ಯಾಂಗ್‌ಮನ್‌ ನಿಯೋಜನೆ
ಈ ಬಾರಿಯೂ ಮಳೆಗಾಲದ ಸಿದ್ಧತೆ ಗಾಗಿ ಹೊರಗುತ್ತಿಗೆಯಲ್ಲಿ ಗ್ಯಾಂಗ್‌ಮನ್‌ ನಿಯೋಜನೆ ನಡೆಯುತ್ತಿದೆ. ಮರಗಳ ಕೊಂಬೆ ತುಂಡರಿಸುವುದು, ಅಪಾಯ ಕಾರಿಯಾಗಿರುವ ತಂತಿಗಳ ಬದಲಾವಣೆ ಇತ್ಯಾದಿ ಕೆಲಸಗಳಿಗೆ ಮುಂದಿನ ವಾರ ಚಾಲನೆ ದೊರೆಯಲಿದೆ. ಕಡಿಮೆ ಸಿಬಂದಿ ಬಳಸಿ ತೀರಾ ಅಗತ್ಯದ ಕೆಲಸ ಮಾತ್ರ ನಡೆಸಲು ನಿರ್ಧರಿಸಲಾಗಿದೆ.

ಸಲಕರಣೆ ಕೊರತೆ ಇಲ್ಲ

ಮೆಸ್ಕಾಂಗೆ ಅಗತ್ಯ ಸಲಕರಣೆಗಳ ಕೊರತೆ ಸದ್ಯಕ್ಕಿಲ್ಲ. ಕಳೆದ ವಾರ ಟ್ರಾನ್ಸ್‌ಫಾರ್ಮರ್‌ಗಳ ಅಗತ್ಯವಿದ್ದ ಸಂದರ್ಭದಲ್ಲಿ ಮೆಸ್ಕಾಂ ತನ್ನ ಲಾರಿಗಳನ್ನೇ ಬಳಸಿ 300 ಟ್ರಾನ್ಸ್‌ ಫಾರ್ಮರ್‌ಗಳನ್ನು ಬೆಂಗಳೂರಿನಿಂದ ತರಿಸಿದೆ.

ಬಿಲ್‌ ಪಾವತಿಗೆ ವಿನಾಯಿತಿ ಇಲ್ಲ
ಲಾಕ್‌ಡೌನ್‌ನಿಂದ ಗ್ರಾಹಕರು ತೊಂದರೆಗೊಳಗಾಗಿದ್ದು, ಈಗ ಬಿಲ್ಲಿಂಗ್‌ ಮಾಡುತ್ತಿಲ್ಲ. ಈ ಹಿಂದಿನ ಮೂರು ತಿಂಗಳುಗಳ ಸರಾಸರಿಯನ್ನು ಆಧರಿಸಿ ಈ ತಿಂಗಳ ಬಿಲ್‌ ಪಾವತಿಸಲು ಅವಕಾಶ ನೀಡಲಾಗಿದೆ. ಹೆಚ್ಚಿನ ಗ್ರಾಹಕರು ಹೀಗೆ ಪಾವತಿ ಮಾಡುತ್ತಿದ್ದಾರೆ. ಆದರೆ ವಿದ್ಯುತ್‌ ಬಿಲ್‌ ಪಾವತಿಗೆ ಸರಕಾರ ವಿನಾಯಿತಿ ನೀಡಿಲ್ಲ ಎಂದು ಮೆಸ್ಕಾಂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Advertisement

ತುರ್ತು ಅಗತ್ಯ ಕಾಮಗಾರಿ ಮಾತ್ರ
ಮೆಸ್ಕಾಂ ಮಿತ ಸಿಬಂದಿಯ ಮೂಲಕ ಗರಿಷ್ಠ ಸೇವೆ ನೀಡುತ್ತಿದೆ. ಹೆಚ್ಚಿನ ಗ್ರಾಹಕರು ಮನೆಯಲ್ಲಿ ಇರುವುದರಿಂದ ಅಡೆತಡೆ ಇಲ್ಲದೆ ವಿದ್ಯುತ್‌ ಪೂರೈಕೆ ಅವಶ್ಯವಾಗಿದೆ. ಪ್ರಸ್ತುತ ಹೊಸ, ದೀರ್ಘ‌ಕಾಲೀನ ಕಾಮಗಾರಿ ಕೈಗೆತ್ತಿಕೊಳ್ಳದೆ ತುರ್ತು ಕೆಲಸಗಳನ್ನು ಮಾತ್ರ ನಡೆಸಲಾಗುತ್ತಿದೆ. ಮಳೆಗಾಲದ ಸಿದ್ಧತಾ ಕಾರ್ಯಗಳು ಮುಂದಿನ ವಾರದಿಂದ ಆರಂಭವಾಗಲಿವೆ.
 - ಸ್ನೇಹಲ್‌, ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ

Advertisement

Udayavani is now on Telegram. Click here to join our channel and stay updated with the latest news.

Next